ADVERTISEMENT

ವಿಜಯಪುರಕ್ಕೊಲಿಯುವುದೇ ಉಪ ಮುಖ್ಯಮಂತ್ರಿ ಪಟ್ಟ ?

ಕಾಂಗ್ರೆಸ್‌–ಜೆಡಿಎಸ್‌ ಪಾಳೆಯದಲ್ಲಿ ಗರಿಗೆದರಿದ ಚಟುವಟಿಕೆ; ಜಿಲ್ಲೆಗೆ ಎರಡು ಸಚಿವ ಸ್ಥಾನದ ನಿರೀಕ್ಷೆ..!

ಡಿ.ಬಿ, ನಾಗರಾಜ
Published 20 ಮೇ 2018, 12:50 IST
Last Updated 20 ಮೇ 2018, 12:50 IST

ವಿಜಯಪುರ: ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಿಗೆ; ಜಿಲ್ಲೆಯ ಜೆಡಿಎಸ್‌, ಕಾಂಗ್ರೆಸ್‌ ಪಾಳೆಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಸೋಮವಾರ (ಮೇ 21) ಮುಖ್ಯಮಂತ್ರಿಯಾಗಿ ಎಚ್‌.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದ್ದು, ಇವರ ಜತೆಯೇ ಜಿಲ್ಲೆಯ ಇಬ್ಬರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಅವಕಾಶಗಳ ಸಾಧ್ಯತೆ ಹೆಚ್ಚಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಬಿರುಸುಗೊಂಡಿದೆ.

‘ಕಾಂಗ್ರೆಸ್‌ನಿಂದ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಸಚಿವರಾಗುವುದು ಬಹುತೇಕ ಖಚಿತ. ಕೆಪಿಸಿಸಿಯಿಂದ ಹಿಡಿದು ಎಐಸಿಸಿಯವರೆಗೂ ತಮ್ಮದೇ ಪ್ರಭಾವವನ್ನು ಪಾಟೀಲ ಹೊಂದಿದ್ದಾರೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಜತೆಗೂ ಆಪ್ತ ಒಡನಾಟ ಹೊಂದಿದ್ದಾರೆ.

ADVERTISEMENT

ಇದರ ಜತೆಗೆ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಮುಂಚೂಣಿಯಲ್ಲಿದ್ದು, ರಾಜ್ಯದಲ್ಲಿ ಲಿಂಗಾಯತ ನಾಯಕರಾಗಿಯೂ ಹೊರಹೊಮ್ಮಿದ್ದಾರೆ. 55 ಗಂಟೆಯಲ್ಲೇ ಮುಖ್ಯಮಂತ್ರಿ ಹುದ್ದೆ ತಮ್ಮ ಸಮುದಾಯದ ಕೈ ತಪ್ಪಿತು ಎಂಬ ಅಸಮಾಧಾನ ಲಿಂಗಾಯತರಲ್ಲಿ ಮೂಡಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಎಂ.ಬಿ.ಪಾಟೀಲಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಿದರೂ ಆಶ್ಚರ್ಯ ಪಡಬೇಕಿಲ್ಲ’ ಎಂಬ ವಿಶ್ಲೇಷಣೆ ಜಿಲ್ಲಾ ರಾಜಕೀಯ ಪಡಸಾಲೆಯಲ್ಲಿ ನಡೆದಿದೆ.

‘ಸಿದ್ದರಾಮಯ್ಯ ಆಪ್ತ ಪಡೆಯ ಬಹುತೇಕರು ಚುನಾವಣೆಯಲ್ಲಿ ಸೋತಿದ್ದಾರೆ. ವಿಧಾನಸಭೆಯಲ್ಲಿ ಸದ್ಯ ಪರಮಾಪ್ತರು ಎಂದರೇ ನಮ್ಮ ನಾಯಕರೇ. ಒಂದೆಡೆ ಎಐಸಿಸಿಗೂ ಬೇಕಾದವರು. ಇನ್ನೊಂದೆಡೆ ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ್‌ಗೂ ಆಪ್ತರು. ಮತ್ತೊಂದೆಡೆ ಜೆಡಿಎಸ್‌ ಅಗ್ರೇಸರ ಎಚ್.ಡಿ.ದೇವೇಗೌಡರಿಗೂ ಆಪ್ತ ಒಡನಾಡಿ.

