ADVERTISEMENT

ವಿದ್ಯುತ್ ತಂತಿ ತಗುಲಿ ಪೆಟ್ಟಾಗಿದ್ದ ಮಂಗ ಸಾವು

ಅಂತ್ಯಕ್ರಿಯೆ, ಗುಡಿ ನಿರ್ಮಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 9:52 IST
Last Updated 14 ಡಿಸೆಂಬರ್ 2012, 9:52 IST

ತಾಳಿಕೋಟೆ: ಪಟ್ಟಣದ ಸಗರಪೇಟೆಯಲ್ಲಿ ಎರಡು ದಿನಗಳ ಹಿಂದೆ ಮಾಳಿಗೆಯಿಂದ ಮಾಳಿಗೆಗೆ ಜಿಗಿಯುವ ಆತುರದಲ್ಲಿ ವಿದ್ಯುತ್ ತಂತಿಗೆ ಸಿಲುಕಿ ಆಘಾತಗೊಂಡು ಕೆಳಗೆ ಬಿದ್ದ ಮಂಗನ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ.

ಬಿದ್ದು ಕ್ಕೆ ಕಾಲು ಮುರಿದು ಹೋಗಿತ್ತು. ಸೊಂಟಕ್ಕೆ ಪೆಟ್ಟಾಗಿತ್ತು. ನೋವಿನಿಂದ ನರಳುತ್ತ ಬಿದ್ದಿದ್ದ ಮಂಗನ ಮೇಲೆ ಕನಿಕರ ತೋರಿದ ಓಣಿಯ ಜನತೆ ಅವನನ್ನು ಮನೆಯ ಮಗನಂತೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಬೇಗ ಗುಣಮುಖವಾಗಲೆಂದು ಮಾರುತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಶಾಲಾ ಮಕ್ಕಳು ಮರುಗಿ ತಮ್ಮ ಕೈಯ್ಯಲ್ಲಿದ್ದ ಚಾಕಲೇಟ್ ಬಿಸ್ಕಿಟ್ ಕೊಟ್ಟು ಸಮಾಧಾನ ಪಟ್ಟರು. ಆದರೆ ಎರಡು ದಿನಗಳ ಕಾಲ ನೀಡಿದ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಅದು ಸಾವನ್ನಪ್ಪಿತು.

ಮಕ್ಕಳು, ಮಹಿಳೆಯರು, ಹಿರಿಯರು ಬೇಧವಿಲ್ಲದೇ ಕಣ್ಣೀರಿಟ್ಟರು, ಅಂತಿಮವಾಗಿ ಸಾಮಾನ್ಯ ಮನುಷ್ಯರು ಮೃತಪಟ್ಟಾಗ  ಮಾಡುವ ರೀತಿ ಕ್ರಿಯೆಗಳನ್ನು ನೆರವೇರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.
ಅದು ಕೆಳಗೆ ಬಿದ್ದ ಸ್ಥಳದಲ್ಲಿಯೇ  ಸಮಾಧಿ ಮಾಡಿದರು. ಈಗ ಅದರ ಮೇಲೆ ದೇವಸ್ಥಾನ ನಿರ್ಮಾಣ ಮಾಡುವ ವಿಚಾರಕ್ಕೆ ಹಿರಿಯರು ನಿಶ್ಚಯಿಸಿದ್ದಾರೆ.

ಮೆರವಣಿಗೆಯಲ್ಲಿ ಹಳ್ಳೆಪ್ಪ ದೊಡಮನಿ, ವಿಶ್ವನಾಥ ಬಿದರಕುಂದಿ, ಮಲ್ಲು ಮೇಟಿ, ಅಪ್ಪಣ್ಣ ಯರಿಕ್ಯಾಳ, ಅಶೋಕ ಚಿನಗುಡಿ, ಕಾಶಿನಾಥ ವಾಲಿಕಾರ, ಮುರುಗೇಶ ಕೋರಿ, ಶರಣಪ್ಪ ಪುಜಾರಿ, ಬೀರಪ್ಪ ಪುಜೇರಿ, ಮಂಜು ಆಲ್ಯಾಳ, ಯಂಕಪ್ಪ ದುಂಬಲಗುಂಡಿ, ನಿಂಗರಾಜ ಕುಂಟೋಜಿ, ನಾಗಪ್ಪ ಪೂಜೇರಿ, ಸಂಗಪ್ಪ ಚಿನಗುಡಿ, ಶರಣಪ್ಪ ಬ್ಯಾಕೋಡ, ಪ್ರದೀಪ ದಡೇಧ, ಗೋವಿಂದ ದಡೇಧ, ಗೋವಿಂದ ಬಿಳೇಭಾವಿ, ಸುರೇಶ ಸರೂರ, ಜಗು ದಡೇಧ, ರವಿ ದೊಡಮನಿ ಪ್ರದೀಪ ದಡೇಧ ಮೊದಲಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.