ADVERTISEMENT

ವಿವಿಧೆಡೆ ವಿದ್ಯುತ್ ಕಚೇರಿಗೆ ಮುತ್ತಿಗೆ:ಬಂಧನ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 3:30 IST
Last Updated 2 ಅಕ್ಟೋಬರ್ 2012, 3:30 IST

ವಿಜಾಪುರ: ವಿದ್ಯುತ್ ಕಡಿತ ವಿರೋಧಿಸಿ ಹಾಗೂ ನಿರಂತರ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಜಿಲ್ಲಾ ಯುವ ಕಾಂಗ್ರೆಸ್‌ನವರು ಇಲ್ಲಿಯ ಹೆಸ್ಕಾಂ ಕಚೇರಿ ಎದುರು ಧರಣಿ ನಡೆಸಿದರು.

ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿಯಲು ಯತ್ನಿಸಿದ ಕಾರ್ಯಕರ್ತರನ್ನು ಲಾಠಿ ಬೀಸಿ ಚದುರಿಸಿದ ಪೊಲೀಸರು, ನಂತರ ಬಂಧಿಸಿ ಬಿಡುಗಡೆ ಮಾಡಿದರು.

`ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ವಿದ್ಯುತ್ ಸಮಸ್ಯೆ ಹೆಚ್ಚಿದೆ. ಜನತೆ ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಕೈಗಾರಿಕೆ-ಗುಡಿ ಕೈಗಾರಿಕೆಗಳು, ವ್ಯಾಪಾರಸ್ಥರು, ಗೃಹಿಣಿಯರು ವಿದ್ಯುತ್ ಕೊರತೆಯಿಂದಾಗಿ ನಲುಗಿದ್ದಾರೆ~ ಎಂದು ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾ ಉಸ್ತುವಾರಿ ಬಸವರಾಜ ಎ.ಪಿ ದೂರಿದರು.

ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ನ್ನು ನೀಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದೇ ದೊಡ್ಡ ಸಾಧನೆಯಾಗಿದೆ. ವಿದ್ಯುತ್ ಸಮಸ್ಯೆಯ ನಿವಾರಣೆಗೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ರಾಠೋಡ, ಮಾಜಿ ಅಧ್ಯಕ್ಷ ಮಲ್ಲನಗೌಡ ಬಿರಾದಾರ, ಅಬ್ದುಲ್ ಖಾದರ, ಶ್ರೀಕಾಂತ ಲಮಾಣಿ ಆಪಾದಿಸಿದರು.

ರಾಜ್ಯ ಸರ್ಕಾರ ವಿದ್ಯುತ್ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಬೇಕು. ಅಗತ್ಯ ವಿದ್ಯುತ್ ಪೂರೈಸಿ ರೈತರನ್ನು ರಕ್ಷಿಸಬೇಕು ಎಂದು ಡಿ.ಎಲ್. ಚವ್ಹಾಣ, ಪಿಂಟು ಕಾರ್ಬಾರಿ, ಪಾಂಡು ಜಾಧವ, ಸಂತೋಷ ರಾಠೋಡ ಒತ್ತಾಯಿಸಿದರು.

ಬಸವನಬಾಗೇವಾಡಿ ವರದಿ
ಬಸವನಬಾಗೇವಾಡಿ: ಅಸಮರ್ಪಕ ವಿದ್ಯುತ್ ವಿತರಣೆ ಮಾಡುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ತಾಲ್ಲೂಕು ಯುವ ಘಟಕದವರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