ಎಲ್ಲೆಡೆಯೂ ಪೂರಕ ವಾತಾವರಣವಿದೆ. ಈ ಐದು ವರ್ಷ ನಿರ್ವಹಿಸಿದ ಜಲಸಂಪನ್ಮೂಲ ಖಾತೆಯನ್ನು ಮತ್ತೆ ಪಡೆಯುವ ಜತೆಗೆ ಉಪ ಮುಖ್ಯಮಂತ್ರಿಯಾಗುವ ಸಾಧ್ಯತೆಗಳು ಹೆಚ್ಚಿವೆ. ಈಗಾಗಲೇ ಈ ನಿಟ್ಟಿನಲ್ಲಿ ನಮ್ಮ ಮುಖಂಡರು ಹಲವು ತಂತ್ರ ರೂಪಿಸಿದ್ದಾರೆ’ ಎಂದು ಹೆಸರು ಬಹಿರಂಗಗೊಳಿಸಲಿಚ್ಚಿಸದ ಜಿಲ್ಲಾ ಕಾಂಗ್ರೆಸ್‌ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಐದನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ, ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಸಹ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ. ಸಮ್ಮಿಶ್ರ ಸರ್ಕಾರದಲ್ಲಿ ಅವಕಾಶ ಸಿಗುವುದೇ ? ಎಂಬುದು ಶಿವಾನಂದ ಅಭಿಮಾನಿ ಬಳಗವನ್ನು ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.

ಜೆಡಿಎಸ್‌ ಕೋಟಾದಲ್ಲಿ ಮನಗೂಳಿ

ಸಿಂದಗಿ ಶಾಸಕ ಎಂ.ಸಿ.ಮನಗೂಳಿ ಜೆಡಿಎಸ್‌ ಕೋಟಾದಡಿ ಸಚಿವರಾಗಲು ಲಾಬಿ ಆರಂಭಿಸಿದ್ದಾರೆ. 1994ರಲ್ಲಿ ಶಾಸಕರಾಗಿದ್ದಾಗಲೂ ಮನಗೂಳಿ ಸಚಿವರಾಗಿದ್ದು ವಿಶೇಷ.

ಮನಗೂಳಿ ಪುತ್ರರಾದ ಡಾ.ಚೆನ್ನವೀರ (ಮುತ್ತು) ಮನಗೂಳಿ, ಡಾ.ಶಾಂತವೀರ ಮನಗೂಳಿ ಈಗಾಗಲೇ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಅಶೋಕ ಮನಗೂಳಿ ಸಹ ಶನಿವಾರ ರಾತ್ರಿ ಬೆಂಬಲಿಗರ ಜತೆ ಬೆಂಗಳೂರಿಗೆ ಪಯಣಿಸಿದ್ದು, ತಮ್ಮ ತಂದೆಯ ಪರ ಜೆಡಿಎಸ್ ವರಿಷ್ಠರ ಬಳಿ ಲಾಬಿ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಎಂ.ಸಿ.ಮನಗೂಳಿ ಸಚಿವರಾಗುವುದು ಖಚಿತ. ಜೆಡಿಎಸ್‌ನ ಹಿರಿಯ ಧುರೀಣರು. ಸತತ ಏಳು ಬಾರಿ ಪಕ್ಷದಿಂದ ಸ್ಪರ್ಧಿಸಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಜೆಡಿಎಸ್‌ನ ಬೇರಾಗಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಸಹ ಮನಗೂಳಿ ಕಾಕಾ ಸಚಿವರಾಗುವುದು ಖಚಿತ ಎಂದೇ ಮತ ಯಾಚಿಸಿದ್ದರು. ಇದೀಗ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಲಿದ್ದಾರೆ’ ಎನ್ನುತ್ತಾರೆ ಮನಗೂಳಿ ಬೆಂಬಲಿಗರಾದ ಚೆನ್ನು ಪಟ್ಟಣಶೆಟ್ಟಿ. ಸಲೀಂ ಜುಮನಾಳ.

**
ಎಂ.ಸಿ.ಮನಗೂಳಿ ಪಕ್ಷಾಂತರಿಯಲ್ಲ. ಕಾಂಗ್ರೆಸ್‌ನಿಂದ ಹಲ ಬಾರಿ ಆಹ್ವಾನ ಬಂದರೂ ತಿರಸ್ಕರಿಸಿ ಜೆಡಿಎಸ್‌ನಲ್ಲೇ ಉಳಿದವರು. ಪಕ್ಷ ಅವರನ್ನು ಸಚಿವರನ್ನಾಗಿಸಬೇಕು
ಚೆನ್ನು ಪಟ್ಟಣಶೆಟ್ಟಿ, ಸಿಂದಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.