ADVERTISEMENT

ಸಕ್ಕರೆ ಕಾರ್ಖಾನೆಗೆ ಚಾಲನೆ: ರೈತರಲ್ಲಿ ಸಂತಸ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 9:45 IST
Last Updated 24 ಫೆಬ್ರುವರಿ 2011, 9:45 IST

ಸಿಂದಗಿ: ತಾಲ್ಲೂಕಿನ ಪ್ರಪ್ರಥಮ ಸಕ್ಕರೆ ಕಾರ್ಖಾನೆ ಮನಾಲಿ ಶುಗರ್ಸ್‌ ಲಿಮಿಟೆಡ್‌ಗೆ ಬುಧವಾರ ರೈತರ ಸಭೆ ಹಮ್ಮಿಕೊಳ್ಳುವ ಮೂಲಕ ಚಾಲನೆ ನೀಡಲಾಯಿತು.ಈ ಕಾರ್ಖಾನೆ 2500 ಟನ್ ಕಬ್ಬು ನುರಿಸುವ ಕಾರ್ಯದ ಜೊತೆಗೆ 10 ಮೆಗಾವ್ಯಾಟ್ ಸಹ-ವಿದ್ಯುತ್ ಉತ್ಪಾದನಾ ಘಟಕ ಕೂಡ ಹೊಂದಿದೆ. ರೂ.100 ಕೋಟಿ ವೆಚ್ಚದಲ್ಲಿ 102 ಎಕರೆ ಭೂಮಿಯಲ್ಲಿ ಕಾರ್ಖಾನೆ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ಈಗಾಗಲೇ ರೂ.11ಕೋಟಿ ಆಡಳಿತ ಮಂಡಳಿ ಸಂಗ್ರಹಿಸಿದೆ. ಇನ್ನು ರೈತರಿಂದ ಶೇರು ಹಣ ರೂ. 30 ಕೋಟಿ ಸಂಗ್ರಹಿಸುವ ಗುರಿ ಹೊಂದಿದೆ. ಮುಂಬರುವ ನವೆಂಬರ್ ತಿಂಗಳಲ್ಲಿ ಕಬ್ಬು ನುರಿಸುವ ಕಾರ್ಯ ಆರಂಭಗೊಳ್ಳುವುದು. ಹೀಗಾಗಿ ಈ ಭಾಗದ ರೈತರು, ಜನಪ್ರತಿನಿಧಿಗಳು ಸಂಪೂರ್ಣ ಸಹಕಾರ ನೀಡುವಂತೆ ಶುಗರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಖಾಜಾಅಬ್ದುಲ್ ಅಜೀಜ್ ಬೃಹತ್ ಸಭೆಯಲ್ಲಿ ಮನವಿ ಮಾಡಿಕೊಂಡರು.

‘ಈ ಕಾರ್ಖಾನೆಯಲ್ಲಿ ಪ್ರತ್ಯಕ್ಷವಾಗಿ 400 ಜನರಿಗೆ ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗ ದೊರಕುವುದು. ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗುತ್ತದೆ’ ಎಂದು ಭರವಸೆ ನೀಡಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಮೇಶ ಭೂಸನೂರ ಮಾತನಾಡಿ, ‘ಈ ಕಾರ್ಖಾನೆ ಕಾರ್ಯಾರಂಭದ ಬಗ್ಗೆ ತಾವೂ ಸಾಕಷ್ಟು ಬಾರಿ ಅಪಸ್ವರ ಎತ್ತಿ ರೈತರಿಂದ ಪಡೆದುಕೊಂಡಿದ್ದ 102 ಎಕರೆ ಜಮೀನು ಮರಳಿಸುವಂತೆ ಒತ್ತಾಯಿಸಿದ ಕಾರಣಕ್ಕಾಗಿ ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಈಗ ಮುಂದೆ ಬಂದಿರುವುದು ಈ ಭಾಗದ ರೈತರಿಗೆ ಅಪಾರ ಹರ್ಷ ತಂದಿದೆ’ ಎಂದು ಹೇಳಿದರು.

