ADVERTISEMENT

10, 12ನೇ ತರಗತಿ ವಿದ್ಯಾಗಮ ಜ.1ರಿಂದ ಆರಂಭ

ಕೋವಿಡ್‌ ಜಾಗ್ರತಾ ಕ್ರಮಗಳೊಂದಿಗೆ ಶಾಲಾ-ಕಾಲೇಜು ಆರಂಭಿಸಲು ಡಿ.ಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 14:14 IST
Last Updated 29 ಡಿಸೆಂಬರ್ 2020, 14:14 IST
ಶಾಲಾ, ಕಾಲೇಜು ಆರಂಭಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಮಂಗಳವಾರ ವಿಜಯಪುರ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್ ಸಭೆ ನಡೆಸಿದರು
ಶಾಲಾ, ಕಾಲೇಜು ಆರಂಭಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಮಂಗಳವಾರ ವಿಜಯಪುರ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್ ಸಭೆ ನಡೆಸಿದರು   

ವಿಜಯಪುರ: ಜನವರಿ 1ರಿಂದ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯು ತರಗತಿಗಳ ಆರಂಭಕ್ಕೆ ನಿರ್ಧರಿಸಲಾಗಿದ್ದು, ಕೊವಿಡ್‌ ಹಿನ್ನೆಲೆಯಲ್ಲಿ ಅವಶ್ಯಕ ಮುಂಜಾಗ್ರತೆಯೊಂದಿಗೆ ತರಗತಿ ನಡೆಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್ ಸೂಚಿಸಿದರು.

ಶಾಲಾ, ಕಾಲೇಜು ಆರಂಭಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿ ಅವರು ಮಾತನಾಡಿದರು.

6 ರಿಂದ 9 ನೇ ತರಗತಿಗಳಿಗೆ ವಿದ್ಯಾಗಮ ತರಗತಿಗಳು ಪರಸ್ಪರ ಅಂತರ, ಅವಶ್ಯಕ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ನಡೆಸುವಂತೆ ಅವರು ತಿಳಿಸಿದರು.

ADVERTISEMENT

ಎಸ್.ಎಸ್.ಎಲ್.ಸಿ ಹಾಗೂ ಪಿಯು ತರಗತಿಗಳು ಶಾಲಾ ಕೊಠಡಿಗಳಲ್ಲಿ ನಡೆಯುವ ಹಿನ್ನೆಲೆಯಲ್ಲಿ ಗ್ರಾಮಗಳ ವ್ಯಾಪ್ತಿಯಲ್ಲಿ ಆಯಾ ಪಿಡಿಒಗಳು ಮತ್ತು ಪಟ್ಟಣಗಳ ವ್ಯಾಪ್ತಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಸ್ವಚ್ಛತೆ ಮತ್ತು ಸ್ಯಾನಿಟೈಜೇಷನ್‍ಗೆ ಕ್ರಮಕೈಗೊಳ್ಳಬೇಕು ಎಂದರು.

ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಕೋವಿಡ್ ಹಿನ್ನೆಲೆ ತಪಾಸಣೆಗೆ ಒಳಪಡಿಸಿದ ಬಗ್ಗೆ ಕೋಡಿಂಗ್ ಆಧಾರದ ಮೇಲೆ ದಾಖಲಿಸಬೇಕು. ಎಸ್.ಎಸ್.ಎಲ್.ಸಿ ಹಾಗೂ ವಿದ್ಯಾಗಮ ವಿದ್ಯಾರ್ಥಿಗೆ ‘ಎಕ್ಸ್‌ – ಎಸ್’ ಮತ್ತು ಶಿಕ್ಷಕರಿಗೆ ‘ಎಕ್ಸ್-ಟಿ’ ಹಾಗೂ ಪಿಯು ವಿದ್ಯಾರ್ಥಿಗೆ ರೋಮನ್ ಸಂಖ್ಯೆ 12 ಹಾಗೂ ಶಿಕ್ಷಕರಿಗೆ ರೋಮನ್ ಸಂಖ್ಯೆ ‘12 ಟಿ’ ಎಂದು ಕೋಡ್ ನಿಗದಿಪಡಿಸುವಂತೆ ಅವರು ಸೂಚನೆ ನೀಡಿದರು.

ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳ ಶಿಕ್ಷಕರು ಕಡ್ಡಾಯವಾಗಿ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆ ನಡೆಸಿಕೊಂಡು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವಂತಹ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಆಯಾ ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ಕೋವಿಡ್ ತಪಾಸಣೆ ಪ್ರತ್ಯೇಕ ಕೊಠಡಿಗಳಲ್ಲಿ ನಡೆಸಿ ನಂತರ ಅವರವರ ಕೊಠಡಿಗಳಿಗೆ ತೆರಳಲು ಅವಕಾಶ ಮಾಡಿಕೊಡಬೇಕು ಎಂದರು.

ಆರೋಗ್ಯ ತಪಾಸಣೆಗೆ ತಂಡಗಳನ್ನು ನಿಯೋಜಿಸಿ ಪರಿಶೀಲನೆ ನಡೆಸಬೇಕು. ವಿದ್ಯಾಗಮ ತರಗತಿಯ ಕೋವಿಡ್ -19 ಲಕ್ಷಣವುಳ್ಳ ವಿದ್ಯಾರ್ಥಿಗಳಿಗೆ ಮಾತ್ರ ತಪಾಸಣೆಗೆ ಒಳಪಡಿಸಬೇಕು. ಮಾರ್ಗಸೂಚಿಯನ್ವಯ ಪ್ರತಿ 10 ವಿದ್ಯಾರ್ಥಿಗಳ ಮೇಲೆ ನಿಗಾ ಇಡಲು ಮಾನಿಟರ್ ಆಗಿ ಶಿಕ್ಷಕರನ್ನು ಗುರುತಿಸಬೇಕು ಎಂದು ಅವರು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಕರನ್ನು ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳೊಂದಿಗೆ ಸಂಪರ್ಕ ಸಾಧಿಸಿ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು. ಕೋವಿಡ್-19 ಪಾಸಿಟಿವ್ ಹಾಗೂ ನೆಗೆಟಿವ್ ತಪಾಸಣೆಗೆ ಸಂಬಂಧಿಸಿದಂತೆ ಸೂಕ್ತ ಸಮನ್ವಯತೆ ಸಾಧಿಸಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಶಾಲಾ ವಾಹನಗಳ ಮೂಲಕ ಬರುವ ವಿದ್ಯಾರ್ಥಿಗಳಿಗೆ ಮಾರ್ಗಸೂಚಿಯನ್ವಯ ಮುಂಜಾಗ್ರತೆಯೊಂದಿಗೆ ಕರೆತರುವ ವ್ಯವಸ್ಥೆ ಮಾಡಿಕೊಳ್ಳಬೇಕು. ಪರಸ್ಪರ ಅಂತರ, ಬಸ್ಸಿನ ಒಟ್ಟು ಆಸನ ಸಾಮರ್ಥ್ಯದ ಶೇ 50 ರಷ್ಟು ವಿದ್ಯಾರ್ಥಿಗಳನ್ನು ಮಾತ್ರ ಶಾಲಾ ಬಸ್ಸುಗಳಲ್ಲಿ ಕೊಂಡೊಯ್ಯಬೇಕು. ಪ್ರತಿದಿನ ಬಸ್‍ ಅನ್ನು ಸ್ಯಾನಿಟೈಜ್ ಮಾಡಿ ಮರುದಿನದ ಪ್ರಯಾಣಕ್ಕೆ ಸಜ್ಜುಗೊಳಿಸಬೇಕು ಎಂದರು.

ಜಿಲ್ಲೆಯ ಶಾಲೆಗಳ ಪ್ರತಿ ಮಗುವನ್ನೂ ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷಿಸಿ ದಾಖಲಿಸಬೇಕು. ಪ್ರತಿ ವಿದ್ಯಾರ್ಥಿ ಮಾಸ್ಕ್ ಧರಿಸುವಂತೆ ನೋಡಿಕೊಳ್ಳಬೇಕು ಎಂದರು.

