ADVERTISEMENT

‘ಸುಂಟರಗಾಳಿ’ಬೈಕ್‌ಗಳ ಮೋಡಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 5:03 IST
Last Updated 17 ಸೆಪ್ಟೆಂಬರ್ 2013, 5:03 IST

ವಿಜಾಪುರ: ಬೆಂಗಳೂರಿನ ‘ಸೈನ್ಯ ಸೇವಾ ದಳ’ (ಆರ್ಮಿ ಸರ್ವೀಸ್‌ ಕಾಪ್ಸ್‌) ಯೋಧರು ಸೋಮವಾರ ಇಲ್ಲಿ ನೀಡಿದ ‘ಸುಂಟರಗಾಳಿ’ ಬೈಕ್‌ ಸಾಹಸ ಪ್ರದರ್ಶನ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.

ಇಲ್ಲಿಯ ಸೈನಿಕ ಶಾಲೆಯ ಸುವರ್ಣ ಮಹೋತ್ಸವದ ಅಂಗವಾಗಿ ಸೋಮವಾರ ಬೆಳಿಗ್ಗೆ ಶಾಲೆಯ ಮೈದಾನದಲ್ಲಿ ಈ ‘ಸುಂಟರಗಾಳಿ’ ಬೈಕ್‌ ಸಾಹಸ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ಬೆಂಗಳೂರಿನ 21 ಜನ ಯೋಧರು 11 ಬೈಕ್‌ಗಳಲ್ಲಿ ಬಗೆ ಬಗೆಯ ಸಾಹಸ ಪ್ರದರ್ಶನ ನೀಡಿದರು.
ಮೇಜರ್‌ ಎಸ್‌.ಎಸ್‌. ರಾಠೋಡ ಅವರು ಬೆಂಕಿಯಿಂದ ಉರಿಯುತ್ತಿದ್ದ ರಿಂಗ್‌ ಮೂಲಕ ತಮ್ಮ ಬೈಕ್‌ನಲ್ಲಿ ತೂರಿ ಬಂದು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಇಟ್ಟಿಗೆ ಮತ್ತು ಟ್ಯೂಬ್‌ ಲೈಟ್‌ಗಳ ‘ಗೋಡೆ’ ಭೇದಿಸಿ ಮುನ್ನುಗ್ಗುವ ಮೂಲಕ ದಿಗ್ಭ್ರಮೆ ಮೂಡಿಸಿದರು.

ಜೋಕರ್‌ ವೇಷಧಾರಿ ಯೋಧರೊಬ್ಬರು ಚಲಿಸುತ್ತಿದ್ದ ಬೈಕ್‌ನಲ್ಲಿ ಕುಳಿತು ಪತ್ರಿಕೆ ಓದುತ್ತ, ಬಗೆ ಬಗೆಯ ಹಾವಭಾವದ ಮೂಲಕ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು. ಈ ತಂಡದ ಧೈರ್ಯ, ನೈಪುಣ್ಯತೆಯನ್ನು ಅಲ್ಲಿ ನೆರೆದವರೆಲ್ಲ ಕೊಂಡಾಡಿದರು.

ಬೃಹತ್‌ ಕೇಕ್‌
ಬೃಹತ್‌ ಗಾತ್ರದ ಕೇಕ್‌ ಕತ್ತರಿಸುವ ಮೂಲಕ ಶಾಲೆಯ 50ನೇ ಸಂಸ್ಥಾಪನಾ ದಿನ ಆಚರಿಸಲಾಯಿತು. ಸೇನಾ ಪಡೆಯ ವಿವಿಧ ಕವಾಯತು ಪ್ರದರ್ಶನ ಸೋಮವಾರವೂ ನಡೆಯಿತು.

ಬೆಂಗಳೂರಿನಿಂದ ವಿಶೇಷ ಹೆಲಿಕಾಪ್ಟರ್‌ ಮೂಲಕ ಆಗಮಿಸಿದ ಏರ್‌ ಮಾರ್ಷಲ್ ಪಿ.ಎಸ್. ಗಿಲ್, ಹುತಾತ್ಮರ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿ ಪುಷ್ಪ ಗುಚ್ಚವನ್ನು ಇಟ್ಟು ಗೌರವ ಸೂಚಿಸಿದರು. ಸೈನಿಕ ಶಾಲೆ ಕುರಿತಾದ ‘ಕಿರು ವಿಡಿಯೊ ಚಿತ್ರ’ ಬಿಡುಗಡೆ ಮಾಡಿ ವೆಬ್‌ಸೈಟ್ ಗೆ ಚಾಲನೆ ನೀಡಿದರು. ಕರ್ನಲ್ ರಿಷಿರಾಜ್‌ ಸಿಂಗ್, ವಿಂಗ್ ಕಮಾಂಡರ್ ಇ. ಶ್ರೀನಿವಾಸ್‌ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.