ADVERTISEMENT

‘ಹೆಚ್ಚಿನ ಶುಲ್ಕ ಪಡೆದರೆ ಮಾನ್ಯತೆ ರದ್ದು’

ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ ಸಮಿತಿ ಸಭೆ; ಖಾಸಗಿ ಶಾಲೆಗಳಿಗೆ ಎಚ್ಚರಿಕೆ ನೀಡಿದ ಸಿಇಒ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 10:59 IST
Last Updated 1 ಜೂನ್ 2018, 10:59 IST

ವಿಜಯಪುರ: ‘ಖಾಸಗಿ ಶಾಲೆಗಳಲ್ಲಿ ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ಆಕರಣೆ ಮಾಡುವುದು ಕಂಡು ಬಂದಲ್ಲಿ, ಆ ಶಾಲೆಯ ಮಾನ್ಯತೆ ರದ್ದುಪಡಿಸಲಾಗುವುದು’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಸುಂದರೇಶಬಾಬು ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಶಾಲೆಗಳಲ್ಲಿ ಡೊನೇಷನ್ ಹಾವಳಿ ತಪ್ಪಿಸುವ ದಿಸೆಯಲ್ಲಿ ಆಯಾ ಶಾಲೆಗಳು ನಿಗದಿತ ಶುಲ್ಕವನ್ನು ಮಾತ್ರ ಆಕರಣೆ ಮಾಡಬೇಕು. ಶಿಕ್ಷಣ ಇಲಾಖೆ ಅಧಿಕಾರಿಗಳು, ಬಿಆರ್‌ಸಿ, ಸಿಆರ್‌ಸಿಗಳು ಸಹ ಕಾಲ ಕಾಲಕ್ಕೆ ಆಯಾ ಶಾಲೆಗಳಿಗೆ ಭೇಟಿ ನೀಡಿ ನಿಗದಿತ ಶುಲ್ಕ ಆಕರಣೆ ಕುರಿತು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು’ ಎಂದು ಸೂಚಿಸಿದರು.

ನಿಯಮಾವಳಿಯನ್ವಯ ನಿಗದಿತ ಶುಲ್ಕ ಮಾತ್ರ ಆಕರಣೆ ಕುರಿತಂತೆ ಶಾಲೆಗಳಲ್ಲಿ ಕಡ್ಡಾಯವಾಗಿ ಮಾಹಿತಿ ಅಳವಡಿಸಬೇಕು. ಶಿಕ್ಷಣ ಹಕ್ಕು ಕಾಯ್ದೆಯಡಿ ಮಕ್ಕಳಿಗೆ ಸೀಟುಗಳನ್ನು ಕಾಯ್ದಿರಿಸಿ ಪ್ರವೇಶಾವಕಾಶ ನೀಡಬೇಕು. ಕಾಯ್ದೆ ಉಲ್ಲಂಘನೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ, ಸಂಬಂಧಪಟ್ಟ ವಿದ್ಯಾರ್ಥಿಗಳ ಖರ್ಚು ವೆಚ್ಚಗಳ ನಿರ್ವಹಣೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಅನಾವಶ್ಯಕವಾಗಿ ತೊಂದರೆ ನೀಡದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ADVERTISEMENT

ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಎಲ್ಲ ಆಡಳಿತ ಮಂಡಳಿಗಳು ಕಾರ್ಯ ನಿರ್ವಹಿಸಬೇಕು. ಶಾಲೆಗಳಿಗೆ ಸಂಬಂಧಪಟ್ಟಂತೆ ಯಾವುದೇ ರೀತಿಯ ದೂರುಗಳಿಗಾಗಿ ಸಹಾಯವಾಣಿ 08352-240151ಗೆ ಕರೆ ಮಾಡಬಹುದಾಗಿದೆ. ದೂರುಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ ಸಹ ರಚನೆಯಾಗಿದ್ದು, ನಿಗದಿತ ಶುಲ್ಕ ಪಾವತಿಸಿ ನಿಗದಿತ ನಮೂನೆಯಲ್ಲಿ ದೂರು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ರಿಯಾ ಯೋಜನೆಯನ್ವಯ ಮಾತ್ರ ಪಠ್ಯಕ್ರಮ, ವಿವಿಧ ದಿನಾಚರಣೆ, ಬೋಧನಾ ಅವಧಿ, ಶಾಲಾ ಅವಧಿ, ವೇಳಾಪಟ್ಟಿಯನ್ವಯ ಕಾರ್ಯ ನಿರ್ವಹಿಸುವಂತೆ (ರಮ್ಜಾನ್‌ ಮಾಸದಲ್ಲಿ ಕೆಲವು ಉರ್ದು ಶಾಲೆ ಹೊರತುಪಡಿಸಿ) ಸಿಇಓ ಸೂಚಿಸಿದರು.

