ADVERTISEMENT

ಸಂಭ್ರಮದ ಸಿದ್ಧಪ್ಪ ಮುತ್ಯಾನ ಜಾತ್ರೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 4:57 IST
Last Updated 5 ಏಪ್ರಿಲ್ 2013, 4:57 IST

ಮುದ್ದೇಬಿಹಾಳ: ಮುತ್ಯಾನ ಪಲ್ಲಕ್ಕಿ ಬಂತು, ಬಂತು ಎಂದದ್ದೇ ತಡ, ನೂರಾರು ಮಹಿಳೆಯರು, ಬಾಲಕರು, ವೃದ್ಧರ ಸಹಿತ ದೇವರ ಪಲ್ಲಕ್ಕಿ ಬರುವ ಮಾರ್ಗದಲ್ಲಿ ಅಡ್ಡ ಬಿದ್ದರು. ನೋಡ ನೋಡುತ್ತಿದ್ದಂತೆಯೇ ಸುಂಗಟಾನ ಮುತ್ಯಾನ ಪಲ್ಲಕ್ಕಿ ಹೊತ್ತಿದ್ದವರು ನಿಧಾನವಾಗಿ ಒಂದೊಂದೇ ಹೆಜ್ಜೆಗಳನ್ನು ಸದ್ಭಕ್ತರ ಮೇಲೆ ಇಡುತ್ತ ನಡೆಯುವ ಅಪರೂಪದ ದೃಶ್ಯ ಕಂಡು ಬಂತು.

ಇದು  ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ಗುರುವಾರ ನಡೆದ  ಸುಂಗಟಾನ ಸಿದ್ಧಪ್ಪ ಮುತ್ಯಾನ ಜಾತ್ರೆಯ ವಿಶೇಷ. ಭಕ್ತರು ಅಡ್ಡ ಬಿದ್ದರಲ್ಲದೇ ಪಲ್ಲಕ್ಕಿ ಹೊತ್ತವರು ತಮ್ಮ ಮೇಲೆ ಕಾಲಿಡುತ್ತಲೇ ಧನ್ಯರಾದೆವು ಎಂಬ ಕೃತಾರ್ಥ ಭಾವ ಮೆರೆದರು.

ತಂಗಡಗಿ ಗ್ರಾಮದ ಸಮೀಪದಲ್ಲಿ ಪಲ್ಲಕ್ಕಿ ಬರುತ್ತಿದೆ ಎನ್ನುವಷ್ಟರಲ್ಲಿಯೇ ಗ್ರಾಮದ ಭಕ್ತರು ಡೊಳ್ಳು, ವಾದ್ಯವೃಂದ ಸಮೇತ ಸ್ವಾಗತಿಸುವ ಕಾರ್ಯ ನಡೆಯಿತು. ಗ್ರಾಮದ ರಸ್ತೆಯೂದ್ದಕ್ಕೂ ನಿಂತಿದ್ದ ನೂರಾರು ಮಹಿಳೆಯರು ಸುಡುತ್ತಿದ್ದ ರಸ್ತೆಗೆ ನೀರು ಸುರಿದು ತಂಪು ಮಾಡಿದರಲ್ಲದೇ ಅದೇ ಮಾರ್ಗದಲ್ಲಿ ತಾವೂ ಅಡ್ಡ ಬಿದ್ದು ಆಶೀರ್ವಾದ ಪಡೆದರು.

ಮೂಲತಃ ಸಿಂದಗಿ ತಾಲ್ಲೂಕಿನ ಸುಂಗಟಾನ, ಪವಾಡ ಪುರುಷ ಸಿದ್ಧಪ್ಪ ಮುತ್ಯಾನ  ಮೂಲ ಊರು. ಹೋಳಿ ಹುಣ್ಣಿಮೆಯ ದಿನವೇ ತನ್ನ ಮುತ್ಯಾನ ಪಲ್ಲಕ್ಕಿ ಹೊತ್ತು ಕೆಲವು ಅನುಯಾಯಿಗಳು ಬಾವೂರ, ಕೂಚಬಾಳ, ಕುಂಟೋಜಿ,ಸರೂರ, ಕೋಳೂರ ಮಾರ್ಗವಾಗಿ ತಂಗಡಗಿಗೆ ಆಗಮಿಸಿತು. 
ಮೊದಲು ಕೃಷ್ಣಾ ನದಿಯ ಹಿನ್ನೀರು ಇರದ ವೇಳೆಯಲ್ಲಿ ಕೂಡಲಸಂಗಮನಾಥನಲ್ಲಿಗೆ ಹೋಗಿ ಅಲ್ಲಿಯೇ ಗಂಗಾ ಸ್ನಾನ ಮಾಡಿ ಪವಿತ್ರತೆ ಕಾಪಾಡಲಾಗುತ್ತಿತ್ತು. ಆದರೆ ನಾರಾಯಣಪೂರ ಜಲಾಶಯದ ಹಿನ್ನೀರು ಪ್ರಮಾಣ ಬಹಳ ಇರುವುದರಿಂದ ತಂಗಡಗಿ ಸಮೀಪದ ಕುಂಚಗನೂರ ಗ್ರಾಮದ ಕೃಷ್ಣಾ ನದಿ ದಂಡೆಯಲ್ಲಿಯೇ ಮೂರು ದೇವರ ಕಲ್ಲುಗಳನ್ನು ತೊಳೆಯುವ, ದೇವರ ಮೂರ್ತಿಗಳನ್ನು ಹೊಳೆಯ ಮಧ್ಯೆ ಸ್ವಚ್ಛಗೊಳಿಸುವ ಕಾರ್ಯ ನಡೆಯಿತು. ದಂಡೆಯ ಮೇಲೆ ದೇವರ ಮೂರ್ತಿ ಹಾಗೂ ಮೂರು ಗುಂಡುಗಳಿಗೆ ಪೂಜೆ ನಡೆಯಿತು.

ದೂರ ದೂರದ ಊರುಗಳಿಂದ ಬಂದಿದ್ದ ಭಕ್ತರು ತಾವು ತಂದಿದ್ದ ಪ್ರಸಾದ, ಬುತ್ತಿ ಊಟ, ಮುತ್ಯಾನಿಗೆ ಪ್ರಿಯವಾದ ಮದ್ಯವೂ ನೈವೇದ್ಯವಾಗಿ ಸಮರ್ಪಿಸಲ್ಪಡುತ್ತದೆ. ಅದನ್ನು ಎಲ್ಲ ಭಕ್ತರಿಗೂ ಅಲ್ಲಿಯೇ ಹಂಚಲಾಗುತ್ತದೆ. ಹೊಳೆಯ ದಂಡೆಯ ಮೇಲೆಯೇ ದೇವರ ಹೇಳಿಕೆ ಕಾರ್ಯ ನಡೆಯುತ್ತದೆ. ಭಕ್ತರ ಊಟದ ನಂತರ ದೇವರ ಪಲ್ಲಕ್ಕಿ ಸಮೇತ ತಂಗಡಗಿಗೆ ಬಂದು ವಾಸ್ತವ್ಯ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.