
ವಿಜಾಪುರ: ಪಾಕಿಸ್ತಾನ ಮತ್ತು ಚೀನಾ ವಿರುದ್ಧದ ಯುದ್ಧದಲ್ಲಿ ಬಳಸಲಾಗಿದ್ದ ಬ್ರಿಟಿಷರ ಕಾಲದ `ಹೌಇಟ್ಜರ್ ಗನ್~ ಅನ್ನು ಇಲ್ಲಿಯ ಸೈನಿಕ ಶಾಲೆಗೆ ತರಲಾಗಿದ್ದು, ಏರ್ ವೈಸ್ ಮಾರ್ಷಲ್ ಎಂ.ಕೆ. ಮಲಿಕ್ ಶುಕ್ರವಾರ ಅದನ್ನು ಅನಾವರಣಗೊಳಿಸಿದರು.
`5.5 ಇಂಚು ವ್ಯಾಸದ ಕೊಳವೆ ಇರುವ ಈ ಗನ್ ಅನ್ನು ಬ್ರಿಟಿಷರು 1942ರಲ್ಲಿ ಸೇನೆಗೆ ಸೇರ್ಪಡೆ ಮಾಡಿದ್ದರು. ಇದು ಸೈನಿಕ ಶಾಲೆಯ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ~ ಎಂದು ಅವರು ಹೇಳಿದರು.
`ಭಾರತೀಯ ಸೇನಾ ಪಡೆಯು 1947, 48, 1965 ಮತ್ತು 1971ರಲ್ಲಿ ನಡೆದ ಯುದ್ಧಗಳಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಉಪಯೋಗಿಸಿತ್ತು. 1962 ರ ಇಂಡೊ- ಚೀನಾ ಯುದ್ಧದಲ್ಲೂ ಇದನ್ನು ಪ್ರಯೋಗಿಸಲಾಗಿತ್ತು~ ಎಂದು ಸೈನಿಕ ಶಾಲೆಯ ಪ್ರಾಚಾರ್ಯ ಕರ್ನಲ್ ಆರ್. ಬಾಲಾಜಿ ಹೇಳಿದರು.
`1948ರಲ್ಲಿ ಹುತಾತ್ಮರಾದ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮವನ್ನು ಸಾಗಿಸಲು ಈ ಗನ್ ವಾಹಕವಾಗಿ ಬಳಕೆಯಾಗಿತ್ತು. ಪಂಜಾಬಿನ ಖೇಮ್‌ಕರಣ ವಿಭಾಗದಲ್ಲಿ ವೈರಿ ಪಡೆಯ ಟ್ಯಾಂಕರ್‌ಗಳನ್ನು ಹೊಡೆದು ಉರುಳಿಸುವಲ್ಲಿ ಹೌಇಟ್ಜರ್ ಗನ್ ತುಂಬಾ ಯಶಸ್ವಿಯಾಗಿದೆ. 1998 ರ ನಂತರ ಈ ಗನ್‌ಗಳ ಉಪಯೋಗ ನಿಲ್ಲಿಸಲಾಗಿದೆ~ ಎಂದು ಅವರು ವಿವರಣೆ ನೀಡಿದರು.
ವಿಜಾಪುರ ಸೈನಿಕ ಶಾಲೆಯ ಸ್ಥಳೀಯ ಆಡಳಿತ ಮಂಡಳಿಯ ಅಧ್ಯಕ್ಷರೂ ಆಗಿರುವ ಬೆಂಗಳೂರು ವಾಯುಪಡೆ ಕೇಂದ್ರದ ಏರ್ ವೈಸ್ ಮಾರ್ಷಲ್ ಮಲಿಕ್ ನಂತರ ಸಭೆ ನಡೆಸಿ ಸೈನಿಕ ಶಾಲೆಯ ಆಡಳಿತಾತ್ಮಕ ಹಾಗೂ ಶೈಕ್ಷಣಿಕ ವಿಷಯಗಳ ಬಗ್ಗೆ ಚರ್ಚಿಸಿದರು.
ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ಪ್ರದೀಪ್ ರಾಜನಾಳ, ಕೊಡಗು ಸೈನಿಕ ಶಾಲೆಯ ಪ್ರಾಚಾರ್ಯ ಎಂ.ಟಿ. ರಮೇಶ, ಜಿಲ್ಲಾಧಿಕಾರಿ ಶಿವಯೋಗಿ ಕಳಸದ, ಸೇನೆಯ ಅಧಿಕಾರಿ ಬಿ.ಸಿ.ಎಸ್. ಭಾರತಿ, ಸೈನಿಕ ಶಾಲೆಯ ಮುಖ್ಯ ಶಿಕ್ಷಕ ಲೆಫ್ಟಿನೆಂಟ್ ಕರ್ನಲ್ ರಿಷಿರಾಜ್ ಸಿಂಗ್, ಕುಲಸಚಿವ ವಿಂಗ್ ಕಮಾಂಡರ್ ಈ. ಶ್ರಿನಿವಾಸ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.