ADVERTISEMENT

ಸಂಘಟಿತರಾಗಲು ಜಂಗಮರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 6:52 IST
Last Updated 9 ಏಪ್ರಿಲ್ 2013, 6:52 IST

ಮುದ್ದೇಬಿಹಾಳ: ಭಾರತೀಯ ಸಂಸ್ಕೃತಿಗೆ ತಮ್ಮದೇ ಆದ ಕೊಡುಗೆ ನೀಡಿ, ಹಿಂದೂ ಸಮಾಜವನ್ನು ಶತ ಶತಮಾನಗಳ ಕಾಲ ಮುನ್ನಡೆಸಿದ ಜಂಗಮರು ಇದೀಗ ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದು, ಅವರೆಲ್ಲ ಸಂಘಟಿತರಾದರೆ ಮಾತ್ರ ಸರ್ಕಾರದಿಂದ ಬರುವ ಸೌಲಭ್ಯಗಳು ದೊರೆಯುತ್ತವೆ ಎಂದು ಹರಿಹರದ ಉಪನ್ಯಾಸಕ ಶಿವಯೋಗಿ ಕಂಬಾಳಿಮಠ ಹೇಳಿದರು.

ಪಟ್ಟಣದ ವಿಜಯ ಮಹಾಂತೇಶ ಮಂಗಲ ಕಾರ್ಯಾಲಯದಲ್ಲಿ ಮಂಗಳ ವಾರ ನಡೆದ ಜಗದ್ಗುರು ರೇಣು ಕಾಚಾರ್ಯ ಭಗವತ್ಪಾದರ ಜಯಂತ್ಯುತ್ಸವ, ಸಾಧಕರ ಸನ್ಮಾನ ಹಾಗೂ ಧರ್ಮಸಭೆಯಲ್ಲಿ ಅತಿಥಿ ಉಪನ್ಯಾಸಕರಾಗಿ ಮಾತನಾಡಿದರು.
ವೀರಶೈವ ಸಮಾಜಕ್ಕೆ ರೇಣುಕಾ ಚಾರ್ಯರ ಕೊಡುಗೆ ಅಪಾರ. ಸರ್ವಧರ್ಮಗಳ ಸಿದ್ಧಾಂತಗಳನ್ನು ಒಳಗೊಂಡ ಏಕೈಕ ಸಮಾಜ ಜಂಗಮ ಸಮಾಜ ಎಂದರು.

ಅಖಿಲ ಕರ್ನಾಟಕ ಜಂಗಮ ಕ್ಷೇಮಾ ಭಿವೃದ್ಧಿ ಮಹಾಸಭಾದ ರಾಜಾಧ್ಯಕ್ಷ ಎಸ್.ಆರ್.ನವಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿರೇಮಠ, ಸಮಾಜದಲ್ಲಿ ಜಂಗಮರಿಗೆ ಗುರುವಿನ ಸ್ಥಾನ ದೊರಕಿದ್ದು, ಇಂದಿನ ಯುವ ಪೀಳಿಗೆಯವರು ನಮ್ಮ ಪೂರ್ವಜರ ಆಚಾರ ವಿಚಾರಗಳನ್ನು ಅರಿತು ನಡೆದರೆ ಗೌರವ ಮತ್ತಷ್ಟು ಹೆಚ್ಚುತ್ತದೆ ಎಂದು ಹೇಳಿದರು.
 
ಶಿಕ್ಷಕರಾದ ಬಸವರಾ ಹಿರೇಮಠ ಹಾಗೂ ಸಿದ್ಧಲಿಂಗಯ್ಯ ಕಲ್ಯಾಣಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಾನಿಧ್ಯ ವಹಿಸಿದ್ದ ಚಿಮ್ಮಲಗಿಯ ನೀಲಕಂಠ ಶಿವಾಚಾರ್ಯ ಸ್ವಾಮಿಗಳು, ಬ.ಬಾಗೇವಾಡಿಯ ಶಿವಪ್ರಕಾಶ ಶಿವಾ ಚಾರ್ಯ ಸ್ವಾಮಿಗಳು, ಕುಂಟೋಜಿ ಹಿರೇಮಠದ ಚನ್ನವೀರ ದೇವರು ಆಶೀ ರ್ವಚನ ನೀಡಿದರು.  ಅಧ್ಯಕ್ಷತೆಯನ್ನು ವೀರಮಹೇಶ್ವರ ತರುಣ ಸಂಘದ ಉಪಾಧ್ಯಕ್ಷ ಗೌರಿಶಂಕರ ಪುರಾಣಿಕಮಠ ವಹಿಸಿದ್ದರು. ಧರ್ಮಸಭೆಗೂ ಮುನ್ನ ಶ್ರೀ ಮದ್ ಜಗದ್ಗುರು ರೇಣುಕ ಭಗವತ್ಪಾದರ ಭಾವಚಿತ್ರವನ್ನು ಪಟ್ಟಣದ ಕಿಲ್ಲಾ ಗಲ್ಲಿಯಲ್ಲಿರುವ ವೀರಭಧ್ರೇಶ್ವರ ದೇವಸ್ಥಾನದಿಂದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಸಮಾಜ ಸೇವಕರಾದ ಚಂದ್ರಶೇಖರ ದಡ್ಡಿ, ಸತೀಶ ಕುಲಕರ್ಣಿ, ಶಿವಪುತ್ರಯ್ಯ ನಿಡಗುಂದಿಮಠ, ಸಿದ್ಧಲಿಂಗಯ್ಯ ಕಲ್ಯಾಣಮಠ, ಸಂಗಯ್ಯ ಸರಗಣಾ ಚಾರಿ, ಸಿದ್ರಾಮಯ್ಯ ಗಚ್ಚಿನಮಠ, ಕಾಮರಾಜ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.
ಪಲ್ಲವಿ ತೆಗ್ಗಿನಮಠ ಪ್ರಾರ್ಥಿಸಿದರು. ಎನ್.ಎಸ್. ರಾಮಗಿರಿಮಠ ಸ್ವಾಗತಿಸಿದರು. ಶಿಕ್ಷಕ ವಾಗೀಶ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಬಿ.ಎಚ್. ಹಿರೇಮಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.