ADVERTISEMENT

ಸೈನಿಕ ಶಾಲೆಯಿಂದ ಹಂಪಿ, ಮೈಸೂರಿಗೆ ಸೈಕಲ್ ಜಾಥಾ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 4:35 IST
Last Updated 2 ಅಕ್ಟೋಬರ್ 2012, 4:35 IST

ವಿಜಾಪುರ: ಇಲ್ಲಿಯ ಸೈನಿಕ ಶಾಲೆಯ ಸುವರ್ಣ ಮಹೋತ್ಸವದ ಅಂಗವಾಗಿ ವಿಜಾಪುರದಿಂದ ಹಂಪಿ ಹಾಗೂ ಬೆಂಗಳೂರಿನಿಂದ ಮೈಸೂರುವರೆಗೆ ವಿದ್ಯಾರ್ಥಿಗಳ ಸೈಕಲ್ ಜಾಥಾ ಹಮ್ಮಿ ಕೊಳ್ಳಲಾಗಿದೆ ಎಂದು  ಪ್ರಾಚಾರ್ಯ ಕರ್ನಲ್ ಆರ್. ಬಾಲಾಜಿ ತಿಳಿಸಿದರು.

ಜನತೆಯಲ್ಲಿ ಸಾಮಾಜಿಕ ಮತ್ತು ಪರಿಸರದ ಕಾಳಜಿ ಮೂಡಿಸಲು. ಸೈನಿಕ ಶಾಲೆಯ ಗುರಿ ಮತ್ತು ಸಾಧನೆ ಪರಿಚಯಿಸಲು  800 ಕಿ.ಮೀ. ದೂರದ ಈ ಸೈಕಲ್ ಜಾಥಾ ಹಮ್ಮಿಕೊಂಡಿದ್ದಾಗಿ ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿದರು.

ವಿಜಾಪುರದಿಂದ ಹಂಪಿ ವರೆಗೆ ಹಮ್ಮಿಕೊಂಡಿರುವ ಸೈಕಲ್ ಜಾಥಾಕ್ಕೆ ಇದೇ 7ರಂದು ಬೆಳಿಗ್ಗೆ 7ಕ್ಕೆ ಇಲ್ಲಿಯ ಸೈನಿಕ ಶಾಲೆಯಲ್ಲಿ ಚಾಲನೆ ನೀಡಲಾಗುವುದು. ಐದು ದಿನಗಳ ಈ ಜಾಥಾದಲ್ಲಿ 80 ಕೆಡೆಟ್ಸ್‌ಗಳು ಪಾಲ್ಗೊಳ್ಳಲಿದ್ದಾರೆ. ಕೂಡಲ ಸಂಗಮ, ಬದಾಮಿ, ಗದಗ, ಕೊಪ್ಪಳ ಮೂಲಕ ಜಾಥಾ ಹಂಪಿ ತಲುಪಲಿದೆ ಎಂದರು.

ಬೆಂಗಳೂರಿನಿಂದ ಮೈಸೂರು ವರೆಗಿನ ಸೈಕಲ್ ಜಾಥಾದಲ್ಲಿ ಶಾಲೆಯ 50 ಜನ ಕೆಡೆಟ್ಸ್‌ಗಳು ಪಾಲ್ಗೊಳ್ಳ ಲಿದ್ದಾರೆ. ಇದೇ 8ರಂದು ಬೆಳಿಗ್ಗೆ 6ಕ್ಕೆ ನೆಲಮಂಗಲ ಬೈಪಾಸ್‌ನಿಂದ ಜಾಥಾ ಆರಂಭಗೊಳ್ಳಲಿದೆ. ಅಂದು ಬೆಳಿಗ್ಗೆ 11.30ಕ್ಕೆ ಬೆಂಗಳೂರಿನ ಟ್ರಿನಿಟಿ ಸರ್ಕಲ್‌ನಲ್ಲಿರುವ ಆರ್‌ಎಸ್‌ಎ ಸೆಂಟರ್‌ನಲ್ಲಿ ರ‌್ಯಾಲಿಯ ಉದ್ಘಾಟನಾ ಸಮಾರಂಭ ನಡೆಯಲಿದ್ದು, ವಾಯು ಸೇನೆಯ ಅಧಿಕಾರಿ ಎಂ.ಕೆ. ಮಲೀಕ್, ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಿ.ಕುಮಾರ ನಾಯಕ ಪಾಲ್ಗೊಳ್ಳಲಿದ್ದಾರೆ.

ಆರು ದಿನಗಳ ಈ ಜಾಥಾ ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಕೃಷ್ಣರಾಜ ನಗರ ಮೂಲಕ ಸಾಗಿ ಮೈಸೂರಿನಲ್ಲಿ ಇದೇ 13ರಂದು ಕೊನೆಗೊಳ್ಳಲಿದೆ. ಜಾಥಾದಲ್ಲಿ ಪಾಲ್ಗೊಳ್ಳುವ ಕೆಡೆಟ್ಸ್‌ಗಳು ಬೇಲೂರು, ಹಳೆಬೀಡಿನ ಐತಿಹಾಸಿಕ ತಾಣಗಳು ಹಾಗೂ ಇಸ್ರೋಗೆ ಭೇಟಿ ನೀಡಲಿದ್ದಾರೆ. ಮೈಸೂರಿನಲ್ಲಿ ನಡೆಯಲಿರುವ ಸಮಾರೋಪದಲ್ಲಿ ಸೈನಿಕ ಶಾಲೆಯ ಹಳೆಯ ವಿದ್ಯಾರ್ಥಿ ಯೂ ಆಗಿರುವ ಮೈಸೂರು ಜಿಲ್ಲಾಧಿ ಕಾರಿ ಪಿ.ಎಸ್. ವಸ್ತ್ರದ  ಪಾಲ್ಗೊಳ್ಳ ಲಿದ್ದಾರೆ ಎಂದರು.

ವಿಜಾಪುರ ಸೈನಿಕ ಶಾಲೆಯ ವಿದ್ಯಾರ್ಥಿ ನಿಲಯಗಳಿಗೆ ಹೊಯ್ಸಳ, ಆದಿಲ್‌ಶಾಹಿ, ವಿಜಯನಗರ, ರಾಷ್ಟ್ರಕೂಟ, ಒಡೆಯರ್, ಚಾಲುಕ್ಯ ಅರಸರ ಹೆಸರುಗಳನ್ನು ಇಡಲಾಗಿದೆ. ಈ ಅರಸರು ಆಳಿದ ಸ್ಥಳಗಳನ್ನು ಪರಿಚಯ ಮಾಡಿಕೊಡುವುದಕ್ಕಾಗಿ ಈ ಪ್ರದೇಶಗಳಿಗೆ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಬಾಲಾಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.