ADVERTISEMENT

ರೈತರಿಗೆ ಖುಷಿ ತಂದ ಕೃಷಿ ಮೇಳ

ವಿಜಾಪುರದಲ್ಲೂ ಅಂಜೂರ್‌, ನೋಣಿ ಬೆಳೆ

ಗಣೇಶ ಚಂದನಶಿವ
Published 6 ಜನವರಿ 2014, 5:32 IST
Last Updated 6 ಜನವರಿ 2014, 5:32 IST

ವಿಜಾಪುರ: ಸಮೀಪದ ಹಿಟ್ನಳ್ಳಿ ಕೃಷಿ ಕಾಲೇಜಿನಲ್ಲಿ ‘ವಿಜಾಪುರ ಕೃಷಿ ಮೇಳ’ ಆರಂಭಗೊಂಡಿದೆ. ವಾಡಿಕೆಯಂತೆ ಕ್ರಿಮಿನಾಶಕಗಳ ಘಾಟು ಇದ್ದರೂ ರೈತರಿಗೆ ಅಲ್ಪ ನೀರಿನಲ್ಲಿ ಬೇಸಾಯ ಮತ್ತು ಒಣಬೇಸಾಯ ಸೇರಿದಂತೆ ಹಲವು ಬಗೆಯ ಮಾಹಿತಿ ದೊರೆಯುತ್ತಿದೆ.

‘ಸುಸ್ಥಿರ ಆದಾಯಕ್ಕಾಗಿ ಒಣ ಬೇಸಾಯ ಪದ್ಧತಿಗಳು’ ಎಂಬುದು ಈ ಮೇಳದ ಧ್ಯೇಯ. ಆ ಬಗೆಗೆ ಪರಿಣಿತರು ಮಾರ್ಗದರ್ಶನ ನೀಡುತ್ತಿದ್ದಾರೆ.
ವಿಶಿಷ್ಟ ಹವಾಗುಣ ಹೊಂದಿರುವ ಜಿಲ್ಲೆಯಲ್ಲಿ ಅಂಜೂರ್‌, ಬಿಟ್‌ರೂಟ್‌, ಔಷಧೀಯ ಗುಣ ಹೊಂದಿರುವ ನೋಣಿ ಬೆಳೆಯನ್ನೂ ಬೆಳೆಯಬಹುದು ಎಂಬುದನ್ನು ರೈತರು ತೋರಿಸಿಕೊಟ್ಟಿದ್ದಾರೆ.

‘ಇಲ್ಲಿಯ ಭೂಮಿ ಮತ್ತು ಹವಾಗುಣಕ್ಕೆ ಅಂಜೂರ್‌ ಅತ್ಯುತ್ತಮ ಬೆಳೆ. ತಾಲ್ಲೂಕಿನ ತಿಡಗುಂದಿಯಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರದಲ್ಲಿ ಅಂಜೂರ್‌ ಬೆಳೆದಿದ್ದೇವೆ. ಉತ್ತಮ ಫಸಲು ಬರುತ್ತಿದೆ’ ಎಂದು ಈ ಕೇಂದ್ರ ಸಹಾಯಕ ಪ್ರಾಧ್ಯಾಪಕ ರಾಘವೇಂದ್ರ ಆಚಾರಿ ಹೇಳಿದರು.

‘ಎಂಟು ತಳಿಗಳಿದ್ದರೂ ಬಳ್ಳಾರಿ ಮತ್ತು ದಿನಕರ ತಳಿ ಉತ್ತಮ. ಒಣ ಬೇಸಾಯದಲ್ಲಿ ಬೆಳೆಯಬಹುದು. ಬೇಸಿಗೆ ಅವಧಿಯಲ್ಲಿ ಸ್ವಲ್ಪ ನೀರು ಕೊಡಬೇಕಾಗುತ್ತದೆ. 5–3 ಮೀಟರ್‌ ಅಂತರದಲ್ಲಿ ಒಂದು ಎಕರೆಗೆ 266 ಸಸಿ ನಾಟಿ ಮಾಡಬೇಕು. ನಮ್ಮಲ್ಲಿಯೇ ಈ ಸಸಿಗಳು ತಲಾ ರೂ.20ಕ್ಕೆ ಲಭ್ಯ (ಸಂಪರ್ಕ ಸಂಖ್ಯೆ 08352–235000/235002). ನಾಟಿಗೆ ಎಕರೆಗೆ ರೂ.50,000 ಖರ್ಚಾಗುತ್ತಿದ್ದು, ಮೂರು ವರ್ಷಗಳ ನಂತರ ಫಸಲು ಬರುತ್ತದೆ. ಹಸಿ ಹಣ್ಣಿಗೆ ಸ್ಥಳೀಯ ಮತ್ತು ಮಹಾನಗರಗಳಲ್ಲಿ ಬೇಡಿಕೆ ಇದ್ದು, ಎಕರೆಗೆ ರೂ.3ರಿಂದ ರೂ.4 ಲಕ್ಷ ವರೆಗೆ ಆದಾಯ ಬರುತ್ತದೆ. ಒಣ ದ್ರಾಕ್ಷಿ ತಯಾರಿಸುವಂತೆ ಅಂಜೂರ್‌ನ್ನು ಸಂಸ್ಕರಿಸಿ ಒಣಗಿಸಿ ಮಾರಾಟ ಮಾಡಿದರೆ ಲಾಭ ಹೆಚ್ಚು. ಆ ಸಂಸ್ಕರಣೆಯ ಸೌಲಭ್ಯ ಸ್ಥಳೀಯವಾಗಿ ಲಭ್ಯಇಲ್ಲ’ ಎಂದರು.

‘ಅಂಜೂರ್‌ ಬೆಳೆಯನ್ನು ಹೆಚ್ಚಾಗಿ ಬೆಳೆಯುವಂತೆ ರೈತರಿಗೆ ಉತ್ತೇಜನ ನೀಡುತ್ತಿದ್ದೇವೆ. ಪ್ರತಿ ವರ್ಷ ನಮ್ಮ ಕೇಂದ್ರದಿಂದ ಸರಾಸರಿ 3,000 ಸಸಿಗಳು ಮಾರಾಟವಾಗುತ್ತಿವೆ’ ಎಂದು ವಿವರಿಸಿದರು.

ಕೃಷ್ಣಾ ತೀರದಲ್ಲಿ ನೋಣಿ: ‘ನೋಣಿ’ ಇದು ಔಷಧಿಯ ಬೆಳೆ. ಶಿವಮೊಗ್ಗದಿಂದ 50 ಸಸಿಗಳನ್ನು ತಂದು ಜಮೀನಿನ ಬದುವಿನಲ್ಲಿ ನಾಟಿ ಮಾಡಿದ್ದೇನೆ. ಈಗ ಅವು ಕಾಯಿ ಬಿಡುತ್ತಿದ್ದು, ಶಿವಮೊಗ್ಗದಲ್ಲಿರುವ ಔಷಧಿ ತಯಾರಿಕೆಯ ಕಂಪನಿಯವರು ಖರೀದಿಸುತ್ತಾರೆ. ಯಾವುದೇ ಖರ್ಚಿಲ್ಲದೆ ಈ 50 ಗಿಡಗಳಿಂದ ವರ್ಷಕ್ಕೆ ರೂ.20,000 ಆದಾಯ ಬರುತ್ತಿದೆ ಎಂದು ಕೊಲ್ಹಾರದ ರೈತ ಸಿದ್ದು ಬಾಲಗೊಂಡ ಹೇಳಿದರು.

ಶಿವಮೊಗ್ಗದಲ್ಲಿಯೇ ರೂ.50 ದರದಲ್ಲಿ ಸಸಿಗಳು ದೊರೆಯುತ್ತವೆ. ಎರಡು ವರ್ಷದ ನಂತರ ಗಿಡದಲ್ಲಿ ಕಾಯಿ ಬಿಡುತ್ತಿದ್ದು, ನಿರ್ವಹಣೆಗೆ ಯಾವುದೇ ಖರ್ಚು ಮಾಡಬೇಕಿಲ್ಲ. ಆದರೆ, ಹೆಚ್ಚಿನ ಪ್ರಮಾಣದಲ್ಲಿ ಬೆಳೆದರೆ ಖರೀದಿದಾರರು ನಮ್ಮಲ್ಲಿಗೇ ಬರುತ್ತಾರೆ ಎಂಬುದು ಅವರ ಸಲಹೆ.

ಆಕರ್ಷಣೆ: ಶಿರಕನಹಳ್ಳಿಯ ಮಲ್ಲು ಅಡಿವೆಪ್ಪ ಲೋಣಿ, ಅಥರ್ಗಾದ ಸಿದ್ದಪ್ಪ ಮಲ್ಲಪ್ಪ ಗೋಟ್ಯಾಳ, ಅಜನಾಳದ ಶಿವಯೋಗಿ ಬಿರಾದಾರ ಅವರು ಬೆಳೆದಿರುವ ಗಣೇಶ ಮತ್ತು ಕೇಸರ ತಳಿಯ ದಾಳಿಂಬೆಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದು, ಅವು ಗಮನ ಸೆಳೆಯುತ್ತಿವೆ.

ಮಾಹಿತಿ ಕಣಜ: ಕೃಷಿ ಮೇಳದಲ್ಲಿ ಸಾವಯವ ಉತ್ಪನ್ನಗಳ ಮಾರಾಟ, ಕೃಷಿ ಉಪಕರಣ, ರಾಸಾಯನಿಕ ಗೊಬ್ಬರಗಳು, ವಿವಿಧ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಮಾಹಿತಿ, ಪ್ರಾತ್ಯಕ್ಷಿಕೆ, ಜೈವಿಕ ಗೊಬ್ಬರ, ಸಾವಯವ ಕೃಷಿ, ಪಶುಪಾಲನೆ, ಎರೆಗೊಬ್ಬರ, ಕೃಷಿ ಹವಾಮಾನ, ಹವಾಮಾನ ಆಧಾರಿತ ಬೆಳೆ, ಸಂರಕ್ಷಣಾ ಕೃಷಿ ಪದ್ಧತಿ, ಬರ ನಿರ್ವಹಣಾ ಕೃಷಿ ತಂತ್ರಜ್ಞಾನ, ಅಂತರ ಮತ್ತು ಮಿಶ್ರ ಬೆಳೆ ಪದ್ಧತಿ ಮತ್ತಿತರ ಬಗೆಯ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.