ADVERTISEMENT

ಸಿಂದಗಿ: ಜ್ಞಾನಭಾರತಿ ವಿದ್ಯಾಮಂದಿರಕ್ಕೆ ಬೆಳ್ಳಿ ಸಂಭ್ರಮ

400ಕ್ಕೂ ಹೆಚ್ಚು ಮಾತೆಯರಿಂದ ಮಕ್ಕಳಿಗೆ ಕೈ ತುತ್ತು; ಮೂರು ದಿನದ ಕಾರ್ಯಕ್ರಮಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 7:21 IST
Last Updated 10 ಮಾರ್ಚ್ 2018, 7:21 IST
ಸಿಂದಗಿ ನಗರದ ಜ್ಞಾನಭಾರತಿ ವಿದ್ಯಾಮಂದಿರದ ಹೊರ ನೋಟ
ಸಿಂದಗಿ ನಗರದ ಜ್ಞಾನಭಾರತಿ ವಿದ್ಯಾಮಂದಿರದ ಹೊರ ನೋಟ   

ಸಿಂದಗಿ: ನಗರದ ಬಸವೇಶ್ವರ ವಿದ್ಯಾ ಪ್ರಸಾರ ಸಮಿತಿಯ ಜ್ಞಾನಭಾರತಿ ವಿದ್ಯಾಮಂದಿರ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದು, ಮೂರು ದಿನಗಳ ಕಾರ್ಯಕ್ರಮಗಳು ಶುಕ್ರವಾರ ಆರಂಭಗೊಂಡವು.

ಮಾತೆಯರ ಸಾಮೂಹಿಕ ಕೈ ತುತ್ತು ಕಾರ್ಯಕ್ರಮ ಶುಕ್ರವಾರ ಯಶಸ್ವಿಯಾಗಿ ಜರುಗಿತು. 400ಕ್ಕೂ ಹೆಚ್ಚು ಮಾತೆಯರು ಮಕ್ಕಳಿಗೆ ಕೈ ತುತ್ತು ತಿನ್ನಿಸುವ ದೃಶ್ಯ ಹೃದಯಸ್ಪರ್ಶಿಯಾಗಿತ್ತು.

ಶನಿವಾರ ಬೆಳಿಗ್ಗೆ ವಿದ್ಯಾಮಂದಿರ ಆವರಣದಿಂದ ಹೊರಡುವ ಸರಸ್ವತಿ ಪುತ್ಥಳಿ ಶೋಭಾಯಾತ್ರೆಗೆ ಪ್ರಭು ಸಾರಂಗದೇವ ಸ್ವಾಮೀಜಿ ಚಾಲನೆ ನೀಡುವರು. ಸಂಜೆ ಕಿರುತೆರೆ ಕಲಾವಿದೆ ಇಂದುಮತಿ ಸಾಲಿಮಠ, ಗಾಯಕ ಮಹೇಶ ಪೋದ್ದಾರ ಸಮ್ಮುಖದಲ್ಲಿ ಸಾಂಸ್ಕೃತಿಕ ಕಲರವ, ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.

ADVERTISEMENT

11ರಂದು ಬೆಳಿಗ್ಗೆ 11 ಗಂಟೆಗೆ ಬೆಳ್ಳಿ ಬೆಳಕು ಸ್ಮರಣ ಸಂಚಿಕೆ ಬಿಡುಗಡೆ, ಶೈಕ್ಷಣಿಕ ಚಿಂತನಾ ಗೋಷ್ಠಿ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ, ವಿಧಾನಪರಿಷತ್ ಸದಸ್ಯ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವ ಎಂ.ಸಿ.ಮನಗೂಳಿ ಪಾಲ್ಗೊಳ್ಳುವರು. ಸಂಜೆ 5.30ಕ್ಕೆ ಗುರುವಂದನೆ, ಶೈಕ್ಷಣಿಕ ಚಿಂತನಾಗೋಷ್ಠಿ ಕಾರ್ಯಕ್ರಮ ಗಳು ನಡೆಯಲಿವೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

ಹಂದಿಗನೂರ ಗ್ರಾಮದ ಮಡಿವಾಳಯ್ಯ ಹಿರೇಮಠ ಸಂಸ್ಕಾರ ಪೂರ್ಣ, ನೈತಿಕ ಮೌಲ್ಯ ಪ್ರಸಾರದ ಸದುದ್ದೇಶವಿಟ್ಟುಕೊಂಡು, ವೈಯಕ್ತಿಕ ಬದುಕನ್ನು ಬದಿಗಿಟ್ಟು ದುಡಿಮೆಯ ಆದಾಯವೂ ಶಾಲೆಯ ಏಳ್ಗೆಗಾಗಿ ವ್ಯಯಿಸಿದರು. ಶಾಲೆಯೇ ದೇವಾಲಯ, ಮಕ್ಕಳೇ ದೇವರು, ಪರಿಶ್ರಮವೇ ಪ್ರಸಾದ ಎಂಬ ಮಂತ್ರ ಉಚ್ಛರಿಸುತ್ತ 1993–94ರಲ್ಲಿ ಜ್ಞಾನಭಾರತಿ ವಿದ್ಯಾಮಂದಿರ ಸ್ಥಾಪಿಸಿದರು.

ಪೂರ್ವ ಪ್ರಾಥಮಿಕ ಹಂತದಿಂದ ಪಿಯು ಕಾಲೇಜು, ಕಂಪ್ಯೂಟರ್ ತರಬೇತಿ ಕೇಂದ್ರ, ಸಂಗೀತ ಪಾಠ ಶಾಲೆ, ಡಿ.ಇಡಿ ಕಾಲೇಜುಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಹಿರಿಯಮಠದ ಶಿವಾನಂದ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷರಾಗಿದ್ದಾರೆ. ಮಡಿವಾಳಯ್ಯ ಹಿರೇಮಠ ಕಾರ್ಯದರ್ಶಿಯಾಗಿದ್ದಾರೆ. ಪ್ರೇಮಾ ನಾಯ್ಕ, ಜಗದೀಶ ಪಾಟೀಲ, ಜಗದೇವಿ ನಂದಿಕೋಲ ವಿದ್ಯಾ ಮಂದಿರದ ಮುಖ್ಯಸ್ಥರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.