 ಬಸವೇಶ್ವರ ದೇವಾಲಯದಿಂದ ಮೆರವಣಿಗೆಯಲ್ಲಿ ಹೆಸ್ಕಾಂ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಕೆಲ ಹೊತ್ತು ಪ್ರತಿಭಟನೆ ನಡೆಸಿ ಹೆಸ್ಕಾಂ ಕಚೇರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಹಾಗೂ ಸಂಗಮೇಶ ಒಲೇಕಾರ ಮಾತನಾಡಿ, ರಾಜ್ಯದಲ್ಲಿ ವಿದ್ಯುತ್ ಕೊರತೆ ಉಂಟಾಗುತ್ತಿದೆ. ವಿದ್ಯುತ್ ಸಮಸ್ಯೆ ಪರಿಹರಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ವಿದ್ಯುತ್ ಕೊರತೆಯಿಂದಾಗಿ ರೈತರು, ವಿದ್ಯಾರ್ಥಿಗಳು, ಸಣ್ಣ ಉದ್ದಿಮೆದಾರರು ಸೇರಿದಂತೆ ಹಲವರು ತೊಂದರೆ ಅನುಭವಿಸುತ್ತಿದ್ದಾರೆ. ರಾಜ್ಯ ಸರ್ಕಾರ ವಿದ್ಯುತ್ ಕೊರತೆಯನ್ನು ನಿಗಿಸಲು ಕ್ರಮ ಕೈಗೊಳ್ಳಬೇಕು. ರೈತರ ಪಂಪ್‌ಸೆಟ್ಟುಗಳಿಗೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.

  ಶೇಖರ ಗೊಳಸಂಗಿ, ರವಿ ಪಡಶೆಟ್ಟಿ, ರವಿ ರಾಠೋಡ, ರುಕ್ಮೀಣಿ ರಾಠೋಡ, ಸುನೀಲ ಪವಾರ, ಬಸವರಾಜ ರಾಯಗೊಂಡ, ಜಗದೇವಿ ಬೂದಿಹಾಳ, ಸಂಗಮೇಶ ಜಾಲಗೇರಿ, ಸಂದೀಪ ಕೋಟ್ಯಾಳ, ಕಾಶಿನಾಥ ರಾಠೋಡ, ಉದಯ ಮಾಮಲೇಕರ, ಅಜೀಜ ಬಾಗವಾನ,  ಬಾಬು ಲಮಾಣಿ, ಸುನೀಲ ರಾಠೋಡ, ಯಮನೂರಿ ರಾಠೋಡ  ಭಾಗವಹಿಸಿದ್ದರು. 

ಮುದ್ದೇಬಿಹಾಳ ವರದಿ
ಮುದ್ದೇಬಿಹಾಳ:  ವಿದ್ಯುತ್  ಪೂರೈಕೆಯಲ್ಲಿನ ಅವ್ಯವಸ್ಥೆ ಖಂಡಿಸಿ  ಯುವ ಕಾಂಗ್ರೆಸ್‌ನ ತಾಲ್ಲೂಕು ಘಟಕದ ವತಿಯಿಂದ ಸೋಮವಾರ ಇಲ್ಲಿನ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ, ಕಚೇರಿ ಮುಖ್ಯದ್ವಾರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ರ‌್ಯಾಲಿಯ ನೇತೃತ್ವ ವಹಿಸಿ ಮಾತನಾಡಿದ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಲಾಳೇಮಶ್ಯಾಕ ಅವಟಿ, ತಾಲ್ಲೂಕಿನಾದ್ಯಂತ ವಿದ್ಯುತ್ ಪೂರೈಕೆ ವ್ಯವಸ್ಥೆ ಹದಗೆಟ್ಟು ಹೋಗಿದೆ, ಯಾರನ್ನೂ ಕೇಳಿದರೂ ಜವಾಬ್ದಾರಿಯಿಂದ ಉತ್ತರಿಸುತ್ತಿಲ್ಲ.
 
ರೈತಾಪಿ ವರ್ಗ ಮತ್ತು ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸಬೇಕಾಗಿದೆ ರೈತರಿಗೆ ಉಚಿತ ವಿದ್ಯುತ್ ಕೊಡುತ್ತೇವೆ, ಕೈಗಾರಿಕೆ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುವ ರಾಜ್ಯ ಸರಕಾರ ಗ್ರಾಮೀಣ ಭಾಗದ ರೈತರಿಗೆ ಸಿಂಗಲ್ ಪೇಸ್ ವಿದ್ಯುತ್ ನೀಡುತ್ತಿದೆ. ಸಾರ್ವಜನಿಕರಿಗೆ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ ಹೊರತೂ ಒಂದೇ ಒಂದು ಯುನಿಟ್ ವಿದ್ಯುತ್ ಉತ್ಪಾದಿಸಲು ಕ್ರಮ ಜರುಗಿಸಿಲ್ಲ ಎಂದವರು ರಾಜ್ಯ ಸರ್ಕಾರವನ್ನು ಟೀಕಿಸಿದರು.

