ADVERTISEMENT

ಸೇವೆ ಕಾಯಂಗಾಗಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 6:15 IST
Last Updated 15 ಮಾರ್ಚ್ 2011, 6:15 IST
ಸೇವೆ ಕಾಯಂಗಾಗಿ ಪ್ರತಿಭಟನೆ
ಸೇವೆ ಕಾಯಂಗಾಗಿ ಪ್ರತಿಭಟನೆ   

ವಿಜಾಪುರ: ಜಿಲ್ಲೆಯ ಸರ್ಕಾರಿ ವಸತಿ ನಿಲಯದ ಕಾರ್ಮಿಕರನ್ನು ಕಾಯಂ ಗೊಳಿಸುವಂತೆ ಒತ್ತಾಯಿಸಿ ಜಿಲ್ಲೆಯ ಸರ್ಕಾರಿ ವಸತಿ ನಿಲಯದ ನೂರಾರು ಕಾರ್ಮಿಕರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಜಿಲ್ಲಾ ಸಂಘಟಕ ಎಚ್.ಟಿ. ಮಲ್ಲಿಕಾರ್ಜುನ, ಜಿಲ್ಲೆಯ ಮೊರಾರ್ಜಿ, ಬಿಸಿಎಂ, ಸಮಾಜ ಕಲ್ಯಾಣ ಇಲಾಖೆ, ಕಿತ್ತೂರ ರಾಣಿ ಚೆನ್ನಮ್ಮ ವಸತಿ ನಿಲಯಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರ ಪರಿಸ್ಥಿತಿ ಗಂಭೀರವಾಗಿದೆ. ಅವರ ಸೇವೆಯನ್ನು ಖಾಯಂಗೊಳಿಸಿ ವೇತನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.

ಕಳೆದ ಆರು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರು ಅತ್ಯಲ್ಪ ವೇತನದಲ್ಲಿ ದುಡಿಯುತ್ತಿದ್ದಾರೆ. ಸದ್ಯ ಸರ್ಕಾರ ಈಗಿರುವ ವಸತಿ ನಿಲಯದ ಕಾರ್ಮಿಕರನ್ನು ವಜಾಗೊಳಿಸಿ ಹೊಸಬರನ್ನು ನೇಮಕ ಮಾಡಲು ಹೊರಟಿದೆ ಎಂದು ಆರೋಪಿಸಿದರು.ಆರು ವರ್ಷಗಳಿಂದ ದುಡಿಯುತ್ತಿರುವ ಬಡ ಕಾರ್ಮಿಕರ ಹೊಟ್ಟೆಯ ಮೇಲೆ ಬರೆ ಎಳೆಯಲು ಹೊರಟಿರುವ ಸರ್ಕಾರದ ಕ್ರಮ ಖಂಡನಾರ್ಹವಾಗಿದೆ. ಸರ್ಕಾರ ಹೊಸಬರನ್ನು ನೇಮಕ ಮಾಡುವ ಬದಲು ಈಗಿರುವ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಘಟನಾಕಾರರಾದ ಸಿದ್ರಾಮ ಹಿರೇಮಠ, ಖಾಸಿಮ್ ನೂರಜಾನ, ಸುಲೇಚನಾ ತಿವಾರಿ, ಶಿವಾನಂದ, ಶೋಭಾ, ಭಾರತಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಆಸ್ಪತ್ರೆ ಮುಚ್ಚಲು ಡಿಎಚ್‌ಒ ಸೂಚನೆ:ಇಂಡಿ ಪಟ್ಟಣದಲ್ಲಿ ಆಯುರ್ವೇದ ಪದವಿ ಹೊಂದಿ ಅಲೋಪಥಿಕ್ ಆಸ್ಪತ್ರೆ ನಡೆಸುತ್ತಿದ್ದ ನಕಲಿ ಆಸ್ಪತ್ರೆಯನ್ನು  ಕೂಡಲೇ ಮುಚ್ಚುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್. ಜಗನ್ನಾಥ ಸೂಚಿಸಿದ್ದಾರೆ.

ಇಂಡಿ ಪಟ್ಟಣಕ್ಕೆ ಭೇಟಿ ನೀಡಿದ ಅವರು, ಇಂಡಿಯಲ್ಲಿ ಆಶ್ರಯ ಕ್ಲಿನಿಕ್ ನಡೆಸುತ್ತಿದ್ದ ಡಾ.ಮಂಜುಳಾ ಹತ್ತಿ ಮತ್ತು ಡಾ. ಬಿ.ಎಚ್. ಹತ್ತಿ ಅವರು ಆಯುರ್ವೇದ ಪದವಿ ಪಡೆದು ಆಲೋಪಥಿಕ್ ವೃತ್ತಿ ನಿರ್ವಹಿಸುತ್ತಿದ್ದರು. ಇದನ್ನು ಕಂಡು ಹಿಡಿದು ಆಶ್ರಯ ಕ್ಲಿನಿಕ್ ಮುಚ್ಚಲು ಆದೇಶಿಸಿದ್ದಾರೆ. ಇಂಡಿ ಪಟ್ಟಣದಲ್ಲಿ ‘ಪ್ರಿಯಾ’ ಕ್ಲಿನಿಕ್ ಹೆಸರಿನವರ ವೈದ್ಯರು ಯಾವುದೇ ವೈದ್ಯಕೀಯ ಪದವಿ ಹೊಂದದೇ ಆಸ್ಪತ್ರೆ ನಡೆಸುತ್ತಿರುವುದು ಕಂಡು ಬಂದಿದ್ದು, ಆ ಆಸ್ಪತ್ರೆಯನ್ನು ಮುಚ್ಚಿಸಲು ಸೂಚಿಸಲಾಗಿದೆ ಎಂದು ಡಾ.ಜಗನ್ನಾಥ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.