ADVERTISEMENT

ಹಿಂದೂ ಸಮಾಜೋತ್ಸವ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 7:30 IST
Last Updated 11 ಫೆಬ್ರುವರಿ 2011, 7:30 IST

ವಿಜಾಪುರ: ಶ್ರೀ ಹನುಮಾನ್ ಶಕ್ತಿ ಜಾಗರಣ ಸಮಿತಿಯಿಂದ ಹಿಂದೂ ಸಮಾಜೋತ್ಸವವನ್ನು ಫೆ.12ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಮುಖಂಡ ಸಿದ್ರಾಮಪ್ಪ ಉಪ್ಪಿನ ಹೇಳಿದರು.

ಇಲ್ಲಿಯ ಶಿವಾನುಭವ ಮಂಟಪದಲ್ಲಿ ಬೆಳಿಗ್ಗೆ 8ಕ್ಕೆ 108 ದಂಪತಿಯಿಂದ ಸಾಮೂಹಿಕ ಪವಮಾನ ಹೋಮ, ಮಧ್ಯಾಹ್ನ 3.45ಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರಿಂದ ನಗರದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಯಲಿದೆ ಎಂದು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಂಜೆ 5ಕ್ಕೆ ಶ್ರೀ ಸಿದ್ಧೇಶ್ವರ ದೇವಸ್ಥಾನದ ಎದುರು ಸಾರ್ವಜನಿಕ ಸಮಾರಂಭ ನಡೆಯಲಿದ್ದು, ಆರ್.ಎಸ್.ಎಸ್.ನ ಉತ್ತರ ಕರ್ನಾಟಕ ಸಹ ಪ್ರಾಂತ ಪ್ರಚಾರಕ ಶಂಕರಾನಂದ ಮುಖ್ಯ ವಕ್ತಾರರಾಗಿ ಪಾಲ್ಗೊಳ್ಳುವರು. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಜಯದೇವ ಜಗದ್ಗುರು,  ಡಾ.ಮಹಾದೇವ ಶಿವಾಚಾರ್ಯರು, ಶ್ರೀ ಶಂಭುಲಿಂಗ ಸ್ವಾಮೀಜಿ ಸಾನಿಧ್ಯ ವಹಿಸುವರು ಎಂದರು.

ಶ್ರೀ ರಾಮ ಜನ್ಮಭೂಮಿ ಯಲ್ಲಿ ರಾಮ ಮಂದಿರ ನಿರ್ಮಿಸಲು, ಕೇಂದ್ರ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ಖಂಡಿಸಲು ಹಾಗೂ ಕಾಶ್ಮೀರದ ಹೆಸರಿನಲ್ಲಿ ಮತ್ತೊಮ್ಮೆ ದೇಶ ಒಡೆಯುವುದನ್ನು ತಡೆಯಲು ಈ ಹಿಂದೂ ಸಮಾಜೋತ್ಸವ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಈ ವಿಷಯಗಳ ಕುರಿತು ಆರ್.ಎಸ್.ಎಸ್.ನಿಂದ ಈಗಾಗಲೆ ಜನಜಾಗರಣ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ 284 ಗ್ರಾಮಗಳಲ್ಲಿ 31,700 ಜನರು ಹನುಮಾನ ಮಂತ್ರ ಪಠಣ ಮಾಡುತ್ತಿದ್ದಾರೆ. ಫೆಬ್ರುವರಿ 26 ಮತ್ತು 27ರಂದು ಅಯೋಧ್ಯೆಯಲ್ಲಿ ಸಭೆ ನಡೆಯಲಿದ್ದು, ಅಯೋಧ್ಯೆ ರಾಮಮಂದಿರ ವಿಷಯ ಕುರಿತು ಚರ್ಚಿಸಲಾಗುವುದು ಎಂದು ಉಪ್ಪಿನ ಹೇಳಿದರು.ಆರ್.ಎಸ್.ಎಸ್.ನ ಸಂಗನಗೌಡ ಪಾಟೀಲ, ಉಮೇಶ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

‘ಹಿಂದೂ ಬೇಡ; ಲಿಂಗಾಯತ ಬರೆಸಿ’
ವಿಜಾಪುರ: ವೀರಶೈವ ಸಮಾಜದ ಎಲ್ಲ ಪಂಗಡದವರು ಜನಗಣತಿ ಕಾಲಂ ಏಳರಲ್ಲಿ ‘ಹಿಂದೂ’ ಬದಲಾಗಿ ‘ವೀರಶೈವ ಲಿಂಗಾಯತ’ ಎಂದು ಬರೆಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಉಪ್ಪಿನ ಹೇಳಿದರು.

ಹಿಂದೂ ಎನ್ನುವುದು ಧರ್ಮ ಅಲ್ಲ. ಅದಕ್ಕಾಗಿ ವೀರಶೈವ ಅಥವಾ ಲಿಂಗಾಯತ ಸಮಾಜದಲ್ಲಿರುವ 73 ಉಪ ಪಂಗಡದವರೆಲ್ಲರೂ ಧರ್ಮದ ಕಾಲಂನಲ್ಲಿ ಹಿಂದೂ ಬದಲಾಗಿ ವೀರಶೈವ ಅಥವಾ ಲಿಂಗಾಯತ ಎಂದೇ ಬರೆಸುವಂತೆ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

‘ರಾಜ್ಯದಲ್ಲಿರುವ ನಮ್ಮ ಜನಸಂಖ್ಯೆ ಎಷ್ಟು ಇದೆ ಎಂಬುದನ್ನು ತೋರಿಸಲು ಹಾಗೂ ಸೌಲಭ್ಯಗಳನ್ನು ಪಡೆಯಲಿಕ್ಕಾಗಿ ಈ ಕ್ರಮ ಅನಿವಾರ್ಯವಾಗಿದೆ. ಈಗಾಗಲೆ ಮೀಸಲಾತಿ ಸೌಲಭ್ಯ ಪಡೆದಿರುವ ವೀರಶೈವ ಸಮಾಜದ ಉಪ ಪಂಗಡದವರು ವೀರಶೈವ ಅಥವಾ ಲಿಂಗಾಯತ ಎಂದು ಬರೆಸಿದರೆ ಅವರಿಗೆ ದೊರೆಯುತ್ತಿರುವ ಮೀಸಲಾತಿ ಸೌಲಭ್ಯದಲ್ಲಿ ವ್ಯತ್ಯಾಸವಾಗುವುದಿಲ್ಲ’ ಎಂದು ಉಪ್ಪಿನ ಹೇಳಿದರು.

ಪಂಚಮಸಾಲಿ ಸಮಾಜ:

ಜಿಲ್ಲೆಯ ಪಂಚಮಸಾಲಿ ಸಮಾಜ ಬಾಂಧವರು ಧರ್ಮದ ಹೆಸರಿನ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಸುವಂತೆ ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಸಂಘದ ಅಧ್ಯಕ್ಷ ಗುರುಶಾಂತ ನಿಡೋಣಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.