‘ಈ ಭಾಗದಲ್ಲಿ ರೈತರು ಬೆಳೆದ ಕಬ್ಬು ಕಾರ್ಖಾನೆಗೆ ಸಾಗಾಣಿಕೆಯಾಗದೇ ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ. ಸಮೀಪದ ರೇಣುಕಾ ಶುಗರ್ಸ್‌ ರೈತರ ಕಬ್ಬು ತೆಗೆದುಕೊಳ್ಳದೇ ತುಂಬಾ ಅನ್ಯಾಯ ಮಾಡುತ್ತಿದೆ. ಹೀಗಾಗಿ ಈ ಕಾರ್ಖಾನೆ ಎದುರು ತಾವೂ ರೈತರ ಪರ ವಹಿಸಿಕೊಂಡು ಹೋರಾಟಕ್ಕೂ ಸಿದ್ಧ’ ಎಂದು ತಿಳಿಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ಈ ಭಾಗದ ಕಬ್ಬು ಬೆಳೆಗಾರರು ಅನುಭವಿಸುತ್ತಿರುವ ತೊಂದರೆ ಹಿನ್ನಲೆಯಲ್ಲಿ ಮನಾಲಿ ಶುಗರ್ಸ್‌ ಕೂಡಲೇ ಪ್ರಾರಂಭಗೊಂಡು ರೈತರಿಗೆ ಪೂರಕವಾಗಲಿ ಎಂದರು.

ನಂದಿ ಸಕ್ಕರೆ ಕಾರ್ಖಾನೆ ಮಾಜಿ ನಿರ್ದೇಶಕ ಎಚ್.ಎಸ್. ಕೋರಡ್ಡಿ, ಜಿ.ಪಂ. ಮಾಜಿ ಉಪಾಧ್ಯಕ್ಷ ಸಿದ್ದು ಪಾಟೀಲ, ಯುವ ಧುರೀಣ ಅಶೋಕ ಮನಗೂಳಿ ಅವರು, ರೈತರಿಗೆ ಕಾರ್ಖಾನೆ ವತಿಯಿಂದಲೇ ಬ್ಯಾಂಕ್ ಸಾಲ ಸೌಲಭ್ಯದ ವ್ಯವಸ್ಥೆ ಮಾಡಿಕೊಡಬೇಕು ಎಂದು ಕೇಳಿಕೊಂಡರು. ಬೀಳಗಿ ಮಾಜಿ ಶಾಸಕ ಜೆ.ಟಿ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ 20 ಜನ ರೈತರನ್ನು ಶುಗರ್ಸ್‌ ಆಡಳಿತ ಮಂಡಳಿ ಸನ್ಮಾನಿಸಿತು.

ರ್ಯೆತರ ಪರವಾಗಿ ರಂಜಾನ್‌ಸಾಬ ಆಹೇರಿ, ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ರಂಜಣಗಿ ಮಾತನಾಡಿ, ಕಬ್ಬು ಬೆಳೆಗಾರರಿಗೆ 2005-06ನೇ ಸಾಲಿನ ಹೆಚ್ಚುವರಿ ಕಬ್ಬಿನ ಪರಿಹಾರ ಸರ್ಕಾರ ಈ ವರೆಗೂ ಬಿಡಗಡೆಗೊಳಿಸಿಲ್ಲ ಎಂದು ಪ್ರಸ್ತಾಪಿಸಿದರು.ವೇದಿಕೆಯಲ್ಲಿ ಮನಾಲಿ ಶುಗರ್ಸ್‌ ಅಧ್ಯಕ್ಷ ಎಸ್.ಟಿ.ಪಾಟೀಲ, ನಿರ್ದೇಶಕ ವೀರೇಂದ್ರ ಪಾಟೀಲ, ವಿಜಾಪುರ ಬಿ.ಡಿ.ಎ ಅಧ್ಯಕ್ಷ ಭೀಮಾಶಂಕರ ಹದನೂರ, ರವಿಕಾಂತ ಬಗಲಿ, ಹಣಮಂತ್ರಾಯಗೌಡ ಬಿರಾದಾರ ಸೋಮಜಾಳ, ಬಿ.ಪಿ.ಕರ್ಜಗಿ, ಕೆ.ದಯಾನಂದ ವಕೀಲರು, ಎಂ.ಎಸ್.ಪಾಟೀಲ ಕೋರಳ್ಳಿ, ಈರಗಂಟೆಪ್ಪ ಮಾಗಣಗೇರಿ, ಶ್ರೀಶೈಲಗೌಡ ಪಾಟೀಲ ಮಾಗಣಗೇರಿ, ಬಿಜೆಪಿ ಧುರೀಣ ಪ್ರಕಾಶ ಅಕ್ಕಲಕೋಟಿ ಉಪಸ್ಥಿತರಿದ್ದರು. ಸಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.