ADVERTISEMENT

ಸಿಂದಗಿ ಬಂದ್ ಸಂಪೂರ್ಣ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 5:56 IST
Last Updated 24 ಡಿಸೆಂಬರ್ 2017, 5:56 IST

ಸಿಂದಗಿ: ದಲಿತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಆರೋಪಿಗಳನ್ನು ಕೂಡಲೇ ಬಂಧಿಸಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ನೀಡಿದ ‘ಸಿಂದಗಿ ಬಂದ್’ ಕರೆ ಸಂಪೂರ್ಣ ಯಶಸ್ವಿಯಾಗಿದೆ. ಸಿಂದಗಿ ಇತಿಹಾಸದಲ್ಲೇ ಇದೇ ಮೊದಲು ಎನ್ನಲಾಗುತ್ತಿದೆ.

ಬೆಳಿಗ್ಗೆಯಿಂದಲೇ ಹಾಲು ಮಾರಾಟ, ಕಾಯಿಪಲ್ಲೆ ಮಾರಾಟ, ಚಹಾದ ಅಂಗಡಿ ಒಳಗೊಂಡು ಎಲ್ಲ ಅಂಗಡಿಗಳ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ಸಾರಿಗೆ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಆಟೊ ಸಂಚಾರವೂ ಇರಲಿಲ್ಲ. ಶಾಲಾ–ಕಾಲೇಜುಗಳಿಗೆ ಬಂದಿರುವ ವಿದ್ಯಾರ್ಥಿಗಳೆಲ್ಲ ವರ್ಗ ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕಾಲೇಜು ವಿದ್ಯಾರ್ಥಿನಿಯರು ಎ.ಬಿ.ವಿ.ಪಿ ನೇತೃತ್ವದಲ್ಲಿ ವಿಜಯಪುರ ಮುಖ್ಯರಸ್ತೆಯಲ್ಲಿ ಮೂರು ಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು. ಅಂಬೇಡ್ಕರ್ ವೃತ್ತ, ಟಿಪ್ಪು ಸುಲ್ತಾನ ವೃತ್ತ, ಬಸವೇಶ್ವರ ವೃತ್ತ, ಸೋಮಲಿಂಗೇಶ್ವರ ವೃತ್ತ ಗಳಲ್ಲಿ ಪ್ರತಿಭಟನಕಾರರು ಟಾಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಅಂಬೇಡ್ಕರ್ ವೃತ್ತದಲ್ಲಿ ಅಪಾರ ಸಂಖ್ಯೆಯಲ್ಲಿ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿದ್ದರು. ದಲಿತ ಪ್ರಮುಖರಾದ ಎಂ.ಎನ್.ಕಿರಣರಾಜ್, ಶ್ರೀಕಾಂತ ಸೋಮಜಾಳ, ಹುಯೋಗಿ ತಳ್ಳೊಳ್ಳಿ, ರಾವುತ ತಳಕೇರಿ, ವೈ.ಸಿ.ಮಯೂರ ಹತ್ಯೆ ಯಾದ ವಿದ್ಯಾರ್ಥಿನಿ ಕುರಿತಾಗಿ ಅವೇಶ ಭರಿತರಾಗಿ ಕ್ರಾಂತಿಗೀತೆ ಹಾಡಿದರು.

ಬಂತೇಜಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮಾಜಿ ಸಚಿವ ಎಂ.ಸಿ.ಮನಗೂಳಿ, ಶಾಸಕ ರಮೇಶ ಭೂಸನೂರ ಘಟನೆಯನ್ನು ಖಂಡಿಸಿ ಮಾತನಾಡಿದರು.

ಮೆರವಣಿಗೆಯಲ್ಲಿ ಕೇಸರಿ, ಹಸಿರು, ನೀಲಿ, ಕೆಂಪು, ಬಿಳಿ ಬಣ್ಣಗಳುಳ್ಳ ಬಾವುಟಗಳು ರಾರಾಜಿಸುತ್ತಿದ್ದವು. ಎಲ್ಲ ಸಂಘಟನೆಗಳು ಒಂದಾಗಿ ನಡೆಸಿದ ಹೋರಾಟ ಇದೇ ಮೊದಲು ಎಂದು ಸಂಘಟನೆ ಪ್ರಮುಖರು ಹೇಳಿಕೊಂಡರು.

ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಹಾದು ಮರಳಿ ಅಂಬೇಡ್ಕರ್ ವೃತ್ತ ತಲುಪಿತು. ಪ್ರತಿಭಟನಾ ಸಭೆಯಲ್ಲಿ ಘಟನೆ ಖಂಡಿಸಿ ವಿಠ್ಠಲ ಕೊಳ್ಳೂರ, ಬಿ.ಸಿ.ಕೊಣ್ಣೂರ, ನಿಂಗೂ ಬಗಲಿ, ರಜಾಕ ಮುಜಾವರ, ಸಿದ್ರಾಮಪ್ಪ ರಂಜಣಗಿ, ಪ್ರೊ.ಅರವಿಂದ ಮನಗೂಳಿ, ಅಶೋಕ ಸುಲ್ಪಿ, ವಿದ್ಯಾರ್ಥಿನಿಯರಾದ ರತ್ನಾ ನಾಯಕ, ಶಿಲ್ಪಾ ಗತ್ತರಗಿ, ಹರೀಶ ಯಂಟಮಾನ, ಸಲೀಂ ಅಲ್ದಿ, ವಕೀಲ ರಾಜಶೇಖರ ಚೌರ ಮಾತನಾಡಿದರು.

ವಕೀಲ ಎಸ್.ಬಿ.ಖಾನಾಪುರ ಮಾತನಾಡಿ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿದ್ಯಾರ್ಥಿನಿ ಶವ ಸುಡಿಸಿ ಸಾಕ್ಷ್ಯಾಧಾರ ನಾಶಪಡಿಸಿದ್ದಾರೆ ಎಂದು ಆರೋಪಿಸಿದರು.

ವಿವಿಧ ದಲಿತ ಸಂಘಟನೆಗಳು, ವಿವಿಧ ಮುಸ್ಲಿಂ ಸಂಘಟನೆಗಳು, ವಿವಿಧ ಕನ್ನಡ ಪರ ಸಂಘಟನೆಗಳು, ಮಹಿಳೆಯರು, ವಿದ್ಯಾರ್ಥಿಗಳು ಹೀಗೆ ಅಪಾರ ಸಂಖ್ಯೆಯಲ್ಲಿ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ವಕೀಲರು ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಮಿನಿವಿಧಾನಸೌಧಕ್ಕೆ ತೆರಳಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

* *

ಅತ್ಯಾಚಾರ ಎಸಗಿದ ಆರೋಪಿಗಳ ಮರ್ಮಾಂಗ ಕತ್ತರಿಸಬೇಕು. ಇದರಿಂದ ಸಮಾಜದಲ್ಲಿ ಭಯದ ವಾತಾವರಣ ಉಂಟಾಗುತ್ತದೆ
ಶೈಲಾ ಸ್ಥಾವರಮಠ
ಹಿಂದೂ ಜಾಗರಣಾ ವೇದಿಕೆ, ಮಹಿಳಾ ಘಟಕದ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.