ಎಸ್.ಎಸ್.ಎಲ್.ಸಿ, ಪಿಯುಸಿ ಶಾಲಾ ಕೊಠಡಿಗಳ ಸ್ವಚ್ಛತೆಗೆ ಹಾಗೂ 6 ರಿಂದ 9ನೇ ತರಗತಿಯ ವಿದ್ಯಾಗಮ ತರಗತಿಗಳ ಆವರಣ ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಅವರು ಆವರಣದಲ್ಲಿ ವಿದ್ಯಾರ್ಥಿಗಳಿಗೆ ಬಿಸಿಲು ತಾಗದಂತೆ ತರಗತಿಗಳನ್ನು ನಡೆಸಲು ಅವರು ಸಲಹೆ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತ ಶ್ರೀ ಹರ್ಷಾ ಶೆಟ್ಟಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತರಗತಿ ವೇಳಾಪಟ್ಟಿ

ಎಸ್.ಎಸ್.ಎಲ್.ಸಿ ತರಗತಿಗಳು ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.30 ರವರೆಗೆ (ಪ್ರತಿ ದಿನ 45 ನಿಮಿಷಗಳ 3 ಅವಧಿಗಳು) ನಡೆಯಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹೊಸೂರ ತಿಳಿಸಿದರು.

ಪ್ರಾಥಮಿಕ ಶಾಲೆಗಳಲ್ಲಿ 6 ಮತ್ತು 7 ತರಗತಿ ಇರುವ ಶಾಲೆಗಳ ವಿದ್ಯಾಗಮ ವೇಳಾಪಟ್ಟಿಯನ್ವಯ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.30 ರವರೆಗೆ ಹಾಗೂ ಮಧ್ಯಾಹ್ನ 2 ರಿಂದ 4.30 ರವರೆಗೆ ನಡೆಯಲಿದ್ದು, 6 ನೇ ತರಗತಿ ಸೋಮವಾರ, ಬುಧವಾರ, ಶುಕ್ರವಾರ ಹಾಗೂ 7 ನೇ ತರಗತಿ ಮಂಗಳವಾರ, ಬುಧುವಾರ, ಶನಿವಾರ ನಡೆಯಲಿವೆ.

ಪ್ರಾಥಮಿಕ ಶಾಲೆಗಳಲ್ಲಿ 6 ಮತ್ತು 8 ತರಗತಿ ಇರುವ ಶಾಲೆಗಳ ವಿದ್ಯಾಗಮ ವೇಳಾಪಟ್ಟಿಯನ್ವಯ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.30 ರವರೆಗೆ ಹಾಗೂ ಮಧ್ಯಾಹ್ನ 2 ರಿಂದ 4.30 ರವರೆಗೆ ನಡೆಯಲಿದ್ದು, 6 ನೇ ತರಗತಿ ಸೋಮವಾರ, ಗುರುವಾರ ಹಾಗೂ 7 ನೇ ತರಗತಿ ಮಂಗಳವಾರ, ಶುಕ್ರವಾರ ನಡೆಯಲಿವೆ. 8 ನೇ ತರಗತಿ ಬುಧವಾರ, ಶನಿವಾರ ನಡೆಯಲಿವೆ.

ಪ್ರಾಥಮಿಕ ಶಾಲೆಗಳಲ್ಲಿ 8 ಮತ್ತು 9 ತರಗತಿ ಇರುವ ಶಾಲೆಗಳ ವಿದ್ಯಾಗಮ ವೇಳಾಪಟ್ಟಿಯನ್ವಯ ಬೆಳಿಗ್ಗೆ 10 ರಿಂದ 12.30 ರವರೆಗೆ ಹಾಗೂ ಮಧ್ಯಾಹ್ನ 2 ರಿಂದ 4.30 ರವರೆಗೆ ನಡೆಯಲಿದ್ದು, 9 ನೇ ತರಗತಿ ಸೋಮವಾರ, ಬುಧವಾರ, ಶುಕ್ರವಾರ ಹಾಗೂ 8 ನೇ ತರಗತಿ ಮಂಗಳವಾರ, ಗುರುವಾರ ನಡೆಯಲಿವೆ.

ಎಸ್.ಎಸ್.ಎಲ್.ಸಿ ತರಗತಿಗಳು ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ 12.30 ರವರೆಗೆ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.