ADVERTISEMENT

ಸಾವಿರ ಮುಖಬೆಲೆ ನೋಟು ಕಾರುಬಾರು

​ಪ್ರಜಾವಾಣಿ ವಾರ್ತೆ
Published 3 ಜನವರಿ 2011, 11:20 IST
Last Updated 3 ಜನವರಿ 2011, 11:20 IST

ಕೆಜಿಎಫ್: ಪಟ್ಟಣದಲ್ಲೆಗ ಐದು ನೂರು, ಸಾವಿರ ಮುಖ ಬೆಲೆಯ ನೋಟುಗಳದೇ ಕಾರುಬಾರಾಗಿದೆ. ಹತ್ತು-ಇಪ್ಪತ್ತು ರೂಪಾಯಿ ವ್ಯಾಪಾರಕ್ಕೂ ಜನರು ಐದು ನೂರು, ಸಾವಿರ ಮುಖ ಬೆಲೆಯ ನೋಟುಗಳನ್ನು ತೆಗೆಯುತ್ತಿದ್ದಾರೆ. ಈಚೆಗೆ ನಡೆದ ಜಿ.ಪಂ. ಮತ್ತು ತಾ.ಪಂ ಚುನಾವಣೆಯಲ್ಲಿನ ಹಣದ ಪ್ರಭಾವ ಇದಕ್ಕೆಲ್ಲ ಕಾರಣವಾಗಿದೆ.

ಈ ನೋಟುಗಳಿಗೆ ಚಿಲ್ಲರೆ ಒದಗಿಸುವುದೇ ವರ್ತಕರಿಗೆ ದೊಡ್ಡ ಸಮಸ್ಯೆಯಾಗಿದೆ. ಪ್ರತಿ ವ್ಯಾಪಾರಕ್ಕೂ ಐನೂರು-ಸಾವಿರ  ಮುಖ ಬೆಲೆಯ ನೋಟು ತೆಗೆಯುತ್ತಾರೆ. ಇಲ್ಲವೆ ಚಿಲ್ಲರೆ ಕೊಡಿ ಎಂದು ದುಂಬಾಲು ಬೀಳುತ್ತಾರೆ ಎಂದು ಎಂ.ಜಿ.ಮಾರುಕಟ್ಟೆಯ ವರ್ತಕ ಸಾದಿಕ್ ‘ಪ್ರಜಾವಾಣಿ’ಗೆ ತಿಳಿಸಿದರು.

ಚುನಾವಣೆಗೆ ಒಂದು ವಾರದ ಮೊದಲೇ ಬ್ಯಾಂಕುಗಳಲ್ಲಿ 500-1000  ನೋಟುಗಳಿಗೆ ತೀವ್ರ ಬೇಡಿಕೆ ಹೆಚ್ಚಿತ್ತು. ನಗರದಲ್ಲಿ ನೋಟುಗಳ ಅಭಾವ ಕಾಣಿಸಿಕೊಂಡಾಗ ಬಂಗಾರಪೇಟೆಯ ಅಕ್ಕಿ ಮಿಲ್ ಮಾಲೀಕರ ಹಾಗೂ ಫೈನಾನ್ಸಿಯರ್ಸ್‌ಗಳ ಮೊರೆ ಹೋಗಲಾಗಿತ್ತು ಎಂಬ ಸುದ್ದಿಯೂ ಇತ್ತು. ನೋಟಿಗೆ ಓಟು ಎಂಬ ಸಿದ್ದಾಂತವನ್ನು ಬಹುತೇಕ ಮತದಾರರು ಅಳವಡಿಸಿಕೊಂಡಿರುವುದು ಈ ಚುನಾವಣೆಯಲ್ಲಿ ಸ್ಪಷ್ಟವಾಗಿದೆ.

ಗ್ರಾಮಗಳಿಗೆ ಪ್ರಚಾರಕ್ಕೆ ತೆರಳುತ್ತಿದ್ದ  ಎಲ್ಲಾ ಕಾರ್ಯಕರ್ತರಿಗೂ ಸವಿನಯ ಸ್ವಾಗತ ದೊರಕುತ್ತಿತ್ತು. ಯಾರನ್ನೂ ವಿರೋಧ ಕಟ್ಟಿಕೊಳ್ಳುವುದು ಬೇಡ, ಬಂದಷ್ಟು ಬರಲಿ ಎಂಬ ವ್ಯಾಪಾರ ನೀತಿ ಹಳ್ಳಿಗಳಲ್ಲಿ ಕಾಣುತ್ತಿತ್ತು.  ಆ ಪಕ್ಷದವರು ಬಂದಿದ್ದರು, ಇಷ್ಟು ಕೊಟ್ಟು ಹೋದರು, ನೀವು ಎಷ್ಟು ಕೊಡುತ್ತೀರ ಎಂದು ಮುಲಾಜಿಲ್ಲದೆ ಕೇಳುತ್ತಿದ್ದ ದೃಶ್ಯ ಎಲ್ಲೆಡೆ ಕಾಣುತ್ತಿತ್ತು. ಐನೂರು ಮತ್ತು ಸಾವಿರ ರೂಪಾಯಿ ನೋಟಿನ ಮುಂದೆ ನೂರು ರೂಪಾಯಿ ನೋಟು ಮೌಲ್ಯ ಕಳೆದುಕೊಂಡಿತ್ತು.

ದುಡ್ಡು ಎಲ್ಲರೂ ಕೊಡಬೇಕು ಎಂದು ಮತದಾರ ಭಾವಿಸುತ್ತಾನೆ. ನಂತರ ಹಣಕೊಟ್ಟವರಲ್ಲೇ ಉತ್ತಮ ಯಾರು ಎಂದು ಯೋಚಿಸುತ್ತಾನೆ. ಈಗಿನ ಮತದಾರರನ್ನು ನಂಬುವುದಾದರೂ ಹೇಗೆ ಎಂಬ ಆತಂಕವನ್ನು ಹಿಂದೆ ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ರಾಜೇಂದ್ರನ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.