ADVERTISEMENT

‘ಸಚಿವ ಪಾಟೀಲ ವಿರುದ್ಧ ಹೋರಾಟ ಸರಿಯಲ್ಲ’

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 7:36 IST
Last Updated 22 ಅಕ್ಟೋಬರ್ 2017, 7:36 IST

ಸಿಂದಗಿ: ರಾಜ್ಯದ ಜಲಸಂಪನ್ಮೂಲ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರ ವಿರುದ್ಧ ಇಲ್ಲ–ಸಲ್ಲದ ಆರೋಪ ಮಾಡಿ ಹತಾಶ ಮನೋಭಾವನೆಯಿಂದ ವಿಜಯಪುರ ನಗರದಲ್ಲಿ ಇದೇ 23 ರಂದು ಹೋರಾಟ ಹಮ್ಮಿಕೊಂಡಿರುವ ಬಿಜೆಪಿ ನಾಯಕರಿಗೆ ಮತಿಭ್ರಮಣೆಯಾಗಿದೆ ಎಂದು ಸಿಂದಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಠ್ಠಲ ಕೊಳ್ಳುರ ಟೀಕಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು ಎಂ.ಬಿ.ಪಾಟೀಲರು ಜಲಸಂಪನ್ಮೂಲ ಸಚಿವರಾಗಿ ಅಧಿಕಾರ ವಹಿಸಿಕೊಂಡ ಅಲ್ಪಾವಧಿಯಲ್ಲಿಯೇ ನೆನೆಗುದಿಗೆ ಬಿದ್ದಿದ್ದ ಹಲವಾರು ನೀರಾವರಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರಿಂದ ಶೇ.70ರಷ್ಟು ಭೂಮಿ ನೀರಾವರಿಗೊಳಪಟ್ಟಿವೆ. ವಿಜಯಪುರ ಜಿಲ್ಲೆಯ 10 ನೀರಾವರಿ ಯೋಜನೆಗಳ ಮೂಲಕ 15 ಲಕ್ಷ ಎಕರೆ ಜಮೀನುಗಳು ನೀರಾವರಿಯಾಗಿವೆ ಎಂದರು.

ರೈತರ ಬಗ್ಗೆ ಅಪಾರ ಕಾಳಜಿ ಹೊಂದಿ ಬರದ ನಾಡನ್ನು ಹಸಿರುಕ್ರಾಂತಿ ಮಾಡಲು ಶ್ರಮಿಸುತ್ತಿರುವ ಸಚಿವ ಪಾಟೀಲ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬಿಜೆಪಿ ನಾಯಕರು ಪಕ್ಷಾತೀತವಾಗಿ ಅಭಿನಂದಿಸುವುದನ್ನು ಬಿಟ್ಟು ಜಿಲ್ಲೆಯ ಜನತೆಯನ್ನು ತಪ್ಪು ದಾರಿಗೆ ತರಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಜಿಲ್ಲೆಗೆ ಕರೆ ತಂದು ಹೋರಾಟ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು.

ADVERTISEMENT

ಬಿ.ಎಸ್.ಯಡಿಯೂರಪ್ಪನವರ ರಾಜಕೀಯ ವರ್ಚಸ್ಸಿಗೆ ಸಚಿವ ಎಂ.ಬಿ.ಪಾಟೀಲರು ಅಡ್ಡಿಯಾಗಬಹುದು. ಒಬ್ಬ ಲಿಂಗಾಯತ ಪ್ರಬಲ ನಾಯಕ ರಾಜ್ಯದಲ್ಲಿ ಹೊರಹೊಮ್ಮುತ್ತಲಿರುವುದರಿಂದ ಹತಾಶ ಭಾವನೆಯಿಂದ ಬಿಜೆಪಿಯವರು ಈ ಹೋರಾಟ ಕೈಗೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.