ADVERTISEMENT

ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2011, 8:00 IST
Last Updated 22 ಮಾರ್ಚ್ 2011, 8:00 IST
ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಸಿದ್ಧತೆ
ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಸಿದ್ಧತೆ   

ಸಿಂದಗಿ: ಶ್ರೀರಂಗಪಟ್ಟಣ-ಬೀದರ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಲಾಗುವುದು. ಜೊತೆಗೆ ಕುಮಟಾ-ಅನಂತಪೂರ ರಸ್ತೆ ಕೂಡ ರಾಷ್ಟ್ರೀಯ ಹೆದ್ದಾರಿಯನ್ನಾಗಿಸಲು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಆದಷ್ಟು ಕೂಡಲೇ  ಕಾಮಗಾರಿಗಳು ಪ್ರಾರಂಭಗೊಳ್ಳಲಿವೆ ಎಂದು ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಭರವಸೆ ನೀಡಿದರು.

ಸೋಮವಾರ ಪಟ್ಟಣದಲ್ಲಿ ರೂ.50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರವಾಸಿ ಮಂದಿರದ ಹೆಚ್ಚುವರಿ ಕಟ್ಟಡದ ಉದ್ಘಾಟನೆ ನೆರವೇರಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ದಕ್ಷಿಣ ಭಾರತದಲ್ಲಿಯೇ ಹೆಚ್ಚಿನ ರಾಷ್ಟ್ರೀಯ ಹೆದ್ದಾರಿಯನ್ನೊಳಗೊಂಡ ರಾಜ್ಯ ಕರ್ನಾಟಕವಾಗಿದೆ. ಆದಾಗ್ಯೂ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿನ ರಸ್ತೆಗಳು ರಾಷ್ಟ್ರೀಯ ಹೆದ್ದಾರಿಯನ್ನಾಗಿಸಲು ತಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಒಟ್ಟು 4700 ಕಿ.ಮಿ ರಾಷ್ಟ್ರೀಯ ಹೆದ್ದಾರಿಯಿದೆ.ಇದರಲ್ಲಿ ರಾಷ್ಟ್ರೀಯ ಹೆದ್ದಾರಿ ನಿಗಮವು 2ಸಾವಿರ ಕಿ.ಮಿ ಪ್ರತ್ಯೇಕಿಸಿ ಅದನ್ನು ಆರು ಪಥದ ರಸ್ತೆಯನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಈಗಾಗಲೇ ರಸ್ತೆಗಳ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಪ್ರಸ್ತುತ ರಾಜ್ಯ ಬಜೆಟ್‌ನಲ್ಲಿ ರಸ್ತೆಗಳ ನಿರ್ಮಾಣ ಒಳಗೊಂಡಂತೆ ಲೋಕೋಪಯೋಗಿ ಇಲಾಖೆ ಕಾಮಗಾರಿಗಳಿಗಾಗಿ 4,300ಕೋಟಿ ಕಾಯ್ದಿರಿಸಲಾಗಿದೆ. ಅದೇ ರೀತಿ ವಿಶ್ವ ಬ್ಯಾಂಕ್ ನೆರವಿನಿಂದ ರೂ.1500ಕೋಟಿ ವೆಚ್ಚದಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ವಿಪರೀತ ಮಳೆಯಿಂದಾಗಿ ಹಾಳಾದ ರಸ್ತೆ ಕಾಮಗಾರಿ ಏಪ್ರಿಲ್‌ನಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದರು.

