ADVERTISEMENT

`ಹಾಲುಮತ ಸಮಾಜಕ್ಕೆ ಟಿಕೆಟ್ ಕೊಡಿ'

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 6:24 IST
Last Updated 4 ಏಪ್ರಿಲ್ 2013, 6:24 IST

ವಿಜಾಪುರ: `ಜಿಲ್ಲೆಯಲ್ಲಿ ತಲಾ ಒಂದು ಕ್ಷೇತ್ರದಲ್ಲಾದರೂ ಹಾಲುಮತ ಸಮಾಜದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನವರು ವಾಗ್ದಾನ ಮಾಡಿದ್ದು, ಅದರಿಂದ ಹಿಂದೆ ಸರಿಯಬಾರದು' ಎಂದು ಜಿಲ್ಲಾ ಹಾಲುಮತ ಸಮಾಜದ ಅಧ್ಯಕ್ಷ ಮಲ್ಲಣ್ಣ ಶಿರಶ್ಯಾಡ ಹೇಳಿದರು.

`ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಹಾಲುಮತ ಸಮಾಜದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಂತೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದೆವು. ಒಂದು ಕ್ಷೇತ್ರದಲ್ಲಾದರೂ ಟಿಕೆಟ್ ನೀಡುವುದಾಗಿ ಅವರು ಭರವಸೆ ನೀಡಿದ್ದರು' ಎಂದು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಹಾಗೂ ಬಿಜೆಪಿ ಮುಖಂಡರಾದ ಸಚಿವ ಎಸ್.ಕೆ. ಬೆಳ್ಳುಬ್ಬಿ, ಸಂಸದ ರಮೇಶ ಜಿಗಜಿಣಗಿ ಅವರು ತಲಾ ಒಬ್ಬ ಅಭ್ಯರ್ಥಿಗೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರು ಎಂದರು.

ಆದರೆ, ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಜಿಲ್ಲೆಯಲ್ಲಿ ಹಾಲುಮತ ಸಮಾಜದ ಯಾವೊಬ್ಬ ಅಭ್ಯರ್ಥಿಯ ಹೆಸರು ಇಲ್ಲ. ಜಿಲ್ಲೆಯಲ್ಲಿ ನಮ್ಮದು ಅತ್ಯಂತ ದೊಡ್ಡ ಸಮಾಜ. ಈ ಸಮಾಜಕ್ಕೆ ಎಲ್ಲ ಪಕ್ಷಗಳವರೂ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ಮುದ್ದೇಬಿಹಾಳ ಕ್ಷೇತ್ರದಿಂದ ಮಲಕೇಂದ್ರಗೌಡ ಪಾಟೀಲ, ಬಬಲೇಶ್ವರದಿಂದ ರಾಜು ಬಿರಾದಾರ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಸಿಂದಗಿಯಿಂದ ಮಲ್ಲಣ್ಣ ಸಾಲಿ, ಬಸಲಿಂಗಪ್ಪ ಗೊಬ್ಬೂರ ಸೇರಿದಂತೆ ಐವರು ಕಾಂಗ್ರೆಸ್ ಟಿಕೆಟ್ ಕೇಳಿದ್ದಾರೆ.

ಜೆಡಿಎಸ್‌ನಿಂದ ಮುದ್ದೇಬಿಹಾಳದಿಂದ ವಕೀಲ ಹಾಲಣ್ಣವರ, ಇಂಡಿಯಿಂದ ಮಲ್ಲಣ್ಣ ಶಿರಶ್ಯಾಡ್ ಇತರರು ಹಾಗೂ ಕೆಜೆಪಿಯಿಂದ ಬಬಲೇಶ್ವರ ಕ್ಷೇತ್ರದಲ್ಲಿ ಶಿವಾನಂದ ಹೊನವಾಡ, ಅರುಣ ಜೈನಾಪುರ, ಕಾಂತು ಒಡೆಯರ ಇತರರು ಆಕಾಂಕ್ಷಿಗಳಾಗಿದ್ದಾರೆ ಎಂದರು.

`ಎಲ್ಲ ಪಕ್ಷಗಳಿಂದಲೂ ನಮ್ಮ ಸಮಾಜದ ಅಭ್ಯರ್ಥಿಗಳಿಗೆ ಪ್ರಾತಿನಿಧ್ಯ ಪಡೆಯಲು ಪ್ರಯತ್ನಿಸುತ್ತೇವೆ. ಒಂದು ಕ್ಷೇತ್ರದಲ್ಲಿ ನಮ್ಮ ಸಮಾಜದ ಇಬ್ಬರು ಅಭ್ಯರ್ಥಿಗಳು ಪರಸ್ಪರ ಕಣಕ್ಕಿಳಿಯದಂತೆ ನೋಡಿಕೊಳ್ಳುತ್ತೇವೆ' ಎಂದು ಹೇಳಿದರು.

ಸಮಾಜದ ಮುಖಂಡರಾದ ಬಸವರಾಜ ಹೊನವಾಡ, ಎಲ್.ಕೆ. ಬಿರಾದಾರ, ಮಲಕೇಂದ್ರಗೌಡ ಪಾಟೀಲ, ಶಂಕರಗೌಡ ಪಾಟೀಲ, ಅರುಣ ಜೈನಾಪೂರ, ರಾಜೇಂದ್ರ ಕಂಬಾಗಿ, ಲಕ್ಷ್ಮಣ ಬೆಟಗೇರಿ, ವಿಜು ಕಲಾದಗಿ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.