ADVERTISEMENT

ವಿಜಾಪುರ ಬಂದ್ ನೀರಸ; ಬಸ್‌ಗಳಿಗೆ ಕಲ್ಲು

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 7:50 IST
Last Updated 5 ಜನವರಿ 2012, 7:50 IST

ವಿಜಾಪುರ: ಸಿಂದಗಿಯಲ್ಲಿ ಪಾಕ್ ಧ್ವಜ ಹಾರಿಸಿದ ಘಟನೆ ಖಂಡಿಸಿ ಶ್ರೀರಾಮ ಸೇನೆಯವರು ಕರೆ ನೀಡಿದ್ದ ವಿಜಾಪುರ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಲವೆಡೆ ಕಲ್ಲು ತೂರಿದ್ದರಿಂದ ಸಾರಿಗೆ ಸಂಸ್ಥೆಯ ನಾಲ್ಕು ಸೇರಿದಂತೆ ಐದು ಬಸ್‌ಗಳ ಗಾಜುಗಳು ಪುಡಿಪುಡಿಯಾದವು.

ಇಲ್ಲಿಯ ಎಪಿಎಂಸಿ ವ್ಯಾಪಾರಸ್ಥರ ಸಂಘದವರು ಸ್ವಯಂ ಪ್ರೇರಿತ ಬಂದ್ ನಡೆಸಿದ್ದರಿಂದ ಎಪಿಎಂಸಿಯ ವಹಿವಾಟು ನಡೆಯಲಿಲ್ಲ. ನಗರದ ಕೆಲವೆಡೆ ವರ್ತಕರು ಸ್ವಯಂ ಪ್ರೇರಿತ ಬಂದ್ ಆಚರಿಸಿದರೆ, ಇನ್ನು ಕೆಲವರು ರಜೆಯ ದಿನವಾದ ಬುಧವಾರ ವಾಡಿಕೆಯಂತೆ ಅಂಗಡಿಗಳನ್ನು ಮುಚ್ಚಿದ್ದರು.

ಶಾಲಾ-ಕಾಲೇಜುಗಳು ಕಾರ್ಯನಿರ್ವಹಿಸಿದವು. ಬಸ್ ಹಾಗೂ ವಾಹನ ಸಂಚಾರ ಎಂದಿನಂತೆ ಇತ್ತು. ಅಲ್ಲಲ್ಲಿ ಬೆಳಿಗ್ಗೆ ರಸ್ತೆಯಲ್ಲಿ ಟೈರ್‌ಗಳನ್ನಿಟ್ಟು ಬೆಂಕಿ ಹಚ್ಚಲಾಗಿತ್ತು.

ಆದರ್ಶ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸೊಲ್ಲಾಪುರ ರಸ್ತೆಯಲ್ಲಿ ಮೂರು ಬಸ್‌ಗಳಿಗೆ, ಬಿಎಲ್‌ಡಿಇ ರಸ್ತೆಯಲ್ಲಿ ಖಾಸಗಿ ಶಾಲೆಯ ಬಸ್‌ಗೆ, ಬಾಗಲಕೋಟೆ ರಸ್ತೆಯ ಆರ್‌ಟಿಒ ಕಚೇರಿ ಹತ್ತಿರ ಮತ್ತೊಂದು ಸರ್ಕಾರಿ ಬಸ್‌ಗೆ ಕಲ್ಲು ತೂರಲಾಯಿತು. ಘಟನೆಯಲ್ಲಿ ಒಟ್ಟಾರೆ ಐದು ಬಸ್‌ಗಳು ಜಖಂಗೊಂದಿದ್ದು, ಇಲ್ಲಿಯ ಮೂರು ಪ್ರಕರಣ ದಾಖಲಾಗಿವೆ.

`ಆದರ್ಶ ನಗರದಲ್ಲಿ ಬಸ್‌ಗೆ ಕಲ್ಲು ಹೊಡೆದ ಇಬ್ಬರನ್ನು ಬಂಧಿಸಲಾಗಿದೆ. ಬಂದ್ ಕರೆ ನೀಡಿದ್ದ ಶ್ರೀರಾಮ ಸೇನೆಯ ಮುಖಂಡ ನೀಲಕಂಠ ಕಂದಗಲ್, ಬಸವರಾಜ ಕಲ್ಯಾಣಪ್ಪಗೋಳ, ಅಪ್ಪು ಸೂರ್ಯವಂಶಿ, ಆನಂದ ದುರ್ಗದ ಎಂಬವರನ್ನು ಮುಂಜಾಗೃತ ಕ್ರಮವಾಗಿ ಬಂಧಿಸಿ ಸಂಜೆ ಬಿಡುಗಡೆ ಮಾಡಲಾಯಿತು~ ಎಂದು ಎಸ್ಪಿ ಡಾ.ಡಿ.ಸಿ. ರಾಜಪ್ಪ ತಿಳಿಸಿದರು.

ಖಂಡನೆ: ಶಾಂತಿಯುತವಾಗಿ ವಿಜಾಪುರ ಬಂದ್ ನಡೆಸುತ್ತಿದ್ದ ಶ್ರಿರಾಮ ಸೇನೆಯ ಮುಖಂಡ ನೀಲಕಂಠ ಕಂದಗಲ್ ಇತರರನ್ನು ಪೊಲೀಸರು ಬಂಧಿಸಿರುವುದು ಖಂಡನೀಯ ಎಂದು ಶ್ರೀರಾಮ ಸೇನೆಯ ಮಹೇಶ ದೊಡಮನಿ, ಅಶೋಕ ಮಠ, ಗೋವಿಂದ ರಜಪೂತ, ಸತೀಶ ಪಾಟೀಲ, ರಮೇಶ ಕಟಗೊರ, ಅರುಣ್ ಬಾಡಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.