ADVERTISEMENT

ರಾಮದೇವ್ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 6:50 IST
Last Updated 9 ಜೂನ್ 2011, 6:50 IST

ವಿಜಾಪುರ: ಬಾಬಾ ರಾಮ್‌ದೇವ್ ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಅಣತಿಯಂತೆ ಕಪ್ಪು ಹಣದ ನೆಪದಲ್ಲಿ ದೇಶದಲ್ಲಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದವರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಇಲ್ಲಿಯ ಗಾಂಧಿ ಚೌಕ್‌ನಲ್ಲಿ ಬಾಬಾ ರಾಮ್‌ದೇವ್ ಅವರ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಜ್ಯೋತಿರಾಮ ಪವಾರ ಮಾತನಾಡಿ, ರಾಮ್‌ದೇವ್ ಬಾಬಾ ಅವರು ಕೋಮುವಾದಿ ಶಕ್ತಿಗಳೊಂದಿಗೆ ಸೇರಿಕೊಂಡು ಕೇಂದ್ರ ಸರ್ಕಾರದ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಹಿಂದೆ ಒಬ್ಬ ಸನ್ಯಾಸಿಯಾಗಿದ್ದ ರಾಮ್‌ದೇವ್ ಅವರು ಈಗ ಸಾವಿರಾರು ಕೋಟಿ ರೂಪಾಯಿ ಆಸ್ತಿಯ ಒಡೆಯರಾಗಿದ್ದಾರೆ. ಅವರಿಗೆ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.

ವೈಜನಾಥ ಕರ್ಪೂರಮಠ, ಡಾ.ಗಂಗಾಧರ ಸಂಬಣ್ಣಿ, ವಸಂತ ಹೊನಮೋಡೆ, ಸುಭಾಸ ಕಾಲೇಬಾಗ ಮಾತನಾಡಿದರು.

ಜಿ.ಪಂ. ಮಾಜಿ ಸದಸ್ಯ ಸುಭಾಸ ತಳಕೇರಿ, ರಾಜೇಶ್ವರಿ ಚೋಳಕೆ, ಬಿ.ಎಸ್. ಬ್ಯಾಳಿ, ಆರ್.ಆರ್. ಹಂಚಿನಾಳ, ಕೆ.ಆರ್. ಇಮ್ಮನದ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸಂತಸ
ಮುದ್ದೇಬಿಹಾಳ:
ಪ್ರಭುಲಿಂಗ ನಾವದಗಿ ಅವರನ್ನು ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿ ನೇಮಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಗೌರವ ಅಧ್ಯಕ್ಷ, ಮಾಜಿ ಶಾಸಕ ಎಮ್.ಎಮ್. ಸಜ್ಜನ ಸ್ವಾಗತಿಸಿದ್ದಾರೆ.

ಉತ್ತರ ಕರ್ನಾಟಕದಲ್ಲಿಯೇ ಯಾರೂ ಈ ಹುದ್ದೆಯನ್ನು ಈ ಹಿಂದೆ ಅಲಂಕರಿಸಿರಲಿಲ್ಲ. ಅವರಿಂದ ಮುದ್ದೇಬಿಹಾಳಕ್ಕೆ ಹಾಗೂ ಜಿಲ್ಲೆಗೆ ಕೀರ್ತಿ ಬಂದಿದೆ ಎಂದು ಅವರು ತಿಳಿಸಿದರು.  ವಿವಿಧ ಸಂಘ ಸಂಸ್ಥೆಗಳು ಪ್ರಭುಲಿಂಗ ನಾವದಗಿ ಅವರನ್ನು ಅಭಿನಂದಿಸಿವೆ.

ಉದ್ಯಮಗಳು ಬೆಳೆಯಬೇಕು: ಇಲ್ಲೂರ
ಮುದ್ದೇಬಿಹಾಳ:
ತಂತ್ರಜ್ಞಾನ ಬಹಳಷ್ಟು ಮುಂದುವರೆದಿದ್ದು, ಮನೆಯಲ್ಲಿ ಕುಳಿತೇ ಪ್ರಪಂಚದ ಯಾವುದೇ ಕಂಪೆನಿಯ ಶೇರುಗಳನ್ನು ಕೊಳ್ಳುವ, ಮಾರಾಟ ಮಾಡುವ ವ್ಯವಸ್ಥೆ ಬಂದಿದೆ, ಈ ಸ್ಪರ್ಧೆಯಲ್ಲಿ ನಾವೂ ಜ್ಞಾನ ಪಡೆದು ಮುನ್ನಡೆಯುವ ಅವಶ್ಯಕತೆಯಿದೆ ಎಂದು ಪಟ್ಟಣದ ಗಣ್ಯ ಉದ್ಯಮಿ ವಸಂತ ಪಿ.ಇಲ್ಲೂರ ಹೇಳಿದರು.
ಅವರು ಬುಧವಾರ ಪಟ್ಟಣದಲ್ಲಿ ಆರಂಭಿಸಲಾದ ಇಂಡಿಯಾ ಇನ್ಫೋಲೈನ್ ಶೇರು ಮಾರುಕಟ್ಟೆ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ನಿರ್ದೇಶಕ ಪ್ರಭುಲಿಂಗ ನಂದೆಪ್ಪನವರ, ಈ ಭಾಗದಲ್ಲಿ ಶೇರು ಮಾರುವ, ಕೊಳ್ಳುವವರ ಸಂಖ್ಯೆ ಸಾಕಷ್ಟಿದ್ದು, ಅವರು ತಮ್ಮ ನಿತ್ಯ ವ್ಯವಹಾರಗಳಿಗೆ ಅನುಕೂಲ ಆಗುವಂತೆ ಸಂಸ್ಥೆಯನ್ನು ಒಂದು ಮಾದರಿ ಕೇಂದ್ರದಂತೆ ರೂಪಿಸುವ ಉದ್ದೇಶ ಇದೆ ಎಂದರು.

ಉತ್ತರ ಕರ್ನಾಟಕದಲ್ಲಿ ಈ ಮೂಲಕ ಆನ್‌ಲೈನ್ ವ್ಯವಹಾರಗಳು ಹಾಗೂ ಉದ್ಯಮಗಳು ಇಲ್ಲಿಯೇ ಸ್ಥಾಪನೆ ಯಾಗಲು ಅನುಕೂಲ ಆಗುತ್ತದೆ ಎಂದವರು ಹೇಳಿದರು.

ಕಾರ್ಯಕ್ರಮದಲ್ಲಿ ಬಸವರಾಜ ನಾಗೂರ, ಬಸವರಾಜ ಕಂಠಿ, ರಿಯಾಜ ನಾಯ್ಕಡಿ, ಪಂಚಾಕ್ಷರಿ ಹಿರೇಮಠ, ದುಂಡಯ್ಯ ಹಿರೇಮಠ, ಉಮೇಶ ಕಂಠಿ, ಸದಾನಂದ ನಾಗಠಾಣ, ರವಿ ನಂದೆಪ್ಪನವರ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.