ADVERTISEMENT

ಸಮನ್ವಯತೆಯಿಂದ ವ್ಯಕ್ತಿತ್ವ ರೂಪಿಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 7:30 IST
Last Updated 8 ಫೆಬ್ರುವರಿ 2012, 7:30 IST

ವಿಜಾಪುರ: `ಸರ್ವಧರ್ಮ ಸಮನ್ವ ಯದ ಭಾವನೆ ನಮ್ಮಲ್ಲಿರಬೇಕು. ವಿದ್ಯಾರ್ಥಿನಿಯರು ಕೂಡಿ ಕೆಲಸ ಮಾಡುವುದರ ಮೂಲಕ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು~ ಎಂದು ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಜಿ. ಮೂಲಿಮನಿ ಹೇಳಿದರು.

ಇಲ್ಲಿಯ ಮಹಿಳಾ ವಿಶ್ವವಿದ್ಯಾಲಯ ಹಾಗೂ ಬಿ.ಎಲ್.ಡಿ.ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾ ವಿದ್ಯಾಲಯದ ಸಹಯೋಗದಲ್ಲಿ ತೊರವಿಯ ಜ್ಞಾನಶಕ್ತಿ ಕ್ಯಾಂಪಸ್‌ನಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಮಟ್ಟದ ನಾಯಕತ್ವ ತರಬೇತಿ ಶಿಬಿರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಮಹಿಳಾ ವಿವಿ ಹಂಗಾಮಿ ಕುಲಪತಿ ಡಾ.ಎಸ್.ಎ. ಖಾಜಿ, ಈ ನಾಯಕತ್ವ ತರಬೇತಿ ಶಿಬಿರವು ವಿದ್ಯಾರ್ಥಿನಿಯರಲ್ಲಿ ಆತ್ಮ ವಿಶ್ವಾಸ, ಜವಾಬ್ದಾರಿ, ಹಣಕಾಸಿನ ನಿರ್ವಹಣೆ, ಸಮಾಜ ಸೇವೆ, ದೇಶಸೇವೆ ಮುಂತಾದ ಗುಣಗಳನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ ಎಂದರು.

ಮಹಿಳಾ ವಿವಿಯ ಕುಲಸಚಿವ ಡಾ.ಜಿ.ಆರ್. ನಾಯಿಕ, ನಿಸರ್ಗವನ್ನು ಪ್ರೀತಿಸುವುದು ಬಹುಮುಖ್ಯ. ಹಾಗೆಯೇ ನೆರೆಹೊರೆಯವರನ್ನು- ತಾಯ್ನಾಡನ್ನು ಪ್ರೀತಿಸಬೇಕು. ಸಮಸ್ಯೆಗಳನ್ನು ಎದುರಿಸುವ, ವಿನಾಶಕಾರಿ ಪ್ರವೃತ್ತಿಯನ್ನು ನಿಗ್ರಹಿಸುವ ಮನೋಭಾವ ಬೆಳೆಸಿ ಕೊಳ್ಳಬೇಕು ಎಂದು ಕರೆ ನೀಡಿದರು.

ಮಹಿಳಾ ವಿವಿ ಮೌಲ್ಯಮಾಪನ ಕುಲಸಚಿವೆ ಡಾ.ತೇಜಾವತಿ, ಎಲ್ಲ ದಾನಗಳಿಗಿಂತ ಶ್ರಮದಾನ ಮುಖ್ಯವಾಗಿದೆ ಎಂದರು.

ಬಿಎಲ್‌ಡಿಇ ಸಂಸ್ಥೆಯ ಆಡಳಿತಾಧಿ ಕಾರಿ ಪ್ರೊ.ಎಸ್.ಎಚ್. ಲಗಳಿ, ಇಂದು ಎಲ್ಲ ರಂಗದಲ್ಲೂ ನಾಯಕತ್ವದ ಕೊರತೆ ಕಂಡುಬರುತ್ತಿದೆ. ಮಹಿಳೆಯರು ನಾಯಕತ್ವದ ಗುಣ ಗಳನ್ನು ಬೆಳೆಸಿಕೊಂಡು ಪ್ರಾಮಾಣಿಕ ವಾಗಿ ಕಾರ್ಯನಿರ್ವಹಿಸುವುದಾಗಿ ಶಪಥ ಮಾಡಬೇಕಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ.ಬಿ.ಎಂ. ನುಚ್ಚಿ, ವಿದ್ಯಾರ್ಥಿನಿಯರು ಶ್ರಮ ಸಂಸ್ಕೃತಿಯನ್ನು ಬೆಳೆಸಿಕೊಂಡು, ಸಮಾಜದ ಋಣ ತೀರಿಸುವಂತೆ ಬದುಕಬೇಕು. ಭಾರತ ಹಳ್ಳಿಗಳ ನಾಡಾಗಿದ್ದು ಅವರ ಸಮಸ್ಯೆಗಳನ್ನು ಅರಿತು ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಆಲೋಚಿಸಬೇಕು ಎಂದು ಹೇಳಿದರು.

ಪ್ರೊ.ಸಿ.ಎ. ಚಾಂದಕವಟೆ, ಪ್ರೊ.ಡಿ.ವೈ. ಉಪ್ಪಾರ, ಪ್ರೊ.ಭಾಗ್ಯಮ್ಮ, ಸುಜಾತಾ ಉಪಾದ್ಯೆ, ಪ್ರೊ.ಬಿ.ಎಂ. ವಾಲಿಕಾರ, ಪ್ರೊ.ಡಿ.ಬಿ. ಕೋಟಿ, ಪ್ರೊ. ಬಿ.ಬಿ. ಹಚಡದ, ಪ್ರೊ.ವಿ.ಎಸ್. ಸಿನ್‌ಫಳ, ಪ್ರೊ. ಜಯಶ್ರೀ ತಿಮ್ಮನಾಯಕರ, ನಿರ್ಮಲಾ ತೊರಗಲ್, ಡಾ.ಗಂಗೂ ಮೂಲಿಮನಿ,  ಎನ್.ಪಿ. ಪೋದ್ದಾರ ಮುಂತಾದವರು ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಡಾ.ಆರ್.ವಿ. ಗಂಗಶೆಟ್ಟಿ ಸ್ವಾಗತಿಸಿದರು. ಡಾ. ಆರ್. ಸುನಂದಮ್ಮ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಪ್ರೊ.ಎಸ್.ಬಿ. ದೇಸಾಯಿ ಪರಿಚಯಿಸಿದರು, ಪ್ರೊ.ಎಚ್.ಎಂ. ಮುಜಾವರ ವಂದಿಸಿದರು, ಪ್ರೊ.ಪಿ.ವಿ. ಹಳಕಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಮಹಿಳಾ ವಿವಿ ವ್ಯಾಪ್ತಿಯ 38 ಮಹಿಳಾ ಕಾಲೇಜುಗಳ ಎನ್.ಎಸ್.ಎಸ್. ಘಟಕಗಳ ತಲಾ ಇಬ್ಬರು ಸ್ವಯಂ ಸೇವಕಿಯರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ, ಕರ್ನಾಟಕ ಪಶು ವೈದ್ಯ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ ಹಾಗೂ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಎನ್.ಎಸ್.ಎಸ್. ಸ್ವಯಂ ಸೇವಕಿಯರು ಹೀಗೆ ಒಟ್ಟು 200 ವಿದ್ಯಾರ್ಥಿನಿಯರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.