ADVERTISEMENT

ಶಿಕ್ಷಕರಿಗೆ ಇರಲಿ ಜ್ಞಾನದ ಹಸಿವು: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 8:00 IST
Last Updated 5 ಜನವರಿ 2012, 8:00 IST
ಶಿಕ್ಷಕರಿಗೆ ಇರಲಿ ಜ್ಞಾನದ ಹಸಿವು: ಸ್ವಾಮೀಜಿ
ಶಿಕ್ಷಕರಿಗೆ ಇರಲಿ ಜ್ಞಾನದ ಹಸಿವು: ಸ್ವಾಮೀಜಿ   

ವಿಜಾಪುರ: `ನಾವು ತಿಳಿದಿರುವುದು ಬಿಂದುವಿನಷ್ಟು. ಅರಿಯದೇ ಇರುವುದು ಸಾಗರದಷ್ಟಿದೆ. ಎಲ್ಲವನ್ನೂ ತಿಳಿದುಕೊಳ್ಳಬೇಕು ಎಂಬ ಹಸಿವು ಮಾತ್ರ ನಮ್ಮನ್ನು ಜ್ಞಾನ ಮತ್ತು ಅನುಭವದ ಸಾಗರದ ಕಡೆಗೆ ಕೊಂಡೊಯ್ಯಬಲ್ಲದು~ ಎಂದು ಜ್ಞಾನಯೋಗಾಶ್ರಮದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯವರು ಸೇಂಟ್ ಜೋಸೆಫ್ ಪ್ರಾಥಮಿಕ-ಪ್ರೌಢ ಶಾಲೆಯ ಸಹಯೋಗದಲ್ಲಿ ತಿಕೋಟಾದ ಲಕ್ಷ್ಮಿ ದೇವಸ್ಥಾನದಲ್ಲಿ ವಿಜಾಪುರ ನಗರ ವಲಯದ ಎಲ್ಲ ಪ್ರಾಥಮಿಕ-ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಏರ್ಪಡಿಸಿದ್ದ ಶೈಕ್ಷಣಿಕ ಸಂವಾದ ಮತ್ತು ಕಾರ್ಯಾಗಾರದ ಸಾನಿಧ್ಯ ವಹಿಸಿ ಮಾತನಾಡಿದರು.

ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ನಗರ ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಕ್ಕಳಲ್ಲಿರುವ ಅದ್ಭತ ಚೈತನ್ಯ ಶಕ್ತಿಯನ್ನು ಪೋಷಿಸಿ ಬೆಳೆಸುವ ಗುರುತರ ಜವಾಬ್ದಾರಿ ಪಾಲಕರು ಮತ್ತು ಶಿಕ್ಷಕರ ಮೇಲಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ನಮ್ಮ ರಾಜ್ಯದ ಶೈಕ್ಷಣಿಕ ಕ್ಷೇತ್ರ ಅಮೂಲಾಗ್ರ ಬದಲಾವಣೆ ಆಗಬೇಕಾಗಿದೆ. ರಾಷ್ಟ್ರೀಯ ಏಕರೂಪ ಶಿಕ್ಷಣ ನೀತಿ-ನಿಯಮದಂತೆ ನಾವು ಬದಲಾವಣೆಗಳಿಗೆ ಹೊಂದಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಿಕ್ಷಣ ತಜ್ಞ ಎ.ಎಸ್. ರಾಮಚಂದ್ರರಾವ್, ಸುರೇಶ ಕುಲಕರ್ಣಿ ಶಿಕ್ಷಕರಿಗೆ ಕಲಿಕಾ ವಿಧಾನ ,ಕೌಶಲ್ಯದ ಬೆಳವಣಿಗೆಯ ಬಗೆಯನ್ನು ವಿವರಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಂಕ್ರುಬಾಯಿ ಚಲವಾದಿ, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಅವಟಿ, ಜಿ.ಪಂ. ಸದಸ್ಯ ತಮ್ಮಣ್ಣ ಹಂಗರಗಿ, ಜಿ.ಪಂ. ಸಿಇಒ ಎ.ಎನ್. ಪಾಟೀಲ, ಡೈಟ್ ಪ್ರಾಚಾರ್ಯ ಸಿ.ವಿ. ಹಿರೇಮಠ, ತಾ.ಪಂ. ಸದಸ್ಯೆ ಸುಜಾತಾ ಗಾಂಜೇನವರ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಟಿ.ಎಚ್. ಮೇಲಿನಕೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವೈ. ಕೊಣ್ಣೂರ ಇತರರು ವೇದಿಕೆಯಲ್ಲಿದ್ದರು. ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕರಾದ ಡಾ.ಎ.ಎಂ. ಲಿಮಕರ ಕಾರ್ಯಕ್ರಮ ನಿರೂಪಿಸಿದರು. ನಾಗೇಂದ್ರ ಸಿನ್ನೂರ ಸ್ವಾಗತಿಸಿದರು. ಶಿಕ್ಷಕ ಇ.ರಾ. ಸಾರವಾಡ ವಂದಿಸಿದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.