ADVERTISEMENT

‘ರೈತರ ಶ್ರಮಕ್ಕೆ ಸರ್ಕಾರ ಬೆಲೆ ನೀಡಲಿ’

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2017, 6:32 IST
Last Updated 25 ಡಿಸೆಂಬರ್ 2017, 6:32 IST

ದೇವರ ಹಿಪ್ಪರಗಿ: ರಾಷ್ಟ್ರೀಯ ವ್ಯಕ್ತಿಗಳ ಜನ್ಮದಿನವನ್ನು ಸರ್ಕಾರ ಆಚರಿಸುವಂತೆ, ಪ್ರತಿ ವರ್ಷದ ಡಿಸೆಂಬರ್ ತಿಂಗಳಲ್ಲಿ ಆಚರಿಸುವ 'ರೈತ ದಿನಾಚರಣೆ' ಯನ್ನು ಸರ್ಕಾರವೇ ಆಚರಿಸಿದ್ದಲ್ಲಿ ಸರ್ಕಾರಕ್ಕೂ ಬೆಲೆ, ರೈತರಿಗೂ ಹೆಮ್ಮೆ, ದಿನಾಚರಣೆಗೂ ಅರ್ಥ ಬರುತ್ತದೆ ಎಂದು ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಸಿ.ಕೆ.ಕುದರಿ ಅಭಿಪ್ರಾಯಪಟ್ಟರು.

ಪಟ್ಟಣದ ಕೃಷಿ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ದಿ.ಚರಣ ಸಿಂಗ್ ಅವರ ಜನ್ಮದಿನವನ್ನು ರೈತ ದಿನಾಚರಣೆಯನ್ನಾಗಿ ಆಚರಿಸುತ್ತಿರುವ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೇಶಕ್ಕೆ ಓದು ಬರಹ ಬಲ್ಲ ರೈತರ ಅಗತ್ಯವಿದ್ದು, ತಮ್ಮ ಮಕ್ಕಳಿಗೆ ಶಿಕ್ಷಣ ನೀಡಿ ಕೃಷಿಯಲ್ಲಿ ತೊಡಗಿಸಬೇಕು. ವೈಜ್ಞಾನಿಕ ತಂತ್ರಜ್ಞಾನ ಪದ್ಧತಿಯನ್ನು ಕೃಷಿಯಲ್ಲಿ ಅಳವಡಿಸಿಕೊಂಡಲ್ಲಿ ಹೆಚ್ಚು ಹೆಚ್ಚು ಇಳುವರಿ ಪಡೆಯುವಲ್ಲಿ ಯಶಸ್ವಿಯಾಗುತ್ತೇವೆ ಎಂದು ಹೇಳಿದರು.

ADVERTISEMENT

ಪ್ರತಿಯೊಬ್ಬ ರೈತರು ಕೃಷಿ ಅಧಿಕಾರಿ ಅಥವಾ ಕೇಂದ್ರಗಳಿಗೆ ಪದೇ ಪದೇ ಭೇಟಿ ನೀಡುವುದರಿಂದ ನೂತನ ಬೀಜ, ಗೊಬ್ಬರ, ಕ್ರಿಮೀನಾಶಕ, ಉಪಕರಣಗಳ ಬಳಕೆಯ ಬಗ್ಗೆ ಮಾಹಿತಿ ಪಡೆದು ಕೃಷಿ ಅಭಿವೃದ್ಧಿಯ ಜೊತೆಗೆ ತಮ್ಮ ಆರ್ಥಿಕ ಅಭಿವೃದ್ಧಿ ಗಳಿಕೆ ಮಾಡಿಕೊಳ್ಳಬಹುದು ಎಂದರು.

ಪ್ರತಿವರ್ಷ ಒಂದೇ ಧಾನ್ಯವನ್ನು ಜಮೀನಿನಲ್ಲಿ ಬಿತ್ತನೆ ಮಾಡುವುದರಿಂದ ಪೋಷಕಾಂಶಗಳ ಕೊರತೆಯಿಂದ ಇಳುವರಿ ಕಡಿಮೆಯಾಗಬಹುದು. ಅಥವಾ ಈ ವರ್ಷ ತೊಗರಿ ಬೆಳೆ ನಾಶವಾದಂತೆ ಬೆಳೆ ನಾಶವಾಗಿ ನಷ್ಟ ಅನುಭವಿಸುವಂತಾಗಬಹುದು. ಆದ್ದರಿಂದ ರೈತರು ಇದರ ಬಗ್ಗೆ ಮಾಹಿತಿ ಪಡೆದು ಬಿತ್ತನೆ ಮಾಡಬೇಕು ಎಂದು ಹೇಳಿದರು.

ಮಳೆ ಕೈಕೊಡುತ್ತಿರುವ ಇಂದಿನ ದಿನಗಳಲ್ಲಿ ಇತ್ತಿತ್ತಲಾಗಿ ಡ್ರಿಪ್ ಮೂಲಕ ತೊಗರಿ ಬೆಳೆಯುವ ನೂತನ ಪದ್ಧತಿ ಜಾರಿಯಲ್ಲಿದ್ದು, ಹೆಕ್ಟೆರಿಗೆ ಕನಿಷ್ಟ 20 ಕ್ವಿಂಟಲ್‌ನಷ್ಟು ಇಳುವರಿ ಪಡೆಯುವ ಸಾಧ್ಯತೆಯಿದೆ. ರೈತರು ಇದರ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ರೈತರಾದ ಅಬ್ದುಲ್ ಅಜೀಜ್ ಎಲಗಾರ, ರಾಜು ಸಿಂದಗೇರಿ ಮಾತನಾಡಿದರು. ಸಿದ್ದಪ್ಪ ದೇವಣಗಾಂವ, ಶಾಂತಗೌಡ ಬಿರಾದಾರ (ಗಬ್ಬೂರ), ಮಳಖೇಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಪಾಲ್ಗೊಂಡಿದ್ದರು. ಕೃಷಿ ಅಧಿಕಾರಿ ಎಸ್.ಡಿ.ಅವುಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ವಾಲಿ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.