ವಿಜಾಪುರ: ‘ಜನರಲ್ಲಿ ಭಕ್ತಿಯ ಬರವಿಲ್ಲ. ದೇಶ ಕಟ್ಟುವಲ್ಲಿ ಮಠಾಧೀಶರು, ಸಾಧು-ಸಂತರ ಪಾತ್ರ ಅನನ್ಯ’ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.
ಬಸವನ ಬಾಗೇವಾಡಿ ತಾಲ್ಲೂಕು ಕರಭಂಟನಾಳದ ಯುವ ಹಾಗೂ ವಿದ್ಯಾರ್ಥಿಗಳ ಹಿತ ಚಿಂತನಾ ವೇದಿಕೆಯಿಂದ ಗುರುಗಂಗಾಧರೇಶ್ವರರ 150ನೇ ಪುಣ್ಯಸ್ಮರಣೆ ಅಂಗವಾಗಿ ಬುಧವಾರ ಇಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಭಾವೈಕ್ಯ ಚಿಂತನ ಗೋಷ್ಠಿಯ ಸಾನಿಧ್ಯ ವಹಿಸಿ ಮಾತನಾಡಿದರು.
ನಮ್ಮ ಕೆಲಸ ಕಾರ್ಯಗಳಲ್ಲಿ ಎಷ್ಟೇ ಕಷ್ಟ ಎದುರಾದರೂ ಅವುಗಳನ್ನು ಧೈರ್ಯವಾಗಿ ಎದುರಿಸಿದಾಗ ಮಾತ್ರ ಗುರಿ ತಲುಪಲು ಸಾಧ್ಯ. ಇದು ಆಧುನಿಕ ಯುಗ. ಕೆಲವೊಬ್ಬರಿಂದ ಧಾರ್ಮಿಕ ಕಾರ್ಯಕ್ರಮಗಳ ದುರುಪಯೋಗ ನಡೆಯುತ್ತಿರಬಹುದು. ಆದರೆ, ಎಲ್ಲರನ್ನೂ ಈ ದೃಷ್ಟಿಯಿಂದು ನೋಡುವುದು ಸಲ್ಲ. ಅನೇಕ ಮಠಾಧೀಶರು ಉತ್ತಮ ಕೊಡುಗೆ ನೀಡಿದ್ದು, ಅದನ್ನು ನಾವು ಸ್ಮರಿಸಬೇಕು ಎಂದು ಹೇಳಿದರು.
ಕರಭಂಟನಾಳ ಗುರುಗಂಗಾಧರೇಶ್ವರ ಸಂಸ್ಥಾನಮಠದ ಶಿವಕುಮಾರ ಸ್ವಾಮೀಜಿ, ‘ಗುರುಗಂಗಾಧರೇಶ್ವರರು ಸ್ವಾತಂತ್ರ್ಯ ಚಳವಳಿಗೆ ನೀಡಿದ ಕೊಡುಗೆ ಅಪಾರ. ಅವರ ಸಂದೇಶ ಮತ್ತು ಸಾಧನೆಯನ್ನು ತಿಳಿಸಲಿಕ್ಕಾಗಿ ಈ ಕಾರ್ಯಕ್ರಮ ಸಂಘಟಿಸಲಾಗಿದೆ‘ ಎಂದರು.
ರಾಜಾ ವೆಂಕಟಪ್ಪ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು. ಬೆಂಗಳೂರಿನ ಪ್ರಶಾಂತ ರಿಪ್ಪನಪೇಟೆ ಉಪನ್ಯಾಸ ನೀಡಿದರು. ಅಷ್ಟಗಿಯ ನಿಜಲಿಂಗ ಶಿವಾಚಾರ್ಯರು, ಮಹಾರಾಷ್ಟ್ರದ ಮಾಂಜರಿಯ ಗುರುಶಾಂತಲಿಂಗ ಶಿವಾಚಾರ್ಯರು, ರೇವೂರಿನ ಶ್ರೀಕಂಠ ಶಿವಾಚಾರ್ಯರು, ಶಹಾಪುರದ ಸೂಗುರೇಶ್ವರ ದೇವರು, ಬಂಡಿಗಣಿಯ ಚಕ್ರವರ್ತಿ ಅನ್ನದಾನೇಶ್ವರ ಸ್ವಾಮೀಜಿ ಪಾಲ್ಗೊಂಡಿದ್ದರು.
ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ್ದ ಶ್ರೀಶೈಲ ಜಗದ್ಗುರುಗಳು, ಇಲ್ಲಿಯ ಸಿದ್ಧೇಶ್ವರ ದೇವಸ್ಥಾನದ ಮೇಲೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.