ADVERTISEMENT

ಸದಾಶಿವ ಆಯೋಗ ವರದಿ ಜಾರಿಗಾಗಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 6:45 IST
Last Updated 15 ಡಿಸೆಂಬರ್ 2012, 6:45 IST
ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ಶಿಫಾರಸು ಶೀಘ್ರವಾಗಿ ಜಾರಿಗೆ ತರುವಂತೆ ಆಗ್ರಹಿಸಿ ಶುಕ್ರವಾರ ಸಿಂದಗಿಯಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.
ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ಶಿಫಾರಸು ಶೀಘ್ರವಾಗಿ ಜಾರಿಗೆ ತರುವಂತೆ ಆಗ್ರಹಿಸಿ ಶುಕ್ರವಾರ ಸಿಂದಗಿಯಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.   

ಸಿಂದಗಿ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಶಿಫಾರಸು ಶೀಘ್ರವಾಗಿ ಜಾರಿಗೆ ತರಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿ ಶುಕ್ರವಾರ ಪಟ್ಟಣದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.

ಸ್ಥಳೀಯ ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಮೆರವಣಿಗೆ ವಿಜಾಪುರ ರಸ್ತೆ ಮಾರ್ಗವಾಗಿ ನೇರವಾಗಿ ತಹಶೀಲ್ದಾರ ಕಚೇರಿ ತಲುಪಿತು. ಮೆರವಣಿಗೆ ಮಾರ್ಗ ಮಧ್ಯದಲ್ಲಿ ಪ್ರತಿಭಟನಕಾರರು `ಸದಾಶಿವ ಆಯೋಗ ಜಾರಿಗೆ ಬರಲಿ' ಎಂದು ಘೋಷಣೆ ಕೂಗಿದರು.

ನಂತರ ತಹಶೀಲ್ದಾರ ಕಾರ್ಯಾಲಯದ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಸಮಿತಿ ಪ್ರಧಾನಕಾರ್ಯದರ್ಶಿ ಏಕನಾಥ ದಾಶ್ಯಾಳ, ರಾಜೂ ಗುಬ್ಬೇವಾಡ, ಯಲ್ಲೂ ಇಂಗಳಗಿ, ಮಲ್ಲೇಶಿ ಕೆರೂರ, ಶಾಂತ ಹಚ್ಯಾಳ ಮಾತನಾಡಿ, ಈಚೆಗೆ ಬೆಳಗಾವಿಯಲ್ಲಿ ಏಳು ದಿನಗಳವರೆಗೆ ನಡೆದ ಅಧಿವೇಶನದಲ್ಲಿ ಬಗರ ಹುಕುಂವನ್ನೊಳಗೊಂಡು 19 ವಿಷಯಗಳ ಬಗ್ಗೆ ಅಂಗೀಕಾರ ಮಾಡಿದ್ದಾರೆ. ಆದರೆ ಕಳೆದ 18 ವರ್ಷಗಳಿಂದ  ಒಳಮೀಸಲಾತಿಗಾಗಿ ಹೋರಾಟ ಮಾಡುತ್ತಲೇ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆಂಧ್ರ, ಪಂಜಾಬ ರಾಜ್ಯಗಳಲ್ಲಿ ಒಳಮೀಸಲಾತಿ ಜಾರಿಯಲ್ಲಿದೆ. ಕರ್ನಾಟಕದಲ್ಲಿ ಒಳ ಮೀಸಲಾತಿ ನೀತಿಯನ್ನು ಜಾರಿಗೆ ತರುತ್ತಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಡಿ. 11ರಂದು ಬೆಳಗಾವಿಯಲ್ಲಿ ಮಾದಿಗ ಮತ್ತು ಚಲವಾದಿ ಸಮುದಾಯದ ಮುಖಂಡರು ಶಾಂತಿಯುತವಾಗಿ, ಸಂವಿಧಾನಾತ್ಮಕವಾಗಿ ತಮ್ಮ ಹಕ್ಕನ್ನು ಪಡೆಯಲು ಪ್ರತಿಭಟನೆ ಮಾಡುತ್ತಿರುವ ಸಂದರ್ಭದಲ್ಲಿ ಯಾವುದೋ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಅಂಥ ಕಿಡಿಗೇಡಿಗಳನ್ನು ಪತ್ತೆ ಹಚ್ಚುವ ಮೂಲಕ ಕಾನೂನು ಕ್ರಮ ಜರುಗಿಸಿ ಗಾಯಾಳು ಅಮಾಯಕ ಜನರಿಗೆ ಸೂಕ್ತ ಪರಿಹಾರ ಘೋಷಣೆ ಮಾಡುವಂತೆ ಒತ್ತಾಯಿಸಿದರು.
ಕೂಡಲೇ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರದಿದ್ದರೆ ಸಮಸ್ತ ಮಾದಿಗ ಸಮುದಾಯ ಬಿಜೆಪಿ ಸರ್ಕಾರವನ್ನು ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯ ನೇತೃತ್ವವನ್ನು ಪರಶುರಾಮ ಹೊಸಮನಿ, ಅಶೋಕ ವಗ್ಗರ, ರಾಮ ಪುರದಾಳ, ರಾಜೂ ಬಂಕಲಗಿ, ಸಿದ್ದು ಯಂಕಂಚಿ, ರಾಜು ಮಾಡಬಾಳ, ರಮೇಶ ಕೆರೂರ, ದಯಾನಂದ ಅಂತರಗಂಗಿ, ಗಣೇಶ ಪುರದಾಳ, ಆರ್.ಕೆ. ವಿಶ್ವನಾಥ ವಹಿಸಿದ್ದರು.

ತಹಶೀಲ್ದಾರ ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.