ಶಿಥಿಲಾವಸ್ಥೆ ಕಟ್ಟಡದಲ್ಲಿ ವರ್ಗ ಬೇಡ: ಶಿಥಿಲಾವಸ್ಥೆಯಲ್ಲಿರುವ ಜಿಲ್ಲೆಯ ಯಾವುದೇ ಶಾಲೆಯಲ್ಲಿ ಬೋಧನಾ ವರ್ಗಗಳನ್ನು ನಡೆಸಬಾರದು. ಮಳೆಗಾಲ ಆರಂಭಗೊಂಡ ಹಿನ್ನೆಲೆ ಪ್ರತಿ ಬ್ಲಾಕ್ ಮಟ್ಟದ ಶಿಥಿಲಾವಸ್ಥೆಯ ಶಾಲಾ ಕಟ್ಟಡ ಕೋಣೆಗಳನ್ನು ಗುರುತಿಸಬೇಕು. ಕಳೆದ ವರ್ಷ, ಪ್ರಸಕ್ತ ವರ್ಷದ ಶಿಥಿಲಾವಸ್ಥೆಯ ಎಲ್ಲ ಶಾಲಾ ಕಟ್ಟಡಗಳ ಪಟ್ಟಿ ಮಾಡಿ, ಶಾಲಾ ಕೋಣೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಇದಕ್ಕೆ ತಪ್ಪಿದ್ದಲ್ಲಿ ಆಯಾ ಶಾಲೆಯ ಮುಖ್ಯೋಪಾಧ್ಯಾಯರನ್ನು ಹೊಣೆಗಾರರನ್ನಾಗಿ ಮಾಡಲಾಗುವು ಎಂದು ಎಚ್ಚರಿಕೆ ನೀಡಿದರು.

₹ 7 ಕೋಟಿ ಅನುದಾನ: ಜಿಲ್ಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೋಣೆಗಳ ದುರಸ್ತಿಗೆ ಕಳೆದ ವರ್ಷದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಅನುದಾನದಡಿ ಆಯಾ ಶಾಲಾ ಕೊಠಡಿ ದುರಸ್ತಿ ಜತೆಗೆ ಕುಡಿಯುವ ನೀರು, ಶೌಚಾಲಯ, ಶೌಚಾಲಯಗಳಿಗೆ ನೀರು ಸೇರಿದಂತೆ ಇತರೆ ಸೌಲಭ್ಯ ಸಹ ಕಲ್ಪಿಸಬಹುದಾಗಿದ್ದು, ಬಳಕೆಗೆ ಆಯಾ ಶಾಲೆಯ ಮುಖ್ಯೋಪಾಧ್ಯಾಯರು ಪರಿಶೀಲನೆ ನಡೆಸಿ, ವರದಿ ಸಲ್ಲಿಸಬೇಕು ಎಂದರು.

ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕಾಗಿ ₹ 7 ಕೋಟಿ ಒದಗಿಸಲಾಗಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯ ವಿವಿಧ ಶಾಲಾ ಗೋಡೆಗಳ ನಿರ್ಮಾಣ, ಕ್ರೀಡಾಂಗಣದ ಅಭಿವೃದ್ದಿಗೂ ಸಹ ₹ 10 ಕೋಟಿ ಒದಗಿಸಲಾಗಿದೆ. ಇತರೆ ಚಟುವಟಿಕೆಗಳಿಗಾಗಿ ₹ 10 ಕೋಟಿ ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲು ಪಿಆರ್‌ಇಡಿ ಮೂಲಕ ಕ್ರಮ ಕೈಗೊಳ್ಳಲು ಸೂಚಿಸಲಾಗಿತ್ತು. ಈ ಕುರಿತಂತೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

**
ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಎರಡು ಶಾಲೆಗಳ ಕಟ್ಟಡ ದುರಸ್ತಿಗಾಗಿ 14ನೇ ಹಣಕಾಸು ಆಯೋಗದ ಅನುದಾನದಡಿ ₹ 5 ಕೋಟಿ ಮೀಸಲಿಡಲಾಗಿದೆ
ಎಂ.ಸುಂದರೇಶಬಾಬು, ಜಿಲ್ಲಾ ಪಂಚಾಯಿತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.