ADVERTISEMENT

ಮೋದಿ ಪ್ರಧಾನಿ ಅಭ್ಯರ್ಥಿ: ನಾಯಕರು ಏನಂತಾರೆ?

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 8:52 IST
Last Updated 14 ಸೆಪ್ಟೆಂಬರ್ 2013, 8:52 IST

ಮೋದಿಗೆ ಆಯ್ಕೆ ಜನರ ಆಸೆಯೂ ಆಗಿದೆ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು  ಘೋಷಣೆ ಮಾಡಿರುವುದಕ್ಕೆ ಮಾಜಿ ಸಚಿವ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ಕೆ. ಬೆಳ್ಳುಬ್ಬಿ ಸಂತಸ ವ್ಯಕ್ತಪಡಿಸಿದ್ದಾರೆ.

ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿರುವುದು ಕೇವಲ ಬಿಜೆಪಿ ಪಕ್ಷದ ತೀರ್ಮಾನ ಅಲ್ಲ. ಅದು ದೇಶದ ಜನರ ಭಾವನೆಯೂ ಆಗಿದೆ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಯುಪಿಎ ಸರಕಾರ ದೇಶದ ಗಡಿಗಳ ಭದ್ರತೆ, ಆರ್ಥಿಕ ವ್ಯವಸ್ಥೆಯಲ್ಲಿ ವಿಫಲವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಕಳೆದ ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಗುಜರಾತ ರಾಜ್ಯ ಸಾಕಷ್ಟು ಅಭಿವೃದ್ಧಿ ಕಂಡಿದೆ. ಅಂತಹ ಅಭಿವೃದ್ಧಿ ಕಾರ್ಯಗಳನ್ನು ದೇಶದ ಜನರು ಬಯಸುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 
-ಎಸ್‌.ಕೆ. ಬೆಳ್ಳುಬ್ಬಿ ಮಾಜಿ ಸಚಿವ, ಬಿಜೆಪಿ  ಜಿಲ್ಲಾ ಘಟಕದ ಅಧ್ಯಕ್ಷ

ಕೂಸು ಹುಟ್ಟುವ ಮೊದಲೇ ಕುಲಾಯಿ
‘ಕೂಸು ಹುಟ್ಟುವ ಮೊದಲೇ ಕುಲಾಯಿ’ ಹೊಲಿಸಿದಂತಾಗಿದೆ ಬಿಜೆಪಿ ಪರಿಸ್ಥಿತಿ. ಬಿಜೆಪಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಘೋಷಣೆ ಮಾಡಿರುವುದು ಯಶಸ್ವಿಯಾಗಲಾರದು.
ನರೇಂದ್ರ ಮೋದಿ ಗುಜರಾತ್‌ ರಾಜ್ಯಕ್ಕೆ ಸೀಮಿತವಾಗಿರುವ ವ್ಯಕ್ತಿ. ಅಲ್ಲಿ ಅಭಿವೃದ್ಧಿ ಮಾಡಿರಬಹುದು. ಅಲ್ಲಿ ಅವರು ಪ್ರಭಾವಿಶಾಲಿಯಾಗಿರಬಹುದು. ಆದರೆ ಇಡೀ ದೇಶದಾದ್ಯಂತ ಅವರ ಪ್ರಭಾವ ಸೊನ್ನೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಮೋದಿ ಪ್ರಭಾವ ಎಳ್ಳಷ್ಟು ಇಲ್ಲ. ಅಲ್ಲದೇ ಬಿಜೆಪಿಯಲ್ಲಿಯೇ ಪ್ರಧಾನಿ ಪಟ್ಟಕ್ಕಾಗಿ ಸ್ಪರ್ಧೆ ಏರ್ಪಟ್ಟಿದೆ. ಎಲ್‌.ಕೆ.ಅಡ್ವಾಣಿ ಹಾಗೂ ಸುಷ್ಮಾ ಸ್ವರಾಜ್‌ ಮೋದಿ ಬಗ್ಗೆ ಸಂಪೂರ್ಣ ಅಸಮಾಧಾನಗೊಂಡಿದ್ದಾರೆ. ಹೀಗಿದ್ದಾಗ ನರೇಂದ್ರ ಮೋದಿ ಮೋಡಿ ಕೇವಲ ಗುಜರಾತಗೆ ಮಾತ್ರ ಸೀಮಿತ.
-ಎಂ.ಸಿ.ಮನಗೂಳಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ, ಮಾಜಿ ಸಚಿವ

ಸ್ವಾಗತಾರ್ಹ
ಬಿಜೆಪಿ ಪ್ರಧಾನಿ ಅಭ್ಯರ್ಥಿಯನ್ನಾಗಿ ನರೇಂದ್ರ ಮೋದಿ ಅವರ ಹೆಸರನ್ನು ಘೋಷಿಸಿರುವುದು ಸ್ವಾಗತಾರ್ಹ. ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ.
-ರಮೇಶ ಜಿಗಜಿಣಗಿ, ಬಿಜೆಪಿ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT