ADVERTISEMENT

`ಸರ್ಕಾರದ ನೆರವಿನಿಂದ ಖಾದಿ ಪುನಶ್ಚೇತನ'

ರಾಜ್ಯ ಖಾದಿ ಗ್ರಾಮೋದ್ಯೋಗ ಸಂಘಗಳ ಸಲಹಾ ಸಮಿತಿ ಅಧ್ಯಕ್ಷ ಪಾಪು ಅಭಿಮತ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 5:31 IST
Last Updated 19 ಜುಲೈ 2013, 5:31 IST

ಹುಬ್ಬಳ್ಳಿ: `ಬಜೆಟ್‌ನಲ್ಲಿ ಖಾದಿ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ನೀಡಿರುವ ಕೊಡುಗೆಯಿಂದ ಈ ವಲಯದ ಪುನಶ್ಚೇತನಕ್ಕೆ ಅವಕಾಶವಾಗಲಿದೆ' ಎಂದು ಹಿರಿಯ ಪತ್ರಕರ್ತ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘಗಳ ಸಲಹಾ ಸಮಿತಿ ಅಧ್ಯಕ್ಷ ಡಾ. ಪಾಟೀಲ ಪುಟ್ಟಪ್ಪ ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಖಾದಿ ನೇಯುವವರಿಗೆ ಪ್ರೋತ್ಸಾಹ ಧನವಾಗಿ ರೂ16 ಕೋಟಿ, ಖಾದಿ ಕ್ಷೇತ್ರದ ಪುನಶ್ಚೇತನಕ್ಕಾಗಿ ರೂ11 ಕೋಟಿ ಹಾಗೂ ಬೆಂಗೇರಿಯ ರಾಷ್ಟ್ರಧ್ವಜ ತಯಾರಿಕಾ ಘಟಕಕ್ಕೆ ರೂ1 ಕೋಟಿ ನೀಡಿದ್ದಾರೆ. ಸರ್ಕಾರದ ಈ ಕ್ರಮದಿಂದ 32,500 ಕಾರ್ಮಿಕರ ಬದುಕು ಹಸನಾಗಲಿದೆ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಖಾದಿ ನೇಯುವವರಿಗೆ ಈ ಹಿಂದೆ ಕೇವಲ 10 ಪೈಸೆ ಪ್ರೋತ್ಸಾಹ ಧನ ಸಿಗುತ್ತಿತ್ತು. ಈಗ 5 ರೂಪಾಯಿವರೆಗೂ ದೊರೆಯಲಿದೆ. ಮುಚ್ಚಿರುವ ಖಾದಿ ಘಟಕಗಳನ್ನು ಹಂತಹಂತವಾಗಿ ಮತ್ತೆ ತೆರೆಯಲಾಗುವುದು ಎಂದು ಅವರು ಹೇಳಿದರು.

ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಸಂಯುಕ್ತ   ಸಂಘದಲ್ಲಿ   ಫಿನಾಯಿಲ್, ಸೋಪು, ವಾಶಿಂಗ್ ಪೌಡರ್ ಹಾಗೂ ಪೀಠೋಪಕರಣ ತಯಾರಿಕೆಯನ್ನು ಮತ್ತೆ ಆರಂಭಿಸಲಾಗಿದೆ. ಈ ಎಲ್ಲ ವಸ್ತುಗಳನ್ನು  ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡಲಾಗುವುದು. ಹುಬ್ಬಳ್ಳಿಯಲ್ಲಿ `ಖಾದಿ ಗ್ರಾಮ' ನಿರ್ಮಾಣ ಯೋಜನೆಯನ್ನು ಕೈಬಿಡುವುದಿಲ್ಲ ಎಂದು ಪಾಟೀಲ ಪುಟ್ಟಪ್ಪ ಹೇಳಿದರು.

`ಸರ್ಕಾರವು ಬೆಂಗೇರಿಯ ರಾಷ್ಟ್ರ ಧ್ವಜ ತಯಾರಿಕಾ ಘಟಕಕ್ಕೆ ನೀಡಲಿರುವ ಹಣದಿಂದ ವಸ್ತು ಸಂಗ್ರಹಾಲಯ  ನಿರ್ಮಿಸಲಾಗುವುದು. ಜತೆಗೆ ಇನ್ನೂ ನಾಲ್ಕು ಕಡೆ ರಾಷ್ಟ್ರ ಧ್ವಜ ತಯಾರಿಸುವ ಘಟಕಗಳನ್ನು ತೆರೆಯುವ ಚಿಂತನೆ  ಇದೆ. ಉದ್ಯೋಗ ಖಾತ್ರಿ ಯೋಜನೆ ಅಡಿ ಖಾದಿ ಸಂಘಗಳ ಕಟ್ಟಡ ನಿರ್ಮಾಣ ಹಾಗೂ ನವೀಕರಣಕ್ಕೆ ಅನುಕೂಲ ಕಲ್ಪಿಸುವುದಾಗಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಭರವಸೆ ನೀಡಿದ್ದಾರೆ' ಎಂದು ಸಲಹಾ ಸಮಿತಿ ಸಂಚಾಲಕ ಉಮೇಶ ಬಳಿಗಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.