ADVERTISEMENT

ವಿಜಾಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 9:15 IST
Last Updated 21 ಜನವರಿ 2011, 9:15 IST

ವಿಜಾಪುರ: ಇಲ್ಲಿಯ ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ವಿಜನ್-2020 ಅಡಿ ಪ್ರಸ್ತಾವ ಸಲ್ಲಿಸಿದ್ದು, ಸರ್ಕಾರವೂ ಈ ಕುರಿತು ಗಂಭೀರ ಚಿಂತನೆ ನಡೆಸಿದೆ ಎಂದು ಜಿಲ್ಲಾ ಸರ್ಜನ್ ಡಾ.ಆರ್.ಎಂ. ಸಜ್ಜನ ಹೇಳಿದರು.

ವಿಜಾಪುರ ವರದಿಗಾರರ ಕೂಟದವರು ಗುರುವಾರ ಏರ್ಪಡಿಸಿದ್ದ ಸಂವಾದದಲ್ಲಿ ‘110 ಎಕರೆ ಜಮೀನು, 500 ಹಾಸಿಗೆಗಳ ಆಸ್ಪತ್ರೆ, ಎಎನ್‌ಎಂ ಹಾಗೂ ನರ್ಸಿಂಗ್ ಕಾಲೇಜುಗಳನ್ನು ಹೊಂದಿರುವ ಜಿಲ್ಲಾ ಆಸ್ಪತ್ರೆ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಸಕಲ ಮೂಲಸೌಲಭ್ಯ ಹೊಂದಿದೆ’ ಎಂದರು.

1886ರಲ್ಲಿ ಆರಂಭಗೊಂಡ ಈ ಜಿಲ್ಲಾ ಆಸ್ಪತ್ರೆ ಆರಂಭದಲ್ಲಿ 100 ಹಾಸಿಗೆ ಸಾಮರ್ಥ್ಯ ಹೊಂದಿತ್ತು. ಈಗ 400 ಹಾಸಿಗೆ ಸಾಮರ್ಥ್ಯ ಹೊಂದಿದೆ. 100 ಹಾಸಿಗೆ ಸಾಮರ್ಥ್ಯದ ಕ್ಷಯರೋಗ ಆಸ್ಪತ್ರೆಯನ್ನೂ ಜಿಲ್ಲಾ ಆಸ್ಪತ್ರೆಯ ಸುಪರ್ದಿಗೆ ಪಡೆಯಲಾಗುತ್ತಿದೆ. ನಿತ್ಯ ಸರಾಸರಿ 800 ಜನ ಹೊರರೋಗಿಗಳು ಬರುತ್ತಿದ್ದು, ಇರುವ ವೈದ್ಯರು ಅವರಿಗೆ ಉತ್ತಮ ಸೇವೆ ನೀಡುತ್ತಿದ್ದಾರೆ ಎಂದರು.

ಜಿಲ್ಲಾ ಆಸ್ಪತ್ರೆಯಲ್ಲಿ 32 ಜನ ತಜ್ಞ ವೈದ್ಯರ ಹುದ್ದೆ ಇದ್ದು, ಈಗ ಕೇವಲ 14 ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. 18 ಜನ ತಜ್ಞ ವೈದ್ಯರು ಸೇರಿದಂತೆ ಒಟ್ಟಾರೆ 103 ಹುದ್ದೆಗಳು ಖಾಲಿ ಇವೆ. ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ತಜ್ಞ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಡಯಾಲಿಸಿಸ್ ಸೌಲಭ್ಯವಿದ್ದು, ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಹಾಗೂ ಉಳಿದವರಿಗೆ 350 ರೂಪಾಯಿ ದರ ವಿಧಿಸಲಾಗುತ್ತಿದೆ. ಕಳೆದ ವರ್ಷ 1484 ಜನರಿಗೆ ಡಯಾಲಿಸಿಸ್ ಮಾಡಲಾಗಿದೆ. ಒಬ್ಬ ಸ್ತ್ರೀರೋಗ ತಜ್ಞರು ಮಾತ್ರ ಇದ್ದರೂ ಕಳೆದ ವರ್ಷ 2219 ಜನರ ಹೆರಿಗೆ ಮಾಡಿಸಲಾಗಿದೆ. ಕಳೆದ

