ADVERTISEMENT

ಹೊಸ ಕಂಬ ನಿಲ್ಲಿಸಿ ವಿದ್ಯುತ್ ತಂತಿ ಬದಲಿಸಿದ ಹೆಸ್ಕಾಂ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 5:50 IST
Last Updated 23 ಸೆಪ್ಟೆಂಬರ್ 2011, 5:50 IST

ತಾಳಿಕೋಟೆ:  ಕೈಗೆ ಎಟುಕುವ ವಿದ್ಯುತ್ ತಂತಿಗಳು ಎಂಬ ತಲೆಬರ ಹದ ಅಡಿ 28ನೇ ಜುಲೈ 2011ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ವರದಿ  ಹಿನ್ನೆಲೆಯಲ್ಲಿ   ಎಚ್ಚೆತ್ತ ಹೆಸ್ಕಾಂ ಇಲಾಖೆ ತಡವಾಗಿಯಾದರೂ ನೂತನ ವಿದ್ಯುತ್ ಕಂಬ ಹಾಕಿ ಮಾರ್ಗ ಬದಲಿಸಿದೆ. ಇದರಿಂದ ಸಂಭವಿಸಬಹುದಾಗಿದ್ದ ಅಪಾಯ ತಪ್ಪಿದಂತಾಗಿದೆ.

ವರದಿಯ ಹಿನ್ನೆಲೆಯಲ್ಲಿ  ಆಗ ಕಾರಗನೂರ ಸರ್ಕಾರಿ ಪ್ರಾಥಮಿಕ ಶಾಲೆಗೆ  ಭೇಟಿ ನೀಡಿದ್ದ ಜಿ.ಪಂ. ಸದಸ್ಯ ಸಾಯಬಣ್ಣ ಆಲ್ಯಾಳ  ವಿದ್ಯುತ್ ಮುಖ್ಯ ತಂತಿಗಳು ಮಾಳಿಗೆಯುದ್ದಕ್ಕೂ ಬಿದ್ದಿರುವುದನ್ನು ಕಂಡು ಆತಂಕ ವ್ಯಕ್ತಪಡಿಸಿದ್ದರಲ್ಲದೇ, ನಿರಂತರವಾಗಿ ಜಿಲ್ಲಾ ಹೆಸ್ಕಾಂ ಕಚೇರಿ ಹಾಗೂ ತಾಳಿಕೋಟೆ ಶಾಖಾ ಕಚೇರಿ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು.

 ಸಾರ್ವಜನಿಕ ಹಿತಾಸಕ್ತಿಯನ್ನು ಇಂಥ ವಿಷಯಗಳನ್ನು ಪತ್ರಿಕೆ ಹೆಚ್ಚು ಗಮನದಲ್ಲಿಟ್ಟು ವರದಿ ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ನೆಮ್ಮದಿಯ ನಿಟ್ಟುಸಿರು: ಸದಾ ಆತಂಕದಲ್ಲಿ ಓಡಾಡಬೇಕಿದ್ದ ಶಾಲಾ ಮಕ್ಕಳು, ಪ್ರಜಾವಾಣಿ ವರದಿಯಿಂದ ನಿರಾತಂಕವಾಗಿ ಓಡಾಡುವಂತಾಯಿತು ಎಂದಿರುವ ಶಾಲಾ ಸಿಬ್ಬಂದಿ ಹಾಗೂ ಎಸ್‌ಡಿಎಂಸಿಯವರು  ಪತ್ರಿಕೆಗೆ ಕೃತಜ್ಞತೆ ತಿಳಿಸಿದರು. ಇದಲ್ಲದೇ ಇದಕ್ಕೆ ನೆರವಾದ ಜಿ.ಪಂ.ಸದಸ್ಯರಿಗೆ ಹಾಗೂ ಸಮಾಜ ಸೇವಕ ಬಸನಗೌಡ ವಣಿಕ್ಯಾಳ ಅವರನ್ನು ಸ್ಮರಿಸಿದರು.

 ಕಾರಗನೂರ ಅಲ್ಲದೇ ಪೀರಾಪುರ ರಸ್ತೆಯ ಕೃಷಿ ಜಮೀನಿನಲ್ಲಿ ಬಾಗಿ ಕೃಷಿ ಚಟುವಟಿಕೆಗಳಿಗೆ ಅಡ್ಡಿ ಮಾಡುವಷ್ಟು ಕೆಳಗಿಳಿದಿದ್ದ ವಿದ್ಯುತ್ ತಂತಿಗಳನ್ನು ಮೇಲೆತ್ತಿ ವಿದ್ಯುತ್ ಕಂಬಗಳನ್ನು  ನಿಲ್ಲಿಸಿ  ಹೆಸ್ಕಾಂ ತನ್ನ ಬಾಧ್ಯತೆ ನಿರ್ವಹಿಸಿದೆ.

ಗಡಿಸೋಮನಾಳ ಗ್ರಾಮದಲ್ಲಿ ಮನೆಯ ಮಾಳಿಗೆ ತಾಗುತ್ತಿರುವ ತಂತಿಗಳನ್ನು ಬದಲಿಸಲು ವಿದ್ಯುತ್ ಕಂಬಗಳನ್ನು ಗ್ರಾಮಕ್ಕೆ ಸಾಗಿಸಲಾಗಿದ್ದು ಗ್ರಾಮಸ್ಥರಿಂದಲೇ ಅಗತ್ಯ ಸಹಾಯ ದೊರೆತಿಲ್ಲವೆಂದು ಹೆಸ್ಕಾಂ ಅಧಿಕಾರಿ ಚವ್ಹಾಣ `ಪ್ರಜಾವಾಣಿ~ಗೆ ತಿಳಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.