ADVERTISEMENT

ಸರ್ಕಾರದ ನಿರ್ಲಕ್ಷ್ಯದಿಂದ ನೀರಿಗಾಗಿ ಅಲೆದಾಟ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2012, 5:50 IST
Last Updated 19 ಏಪ್ರಿಲ್ 2012, 5:50 IST

ತಾಂಬಾ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ನಿರ್ಲಕ್ಷ್ಯದಿಂದಾಗಿ ವಿಜಾಪುರ  ಜಿಲ್ಲೆಯ  ಜನತೆ ಕುಡಿಯುವ ನೀರಿಗಾಗಿ ನಿತ್ಯ ಅಲೆದಾಡುವ ಸ್ಥಿತಿ ಎದುರಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.

ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಬರಗಾಲ ಪೀಡಿತ ಪ್ರದೇಶದ ರೈತನ ಸಮಸ್ಯೆಗಳ ಕುರಿತು ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು ಮಳೆಯ ನೀರನ್ನು ರಕ್ಷಿಸುವ  ಯೋಜನೆಯನ್ನು ಪ್ರತಿ ಹಳ್ಳಿಗಳಲ್ಲಿ ಪ್ರಾರಂಭಿಸಬೇಕು. ಮಳೆ ನೀರನ್ನು ನದಿಗೆ ಹರಿಯಲು ಬಿಡದೆ  ಚೆಕ್ ಡ್ಯಾಂ, ಕೆರೆ ಹಳ್ಳಗಳಲ್ಲಿ ಸಂಗ್ರಹಿಸುವ ವ್ಯವಸ್ಥೆ ಮಾಡಿದರೆ ಸಮರ್ಥವಾಗಿ ಬರ ಸ್ಥಿತಿ ಎದುರಿಸಲು ಸಾಧ್ಯ ಎಂದು ಅವರು ಹೇಳಿದರು.

ರಾಜ್ಯ ಸರ್ಕಾರದಲ್ಲಿ ಸಾಕಷ್ಟು ಹಣ ಇದ್ದರೂ ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಲು ಆಸಕ್ತಿ ತೋರುತ್ತಿಲ್ಲ. ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ರೈತರಿಗೇ ಮೋಸ ಮಾಡುತ್ತಿದೆ. ತಾವು ಮುಖ್ಯಮಂತ್ರಿಯಾಗಿದ್ದಾಗ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಗೆ ಟೆಂಡರ್ ಕರೆದು ಚಾಲನೆ ನೀಡಲಾಗಿತ್ತು. ಅದರ ಅನುಷ್ಠಾನ ವೈಫಲ್ಯದಿಂದ ಈ ಭಾಗದ ಜನರು ಬರಗಾಲ ಎದುರಿಸುವಂತಾಗಿದೆ ಎಂದು ವಿಷಾದಿಸಿದರು.

ಮಳೆ ಇಲ್ಲದೆ, ಕುಡಿಯಲು ಹನಿ ನೀರಿಗೂ ಜನ ಪರದಾಡುತ್ತಿದ್ದಾರೆ. ನೀರನ್ನೆ ನಂಬಿದ ರೈತರ ಜೀವನ ತೊಂದರೆಗೆ ಸಿಲುಕಿದೆ. ರೈತರ ಬೆಳೆ ಸಾಲ, ವಿದ್ಯುತ್ ಬಿಲ್ ಸೇರಿದಂತೆ ಎಲ್ಲ ಸಾಲಗಳನ್ನೂ ಸರ್ಕಾರ ಮನ್ನಾ ಮಾಡಬೇಕು. ಇದರಿಂದ ರೈತರು ಸಾಲದ ಹೊರೆಯ ಆತಂಕದಿಂದ ಬದುಕಿ ಜೀವಾಪಾಯ ಮಾಡಿಕೊಳ್ಳುವುದು ತಪ್ಪಲಿದೆ. ಬರಗಾಲದಿಂದ ಸುಮಾರು 4500 ಕೋಟಿ ರೂಪಾಯಿ ಮೌಲ್ಯದ ಬೆಳೆ ನಷ್ಟವಾಗಿದ್ದು, ಅದಕ್ಕೆ ಸರ್ಕಾರವೇ ಹೊಣೆ ಎಂದು ಆರೋಪಿಸಿದರು.

ಜೆಡಿಎಸ್ ಮುಖಂಡರಾದ ಬಸನಗೌಡ ಪಾಟೀಲ ಯತ್ನಾಳ, ಎಂ.ಸಿ. ಮನಗೂಳಿ ಮಾತನಾಡಿದರು. ಆರ್.ಕೆ. ರಾಠೋಡ, ಶ್ರೀಪತಿಗೌಡ ಬಿರಾದಾರ, ಸಿದ್ರಾಮ  ಪಾಟೀಲ, ರೇಶ್ಮಾ ಪಡಕನೂರ, ಕಸ್ತೂರಿಬಾಯಿ ದೊಡಮನಿ, ಪ್ರಕಾಶ ಹೀರೆಕುರುಬರ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.