ಸಿಂದಗಿ: ಪಂಚಾಚಾರ್ಯ ಪೀಠದ ಅಡ್ಡಪಲ್ಲಕ್ಕಿ ಉತ್ಸವ ವ್ಯಕ್ತಿ ಪ್ರಧಾನ ಅಲ್ಲ. ಅದು ತತ್ವ ಪ್ರಧಾನವಾದುದು. ಇದನ್ನು ತಡೆಗಟ್ಟಲು ಸರ್ಕಾರ ಮುಂದಾಗಿರುವ ಕ್ರಮ ಖಂಡನೀಯ ಎಂದು ಕೇದಾರ ಪೀಠದ ಭೀಮಾಶಂಕರಲಿಂಗ ಶಿವಾಚಾರ್ಯರು ಹೇಳಿದರು.
ನಗರದ ಸಾರಂಗಮಠದ ಆವರಣದಲ್ಲಿನ ಮೈದಾನದಲ್ಲಿ ತಾಲ್ಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ರೇಣುಕಾಚಾರ್ಯರ ಜಯಂತ್ಯುತ್ಸವ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಧರ್ಮದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದು ತಪ್ಪು. ಕಾನೂನಿಗಿಂತ ಪರಂಪರೆ ಮುಖ್ಯ. ಅಡ್ಡಪಲ್ಲಕ್ಕಿ ಉತ್ಸವ ಇಂದು ನಿನ್ನೆಯದಲ್ಲ. ಪ್ರಾಚೀನ ಕಾಲದಿಂದ ಮುಂದುರೆದುಕೊಂಡು ಬಂದಿರುವ ಸತ್ ಪರಂಪರೆಯಾಗಿದೆ. ಅಖಂಡ ಭಾರತದಲ್ಲಿ ವೀರಶೈವ ಧರ್ಮ ವ್ಯಾಪಕವಾಗಿದೆ. ವೀರಶೈವ ಧರ್ಮ ವಿಶಾಲ ಧರ್ಮ, ಮಹಿಳೆಯರಿಗೆ ಪುರುಷರ ಸಮಾನ ಸ್ವಾತಂತ್ರ್ಯ ನೀಡಿದ ಏಕಮೇವ ಪ್ರಗತಿಪರ ಧರ್ಮವಾಗಿದೆ ಎಂದು ನುಡಿದರು.
ಪ್ರತಿಯೊಂದು ಧರ್ಮದಲ್ಲೂ ಅವರದೇ ಆದ ಪರಂಪರೆಗಳಿವೆ. ವೀರಶೈವ ಧರ್ಮದಲ್ಲೂ ಅಡ್ಡಪಲ್ಕಕ್ಕಿ ಉತ್ಸವ ಭಕ್ತರಿಂದ ಮುಂದುರೆದುಕೊಂಡು ಬಂದಿರುವ ಪರಂಪರೆಯಾಗಿದೆ. ಇಸ್ಲಾಂ ಧರ್ಮದ ಪರಂಪರೆಗಳಿಗೆ ಸರ್ಕಾರ ಕೈ ಹಾಕಿ ನೋಡಲಿ ಎಂದು ಎಚ್ಚರಿಕೆ ನೀಡಿದರು.
ಸಾರಂಗಮಠ–ಗಚ್ಚಿನಮಠದ ಪ್ರಭು ಸಾರಂಗದೇವ ಶಿವಾಚಾರ್ಯರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕಾರ, ದೀಕ್ಷೆ ಇಲ್ಲದವರನ್ನು ಜಾತಿಗೊಬ್ಬ ಸ್ವಾಮಿಯನ್ನಾಗಿ ನೇಮಕ ಮಾಡುತ್ತಿರುವುದು ಒಂದು ದುರಂತ ಎಂದು ವಿಷಾದಿಸಿದರು. ದೇವಣಗಾವ ಬಕ್ಕೇಶ್ವರಮಠದ ಶ್ರೀಗಳು, ಆಲಮೇಲ ಸಂಸ್ಥಾನಹಿರೇಮಠದ ಶ್ರೀಗಳು ಆಶೀರ್ವಚನ ನೀಡಿದರು. ಶಾಸಕ ಅರುಣ ಶಹಾಪೂರ, ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಎಸ್.ಆರ್. ನವಲಿಹಿರೇಮಠ ಮಾತನಾಡಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಡಾ.ಎಸ್.ಎಂ. ಹಿರೇಮಠ ಉಪನ್ಯಾಸ ನೀಡಿ ವೀರಶೈವ ಮತ್ತು ಲಿಂಗಾಯತ ಎರಡನ್ನೂ ಬೇರೆ ಎಂದು ವಿಶಾಲ ಧರ್ಮವನ್ನು ಒಡೆಯುವ ಹುನ್ನಾರ ನಡೆಯುತ್ತಿದೆ ಎಂದರು. ಹೈಕೋರ್ಟ್ ವಕೀಲ ಎನ್.ಎಸ್. ಹಿರೇಮಠ ಸಮಾರಂಭ ಉದ್ಘಾಟಿಸಿದರು.
ಸ್ಥಳೀಯ ಆರ್.ಡಿ. ಪಾಟೀಲ ಪಿಯು ಕಾಲೇಜಿನ ವಿದ್ಯಾರ್ಥಿನಿ ಪೂಜಾ ಹಿರೇಮಠ ಸೇರಿದಂತೆ ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು.
ಅಶೋಕ ವಾರದ, ಸಿದ್ದು ಪಾಟೀಲ, ಅಶೋಕ ಮನಗೂಳಿ, ವಿವಿಧ ಮಠಾಧೀಶರು, ಜಂಗಮ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಂಕರಲಿಂಗಯ್ಯ ಹಿರೇಮಠ ಬಂದಾಳ, ನಗರ ಘಟಕದ ಅಧ್ಯಕ್ಷ ಶ್ರೀಶೈಲ ನಂದಿಕೋಲ, ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ಸ್ಥಾವರಮಠ ಉಪಸ್ಥಿತರಿದ್ದರು.
ಶಂಕರಲಿಂಗಯ್ಯ ಹಿರೇಮಠ ಸ್ವಾಗತಿಸಿದರು. ರೇಣುಕಾ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಶೈಲ ಮಠಪತಿ, ಸುಮನ್ ಹಿರೇಮಠ ನಿರೂಪಿಸಿದರು. ಎಂ.ಎಸ್. ಮಠ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.