ವರ್ಷ 1285 ಜನರಿಗೆ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದೆ. ರಕ್ತ ನಿಧಿ ಕೇಂದ್ರದಲ್ಲಿ 943 ಯೂನಿಟ್ ರಕ್ತ ಸಂಗ್ರಹಿಸಿ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.2010ನೇ ಸಾಲಿನಲ್ಲಿ ಒಟ್ಟಾರೆ 10,902 ಜನ ಒಳರೋಗಿಗಳು, 2.52 ಲಕ್ಷ ಜನ ಹೊರರೋಗಿಗಳು ಹಾಗೂ 26 ಸಾವಿರ ಜನ ಹಿರಿಯ ನಾಗರಿಕರು ಸೇವೆ ಪಡೆದಿದ್ದಾರೆ. 78 ಮಹಿಳೆಯರು ಸೇರಿದಂತೆ 142 ಜನ ಸುಟ್ಟು ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗಿದೆ. ಜಿಲ್ಲೆಯಲ್ಲಿರುವ ಸುಮಾರು ಎಂಟು ಸಾವಿರ ಎಚ್‌ಐವಿ ರೋಗಿಗಳಿಗೆ ಎಆರ್‌ಟಿ ಕೇಂದ್ರದ ಮೂಲಕ ಚಿಕಿತ್ಸೆ ಹಾಗೂ ಪೌಷ್ಟಿಕ ಆಹಾರ ನೀಡಲಾಗುತ್ತಿದೆ ಎಂದರು.

ಆಸ್ಪತ್ರೆಯಲ್ಲಿ ವೆಂಟಿಲೆಟರ್ ಇದ್ದರೂ ಅವುಗಳ ನಿರ್ವಹಣೆಗೆ ಪರಿಣಿತರು ಇರಲಿಲ್ಲ. ಕೆಲ ಸ್ಟಾಫ್ ನರ್ಸ್‌ಗಳಿಗೆ ತರಬೇತಿ ಕೊಡಿಸಿ ವೆಂಟಿಲೆಟರ್ ಸೇವೆ ಆರಂಭಿಸಲಾಗಿದೆ. ಒಂದೂವರೆ ವರ್ಷದಿಂದ ಫಿಜಿಶಿಯನ್ ಇಲ್ಲದಿದ್ದರೂ ಹೊರಗಿನವರನ್ನು ಕರೆಸಿ ಸೇವೆ ನೀಡಲಾಗುತ್ತಿದೆ ಎಂದು ಹೇಳಿದರು.

ಬಡ ರೋಗಿಗಳಿಗೆ ಇನ್ನೂ ಉತ್ತಮ ಸೇವೆ ನೀಡುವುದು ನಮ್ಮ ಉದ್ದೇಶ. ಅದಕ್ಕಾಗಿ ಜಿಲ್ಲಾ ಆಡಳಿತ ಹಾಗೂ ಸರ್ಕಾರ ಎಲ್ಲ ಬಗೆಯ ನೆರವು ನೀಡುತ್ತಿದ್ದು, ಜನತೆಯೂ ಸಹಕಾರ ನೀಡಬೇಕು ಎಂದು ಡಾ.ಸಜ್ಜನ ಮನವಿ ಮಾಡಿದರು.

ಅಲ್-ಅಮೀನ್‌ನಿಂದ 80 ಲಕ್ಷ ಬಾಕಿ
ವಿಜಾಪುರದ ಅಲ್-ಅಮೀನ್ ವೈದ್ಯಕೀಯ ಕಾಲೇಜು ಜಿಲ್ಲಾ ಆಸ್ಪತ್ರೆಗೆ ಅಂದಾಜು 80 ಲಕ್ಷ ರೂಪಾಯಿ ಬಾಕಿ ಪಾವತಿಸಬೇಕಿದೆ ಎಂದು ಡಾ.ಆರ್.ಎಂ. ಸಜ್ಜನ ಹೇಳಿದರು.
ರೋಗಿಗಳ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆ ಹಾಗೂ ಅಲ್-ಅಮೀನ್ ಸಂಸ್ಥೆಯ ಮಧ್ಯೆ ಐದು ವರ್ಷಗಳ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಆರೋಗ್ಯ ರಕ್ಷಾ ಸಮಿತಿ ಫಂಡ್‌ಗೆ ಅಲ್-ಅಮೀನ್ ಸಂಸ್ಥೆಯವರು ಕಳೆದ ಮೂರು ವರ್ಷಗಳಿಂದ ತಮ್ಮ ಪಾಲಿನ ಹಣವನ್ನೇ ಪಾವತಿಸಿಲ್ಲ. ಪ್ರಸ್ತುತ ಮಾರ್ಚ್ ತಿಂಗಳಲ್ಲಿ ಅವರ ಒಡಂಬಡಿಕೆಯ ಅವಧಿ ಕೊನೆಗೊಳ್ಳಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.