ADVERTISEMENT

ವಿಜಯಪುರ: ಭೀಮಾ ತೀರದ ಅಪರಾಧ ಚಟುವಟಿಕೆಗೆ ಕಡಿವಾಣ

ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಕ್ಕಂ ಪ್ರಕಾಶ್‌ ಅಮೃತ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2018, 6:57 IST
Last Updated 14 ಮಾರ್ಚ್ 2018, 6:57 IST
ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿಕ್ಕಂ ಪ್ರಕಾಶ್‌ ಅಮೃತ್, ಕುಲದೀಪ್‌ಕುಮಾರ್ ಆರ್‌.ಜೈನ್ ಅವರಿಂದ ಮಂಗಳವಾರ ಅಧಿಕಾರ ಸ್ವೀಕರಿಸಿದರು.
ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿಕ್ಕಂ ಪ್ರಕಾಶ್‌ ಅಮೃತ್, ಕುಲದೀಪ್‌ಕುಮಾರ್ ಆರ್‌.ಜೈನ್ ಅವರಿಂದ ಮಂಗಳವಾರ ಅಧಿಕಾರ ಸ್ವೀಕರಿಸಿದರು.   

ವಿಜಯಪುರ: ‘ಭೀಮಾ ತೀರ ಸೇರಿದಂತೆ ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕಲು ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಕ್ಕಂ ಪ್ರಕಾಶ್‌ ಅಮೃತ್ ಹೇಳಿದರು.

ನಿಕಟಪೂರ್ವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‌ಕುಮಾರ್‌ ಆರ್ ಜೈನ್‌ ಅವರಿಂದ ಮಂಗಳವಾರ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ನಿಕ್ಕಂ, ‘ಭೀಮಾ ತೀರದ ವಿದ್ಯಮಾನಗಳ ಕುರಿತು ಸಮಗ್ರ ಮಾಹಿತಿ ಕಲೆ ಹಾಕುವೆ. ರೌಡಿಶೀಟರ್‌ಗಳ ಮೇಲೆ ಹದ್ದಿನ ಕಣ್ಣಿಡಲಾಗುವುದು. ಅಪರಾಧ ವಿಜೃಂಭಿಸದಂತೆ ಕಠಿಣ ಕ್ರಮ ಜರುಗಿಸಲಾಗುವುದು’ ಎಂದರು.

‘ಜಿಲ್ಲೆಯ ಪೊಲೀಸ್ ವ್ಯವಸ್ಥೆ ಅದರಲ್ಲೂ ವಿಶೇಷವಾಗಿ ಬೀಟ್ ವ್ಯವಸ್ಥೆಯನ್ನು ಮತ್ತಷ್ಟು ಬಲ ಪಡಿಸುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಲಾಗುವುದು. ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೈಗೊಂಡಿರುವ ವಿಶೇಷ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು’ ಎಂದೂ ಹೇಳಿದರು.

ADVERTISEMENT

‘ಚುನಾವಣೆ ಹೊಸ್ತಿಲಲ್ಲಿ ಅನೇಕ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗುವುದು. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿ ಆಡಳಿತ ನಿರ್ವಹಿಸಲಾಗುವುದು’ ಎಂದರು. ನಗರ ಸಂಚಾರ ವ್ಯವಸ್ಥೆ ಬಗ್ಗೆ ಪ್ರಸ್ತಾಪಿಸಿದ ನಿಕ್ಕಂ, ‘ಸಂಚಾರ ವ್ಯವಸ್ಥೆಯ ಸುಧಾರಣಾ ಕ್ರಮಗಳ ಬಗ್ಗೆಯೂ ಗಮನ ಹರಿಸಿ ಕೂಡಲೇ ಜಿಲ್ಲಾಧಿಕಾರಿ ಜತೆ ಚರ್ಚಿಸಿ, ಶಿಸ್ತುಬದ್ಧವಾದ ಸಂಚಾರ ವ್ಯವಸ್ಥೆ ರೂಪಿಸಲು ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗುಣಾರೆ, ಡಿವೈಎಸ್‌ಪಿಗಳಾದ ಡಿ.ಅಶೋಕ, ರವೀಂದ್ರ ಶಿರೂರ, ಮಹೇಶ್ವರಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.