ADVERTISEMENT

ವಿಜಾಪುರಕ್ಕೆ ಮತ್ತೊಂದು ಒಳಾಂಗಣ ಕ್ರೀಡಾಂಗಣ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 9:12 IST
Last Updated 23 ಸೆಪ್ಟೆಂಬರ್ 2013, 9:12 IST

ವಿಜಾಪುರ: ಉತ್ತರ ಕರ್ನಾಟಕದಲ್ಲಿಯೇ ಸುಸಜ್ಜಿತ ಎನ್ನಲಾದ ಒಳಾಂಗಣ ಕ್ರೀಡಾಂಗಣ ಇಲ್ಲಿಯ ಸೈನಿಕ ಶಾಲೆಯಲ್ಲಿ ರೂಪಗೊಳ್ಳುತ್ತಿದೆ. ಈಗಾಗಲೆ ಡಾ.ಬಿ.ಆರ್‌. ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದಲ್ಲಿ ಒಳಾಂಗಣ ಕ್ರೀಡಾಂಗಣ ಹೊಂದಿರುವ ವಿಜಾಪುರ ನಗರಕ್ಕೆ ಇದು ಎರಡನೇ ಕೊಡುಗೆ.

ರಾಜ್ಯ ಸರ್ಕಾರದ ಅಂದಾಜು ರೂ. 4 ಕೋಟಿ ಅನುದಾನದಲ್ಲಿ ನಿರ್ಮಿಸುತ್ತಿರುವ ಈ ಒಳಾಂಗಣ ಕ್ರೀಡಾಂಗಣದ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಇದೇ 24ರಂದು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಲೋಕಾರ್ಪಣೆ ಮಾಡಲಿದ್ದಾರೆ.

ಈ ಒಳಾಂಗಣ ಕ್ರೀಡಾಂಗಣದ ನೆಲ ಮಹಡಿ 2,417 ಚದುರ ಮೀಟರ್‌ ಹಾಗೂ ಮೊದಲ ಮಹಡಿ  505 ಚದರ ಮೀಟರ್‌ನಷ್ಟು ವಿಶಾಲವಾಗಿದೆ. ಕಟ್ಟಡದ ಮಧ್ಯಭಾಗದಲ್ಲಿ ಬಾಸ್ಕೆಟ್‌ ಬಾಲ್‌ ಅಂಕಣ ಇದ್ದು, ಸಾವಿರ ಜನ ಕುಳಿತು ನೋಡುವಷ್ಟು ಸ್ಥಳಾವಕಾಶ ಇದೆ.

‘ಈ ಒಳಾಂಗಣ ಕ್ರೀಡಾಂಗಣದಲ್ಲಿ ಬಾಸ್ಕೆಟ್‌ ಬಾಲ್‌, ಸ್ಕ್ವಾಷ್‌, ಬಾಕ್ಸಿಂಗ್‌, ವಾಲಿಬಾಲ್‌, ಟೇಬಲ್‌ ಟೆನ್ನಿಸ್‌, ಬಿಲಿಯರ್ಡ್ಸ್‌, ಚೆಸ್‌, ಕೇರಂ ಸೇರಿದಂತೆ 10 ಬಗೆಯ ಆಟಗಳನ್ನು ಆಡಲು ಅವಕಾಶ ಮತ್ತು ಸೌಲಭ್ಯ ಕಲ್ಪಿಸಲಾಗುತ್ತಿದೆ. ವೈದ್ಯರ ಕೊಠಡಿ, ಸಾಮಗ್ರಿ ಕೊಠಡಿ, ಶೌಚಾಲಯ ಮತ್ತು ಸ್ನಾನಗೃಹಗಳು ಇರಲಿವೆ’ ಎಂಬುದು ಸೈನಿಕ ಶಾಲೆಯ ಪ್ರಾಚಾರ್ಯ ಕರ್ನಲ್‌ ಆರ್‌.ಬಾಲಾಜಿ ಅವರ ವಿವರಣೆ.

‘ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಲಿ­ರುವ ಉತ್ತರ ಕರ್ನಾಟಕದ ಮೊದಲ ಒಳಾಂಗಣ ಕ್ರೀಡಾಂಗಣ ಇದಾಗಲಿದೆ. ಪೂರ್ಣ ಪ್ರಮಾಣದ ಕಾಮಗಾರಿ ಮುಕ್ತಾಯವಾದರೆ ರಾಷ್ಟ್ರಮಟ್ಟದ ಟೂರ್ನಿಗಳನ್ನು ಸಂಘಟಿಸಬಹುದಾಗಿದೆ’ ಎನ್ನುತ್ತಾರೆ ಅವರು.

ಸೈನಿಕ ಶಾಲೆಯಲ್ಲಿ ಕ್ರೀಡಾ ಸಂಕೀರ್ಣ ನಿರ್ಮಿಸಲಾಗುತ್ತಿದೆ. ಅದರ ಒಂದು ಭಾಗವಾಗಿ ಈ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗಿದೆ ಎಂದರು.

‘ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗಿದೆ. ಮೊದಲ ಹಂತದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ ವೃತ್ತಾಕಾರದ ಮೇಲ್ಛಾವಣಿ, ಕಟ್ಟಿಗೆಯ ನೆಲಹಾಸು ಮತ್ತಿತರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದು ಈ ಕಾಮಗಾ­ರಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಆರ್‌.ಬಿ. ಪಾಟೀಲ ತಿಳಿಸಿದರು.

‘ವಿಜಾಪುರದ ಅಂಬೇಡ್ಕರ ಕ್ರೀಡಾಂಗಣದ ಪಕ್ಕದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ದಶಕಗಳಿಗಿಂತಲೂ ಹೆಚ್ಚು ವರ್ಷ ತಗುಲಿತ್ತು. ನಮ್ಮ ಶಾಲೆಯ ಒಳಾಂಗಣ ಕ್ರೀಡಾಂಗಣದ ಪ್ರಥಮ ಹಂತದ ಕಾಮಗಾರಿ ಕೇವಲ ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲಾಗಿದೆ. ನಮ್ಮ ಪ್ರಾಚಾರ್ಯರು ಬೆನ್ನು ಬಿಡದೆ ಕೆಲಸ ಮಾಡಿಸಿಕೊಂಡಿದ್ದಾರೆ. ಶಾಲೆಯ ಸುವರ್ಣ ಮಹೋತ್ಸವದ ಸ್ಮರಣೆಗಾಗಿ ನಿರ್ಮಾಣಗೊಂಡಿರುವ ಈ ಕಟ್ಟಡ ನಮಗೆಲ್ಲ ಹೆಮ್ಮೆ’ ಎನ್ನುತ್ತಾರೆ ಸೈನಿಕ ಶಾಲೆಯ ಹಲವು ಶಿಕ್ಷಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.