ಮುಂದಿನ ಎರಡು ವರ್ಷಗಳ ಅವಧಿಯಲ್ಲಿ 13 ಸಾವಿರ ಕಿ.ಮಿ ಪೈಕಿ ಆರು ಸಾವಿರ ಕಿ.ಮಿ ಗುಣಮಟ್ಟದ ರಸ್ತೆಗಳನ್ನು ನಿರ್ಮಾಣಗೊಳಿಸುವ ಗುರಿ ಹೊಂದಲಾಗಿದೆ. ಸಿಂದಗಿ ಮತಕ್ಷೇತ್ರದಲ್ಲಿ 2008-09ನೇ ಸಾಲಿನಲ್ಲಿ ರೂ.10.23ಕೋಟಿ, 2009-10 ನೇ ಸಾಲಿನಲ್ಲಿ 07.60ಕೋಟಿ, 2010-11ನೇ ಸಾಲಿನಲ್ಲಿ 11.47ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಒಟ್ಟು 598 ಕಿ.ಮಿ ರಸ್ತೆಯಲ್ಲಿ 487ಕಿ.ಮಿ ಸಾಧನೆ ಮಾಡಲಾಗಿದೆ. ಅಲ್ಲದೇ ಸಿಂದಗಿ ಮತಕ್ಷೇತ್ರದ ಶಾಸಕರು 2011-12ನೇ ಸಾಲಿಗಾಗಿ ರೂ.20 ಕೋಟಿ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದರು.

ವಿಜಾಪುರ ಜಿಲ್ಲೆಯಲ್ಲಿ ರೂ. 44.40 ಕೋಟಿ ವೆಚ್ಚದಲ್ಲಿ ಮನಗೂಳಿ-ತಾಳಿಕೋಟೆ ಮತ್ತು ತಾಳಿಕೋಟೆ-ದೇವಾಪೂರ ರಸ್ತೆ ಕಾಮಗಾರಿ ಕೈಗೊಂಡಿದೆ.
ಕೆ.ಆರ್.ಡಿ.ಸಿ.ಎಲ್ ಅಡಿ ಒಟ್ಟು ಜಿಲ್ಲೆಯ 17 ಸೇತುವೆಗಳ ನಿರ್ಮಾಣಕ್ಕಾಗಿ ರೂ.21.96 ಕೋಟಿ ಬಿಡುಗಡೆಗೊಳಿಸಲಾಗಿದೆ. ಇವುಗಳಲ್ಲಿ ಈಗಾಗಲೇ 13 ಸೇತುವೆ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ತಿಳಿಸಿದರು.

ಮಿನಿ ವಿಧಾನಸೌಧಕ್ಕೆ ರೂ.1.50 ಕೋಟಿ:  ಸಿಂದಗಿಯಲ್ಲಿನ ಮಿನಿವಿಧಾನಸೌಧ ಕಟ್ಟಡದಲ್ಲಿಯೇ ಎರಡನೇ ಅಂತಸ್ತಿನಲ್ಲಿ ಒಂದೂವರೆ ಕೋಟಿ ವೆಚ್ಚದಲ್ಲಿ ಹೆಚ್ಚುವರಿ ಕಟ್ಟಡಕ್ಕಾಗಿ ಶಾಸಕರು ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದರು.  ಬಿಜೆಪಿ ಬಣವೊಂದೇ: ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ಉದಾಸಿ ‘ನಮ್ಮ ಪಕ್ಷದಲ್ಲಿ ಯಾವುದೇ ಬಣವಿಲ್ಲ. ಇರುವದೊಂದೇ ಬಣ ಅದು ಬಿಜೆಪಿ ಬಣ. ನಮ್ಮಲ್ಲಿ ಬಣಗಳನ್ನಾಗಿ ಮಾಡುತ್ತಿರುವುದು ಮಾಧ್ಯಮ ಸೃಷ್ಠಿಯೇ ವಿನಾ ಮತ್ತೇನೂ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ರಮೇಶ ಭೂಸನೂರ, ಮುಖ್ಯ ಎಂಜನಿಯರ್ ಎಸ್.ಎಸ್. ಖಣಗಾವಿ, ಅಧೀಕ್ಷಕ ಅಭಿಯಂತರು ವಿನಾಯಕ ಸುಗೂರ, ಕಾರ್ಯನಿರ್ವಾಹಕ ಅಭಿಯಂತರು ರಾಜಶೇಖರ ಯಡಹಳ್ಳಿ, ಎಇಇ ಅಮರೀಶ ಅಳಗುಂಡಗಿ, ಆರ್.ಆರ್. ಕತ್ತಿ, ಸಿ.ಕೆ. ಹರಿಹರ, ಎಂ.ಸಿ. ಯರನಾಳ, ಗುತ್ತಿಗೆದಾರ ಸುನೀಲ ಹಳ್ಳೂರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.