ADVERTISEMENT

ಸತತ ಅಭ್ಯಾಸದಿಂದ ಯಶಸ್ಸು ಸಾಧ್ಯ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 5:20 IST
Last Updated 13 ಫೆಬ್ರುವರಿ 2012, 5:20 IST

ಬಸವನಬಾಗೇವಾಡಿ: `ವಿದ್ಯಾರ್ಥಿಗಳು ನಾವು ದಡ್ಡರೆಂಬ ಭಾವನೆ ಹೊಂದದೇ ಪ್ರಯತ್ನದಿಂದ ಫಲ ಸಿಗುತ್ತದೆ ಎಂದು ತಿಳಿದು ಅಭ್ಯಾಸದಲ್ಲಿ ತೊಡಗಿದರೆ ಪರೀಕ್ಷೆಯಲ್ಲಿ ಯಶಸ್ಸು ಕಾಣುವಿರಿ~ ಎಂದು ಮಕ್ಕಳ ಕಲ್ಯಾಣ ಸಮಿತಿಯ ಜಿಲ್ಲಾ ಅಧ್ಯಕ್ಷ ವಾಸುದೇವ ತೋಳಬಂದಿ ಹೇಳಿದರು.

ಸ್ಥಳೀಯ ನೂತನ ಪ್ರೌಢ ಶಾಲೆಯಲ್ಲಿ ಬಾಲ ವಿಕಾಸ ಅಕಾಡೆಮಿ, ಶಿಕ್ಷಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶನಿವಾರ ಹಮ್ಮಿಕೊಂಡಿದ್ದ `ಮಕ್ಕಳೇ ಪರೀಕ್ಷೆಗೆ ಸಿದ್ಧರಾಗಿ~ ಎಂಬ ಮಾರ್ಗದರ್ಶಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸತತ ಪ್ರಯತ್ನದಿಂದ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಸದ್ಭಾವನೆಗೆ ಜ್ಞಾನವೇ ಅಡಿಪಾಯ. ಆ ಜ್ಞಾನ ಪಡೆಯಲು ಪ್ರತಿಯೊಬ್ಬರು ಪ್ರಯತ್ನ ಪಡಬೇಕು. ಆ ಪ್ರಯತ್ನದಿಂದ ಪರೀಕ್ಷೆ ಎಂಬ ಭಯ ದೂರವಾಗಿ ಎಂತಹ ಪ್ರಶ್ನೆಗಳಿಗೂ ಸರಳವಾಗಿ ಉತ್ತರಿಸುವ ಸಾಮರ್ಥ್ಯ ಬರುತ್ತದೆ. ಮಹಾಪುರುಷರಾದ ಬಸವಣ್ಣ, ನೇತಾಜಿ ಸುಭಾಷಚಂದ್ರ ಬೋಸ್, ಸ್ವಾಮಿ ವಿವೇಕಾನಂದ ಮುಂತಾದ ಮಹಾ ಪುರುಷರ ಜೀವನ ಚರಿತ್ರೆಗಳನ್ನು ಓದಬೇಕು. ಅದರಿಂದ ಆದರ್ಶಗಳನ್ನು ತಿಳಿದುಕೊಳ್ಳಬೇಕು. ತಿಳಿದುಕೊಂಡ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ಇನ್ನೊಬ್ಬರಿಗೆ ಆದರ್ಶಪ್ರಾಯರಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ, ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಯನ್ನು ಸರಿಯಾಗಿ ಓದಿಕೊಂಡು ತಮಗೆ ಸರಳ ಎನಿಸಿದ ಪ್ರಶ್ನೆಗಳನ್ನು ಮೊದಲು ಬರೆಯಬೇಕು. ಆಗ ಪರೀಕ್ಷೆ ಬರೆಯುವ ಮೊದಲು ತಮ್ಮಲ್ಲಿರುವ ಭಯ ದೂರವಾಗುತ್ತದೆ. ಭಯ ದೂರವಾದಾಗ ನಾವು ಓದಿದ ವಿಷಯಗಳು ತಾನಾಗಿವೆ ನೆನಪಿಗೆ ಬರುತ್ತವೆ. ಹೀಗೆ ಪರೀಕ್ಷೆ ಎದುರಿಸುವ ಸರಳ ಮಾರ್ಗವನ್ನು ಕಂಡು ಕೊಂಡು ಪರೀಕ್ಷೆಯಲ್ಲಿ ಯಶಸ್ಸು ಹೊಂದಬೇಕು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ತಾ.ಪಂ ಅಧ್ಯಕ್ಷೆ ಕಸ್ತೂರಿ ಬಿಷ್ಟಗೊಂಡ  ಉದ್ಘಾಟಿಸಿದರು, ಜಿಲ್ಲಾ ಬಾಲ ವಿಕಾಸ ಅಕಾಡೆಮಿ ಸದಸ್ಯ ಶಾಂತು ವಿವೇಕಿ, ಎಂ.ಎ. ಗುಳೇದಗುಡ್ಡ, ಎಸ್.ಎಂ. ಸಿಂದಗಿ, ಸಿಡಿಪಿಒ ಕೆ.ವೈ. ಉಕ್ಕಲಿ ವೇದಿಕೆಯಲ್ಲಿದ್ದರು. ಸಂಪನ್ಮೂಲ ಶಿಕ್ಷಕರಾದ ಎಂ.ಎಸ್. ಝಳಕಿ, ಆರ್.ಎನ್. ಪೂಜಾರಿ, ಸಿ.ವಿ. ವಾಲಿ, ಬಿ.ಎಲ್. ಗೋಟ್ಯಾಳ, ಎಸ್.ಬಿ. ಹೊಸಮನಿ, ಉಪನ್ಯಾಸಕ ಎ.ಬಿ. ಬಿರಾದಾರ ವಿದ್ಯಾರ್ಥಿಗಳಿಗೆ ವಿಷಯವಾರು ಮಾರ್ಗದರ್ಶನ ಮಾಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪ್ರಮೀಳಾ ಸಜ್ಜನ ನಿರೂಪಿಸಿದರು. ಬೊರಮ್ಮ ಬಿರಾದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.