ವಿದ್ಯುತ್ ವೈಫಲ್ಯ  ಖಂಡಿಸಿ  ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ  ನೂರಾರು ರೈತರು, ಕಾರ್ಯಕರ್ತರು,  ಬಸವೇಶ್ವರ ವೃತ್ತದ ಮೂಲಕ ತಂಗಡಗಿ ರಸ್ತೆಯಲ್ಲಿರುವ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದರಲ್ಲದೇ ಬಾಗಿಲಿಗೆ ಬೀಗ ಜಡಿದು ಧರಣಿ ಕುಳಿತು ಹೆಸ್ಕಾಂ ಸಿಬ್ಬಂದಿ  ಕಾರ‌್ಯಕ್ಕೆ ಅಡ್ಡಿಯುಂಟು ಮಾಡಿದರು. ಪ್ರತಿಭಟನೆ ಮತ್ತು ಬೀಗ ಹಾಕಿದ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ ದೊಡಮನಿ ಅವರಿಗೆ  ಮನವಿ ಪತ್ರ ಸಲ್ಲಿಸಲಾಯಿತು. 

ಪ್ರತಿಭಟನೆಯಲ್ಲಿ  ತಾ.ಪಂ ಸದಸ್ಯರಾದ ನಜೀರ್ ಅಹ್ಮದ ಕೊಣ್ಣೂರ, ಯಮನಪ್ಪ ಹಾಲವಾರ, ಪ್ರಚಂಡಪ್ಪ ಸರೂರ, ಅಬ್ದುಲ್ ತಾಳಿಕೋಟಿ, ಬಂದು ಅತ್ತಾರ, ಜಾವಿದ ಸುಲ್ತಾನಪುರ, ಅಬ್ದುಲ ರಜಾಕ ತಾಳಿಕೋಟಿ, ಮಶ್ಯಾಕ ಅವಟಿ, ಅಬ್ದುಲ ರಕ್ಕಸಗಿ, ಪಿ.ವೈ.ಚಲವಾದಿ, ಹಬೀಬ ಸಿಕ್ಕಲಗಾರ, ಅಲ್ತಾಪ ಮುಲ್ಲಾ, ಫಯಾಜ ಕಸಾಬ, ಮುತ್ತು ಕುಪ್ಪಸ್ತ, ಅಬೂಬಕರ ಕುಳಗೇರಿ, ಬುಡ್ಡಾ ಅವಟಿ, ಗಣಿ ಅವಟಿ, ಮಶ್ಯಾಕ ಅವಟಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಹೆಸ್ಕಾಮ್ ಸಿಬ್ಬಂದಿ ವರ್ಗದ ಎಸ್.ಐ.ಹಿರೇಮನಿ, ಎಸ್.ಎಸ್.ಪಾಟೀಲ, ಎಂ.ಎಸ್.ತೆಗ್ಗಿನಮಠ, ಸಿಪಿಐ ವಿಠ್ಠಲ ಏಳಗಿ, ಪಿ.ಎಸ್.ಐ. ಎಸ್.ಬಿ.ಮಾಳಗೊಂಡ ಹೆಚ್ಚಿನ ಗಲಾಟೆಯಾಗದಂತೆ ಬಿಗಿ ಬಂದೋಬಸ್ತ ಕೈಕೊಂಡಿದ್ದರು.

ವಿದ್ಯುತ್ ಪೂರೈಸದಿದ್ದರೆ ಧರಣಿ ಎಚ್ಚರಿಕೆ 
ಇಂಡಿ : ತಾಲ್ಲೂಕಿನ ರೈತರಿಗೆ ವಿದ್ಯುತ್ ಪೂರೈಸುವದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇನ್ನು ಮುಂದೆ ಸರ್ಕಾರ ರೈತರಿಗೆ ವಿದ್ಯುತ್ ಪೂರೈಸದಿದ್ದರೆ ಅಕ್ಟೋಬರ್ 2 ರಿಂದ ಸತ್ಯಾಗ್ರಹ ಪ್ರಾರಂಭಿಸುತ್ತೇವೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಯುವಕ ಸಂಘ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT