ADVERTISEMENT

₹2,07 ಕೋಟಿ ವಂಚನೆ ಪತ್ತೆ: ಎಸ್‌ಪಿ

12 ಸೈಬರ್ ಪ್ರಕರಣ ಬೇಧಿಸಿದ ಸಿಇಎನ್ ಕ್ರೈಂ ಪೊಲೀಸ್

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2024, 14:15 IST
Last Updated 1 ಫೆಬ್ರುವರಿ 2024, 14:15 IST
ವಿಜಯಪುರ ನಗರ ಹಾಗೂ ಜಿಲ್ಲೆಯಾದ್ಯಂತ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾಗಿರುವ  ಮೊಬೈಲ್‌ಗಳೊಂದಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಮತ್ತು ಪೊಲೀಸ್‌ ಅಧಿಕಾರಿಗಳು–ಪ್ರಜಾವಾಣಿ ಚಿತ್ರ 
ವಿಜಯಪುರ ನಗರ ಹಾಗೂ ಜಿಲ್ಲೆಯಾದ್ಯಂತ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾಗಿರುವ  ಮೊಬೈಲ್‌ಗಳೊಂದಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಮತ್ತು ಪೊಲೀಸ್‌ ಅಧಿಕಾರಿಗಳು–ಪ್ರಜಾವಾಣಿ ಚಿತ್ರ    

ವಿಜಯಪುರ: ಕ್ರಿಪ್ಟೋ ಟ್ರೆಡಿಂಗ್, ಪಾರ್ಟ್‌ ಟೈಮ್ ಜಾಬ್,  ಷೇರ್ ಮಾರ್ಕೇಟ್ ಟ್ರೆಡಿಂಗ್, ಕ್ರೆಡಿಟ್, ಡೆಬಿಟ್ ಕಾರ್ಡ್ ಒಟಿಪಿ,  ಕಂಪನಿ ಪ್ರಾಂಚೈಸಿ ಮತ್ತು ಡೀಲರ್‌ಶಿಪ್‌ ಮತ್ತು ವರ್ಟಿಕಲ್ ಫಾರ್ಮಿಂಗ್ ಸೇರಿದಂತೆ ಕಳೆದ ನಾಲ್ಕು ತಿಂಗಳಲ್ಲಿ 12 ಸೈಬರ್ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ತಿಳಿಸಿದರು.

ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ 12 ಪ್ರಕರಣಗಳಲ್ಲಿ ಒಟ್ಟು ₹2,07,07,041 ವಂಚನೆಯಾಗಿದ್ದು, ಇದರಲ್ಲಿ ಬಹುತೇಕ ಪ್ರಕರಣ ಪತ್ತೆ ಹಚ್ಚಲಾಗಿದ್ದು, ನೊಂದ ದೂರುದಾರರ ಬ್ಯಾಂಕ್ ಖಾತೆಗಳಿಗೆ ಒಟ್ಟು ₹1,89,12,741 ಗಳನ್ನು ಜಮಾ ಮಾಡಿಸಲಾಗಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಒನ್ ಕಾರ್ಡ್‌ ಒನ್ ನೇಷನ್’ ಯೋಜನೆ ಹೆಸರಿನಲ್ಲಿ ಉದ್ಯೋಗ ಕೊಡಿಸುವುದಾಗಿ ಮಧುಗಿರಿಯ ಆರೋಪಿ ಸುಧೀರ ರೆಡ್ಡಿ  ಎಂಬಾತ ವಿಜಯಪುರ ನಗರದ ಮಹಿಳೆಯೊಬ್ಬರ ಎನ್.ಜಿ.ಓ. ಮೂಲಕ ರಾಜ್ಯದ್ಯಂತ ಸುಮಾರು 6 ಸಾವಿರ ಅಭ್ಯರ್ಥಿಗಳಿಂದ ಒಟ್ಟು ₹95,75,548 ಆನ್‌ಲೈನ್ ವಂಚೆನ ಮಾಡಿದ್ದು, ಆರೋಪಿಯ ಬ್ಯಾಂಕ್ ಖಾತೆಗಳನ್ನು ಪ್ರೀಜ್ ಮಾಡಿಸಿ ಒಟ್ಟು ₹70 ಲಕ್ಷ  ಜಪ್ತಿ ಮಾಡಿ, ನೊಂದ ಅಭ್ಯರ್ಥಿಗಳ ಖಾತೆಗೆ ಹಣ ಜಮೆ ಮಾಡಲಾಗಿದೆ ಎಂದರು.

ADVERTISEMENT

ಇ-ಸ್ಟೋರ್ ಇಂಡಿಯಾ ಕಂಪನಿಯ ಪ್ರಾಂಚೈಸಿ ನೀಡುವುದಾಗಿ ಆಲಮೇಲ ತಾಲ್ಲೂಕಿನ ಮೊರಟಗಿ ಗ್ರಾಮದ ವ್ಯಾಪಾರಸ್ಥನ ಕಡೆಯಿಂದ ಒಟ್ಟು ₹29.40 ಲಕ್ಷ ಹಾಕಿಸಿಕೊಂಡು ವಂಚನೆ ಎಸಗಿದ ಆಪಾದಿತರ ಕಂಪನಿಯ ಎಲ್ಲ ಬ್ಯಾಂಕ್ ಖಾತೆಗಳನ್ನು ಪ್ರೀಜ್ ಮಾಡಿಸಿ, ನೊಂದ ವ್ಯಕ್ತಿಯ ಖಾತೆಗೆ ಹಣ ಜಮೆ ಮಾಡಿಸಲಾಗಿದೆ ಎಂದು ತಿಳಿಸಿದರು.

ಮಹಾರಾಷ್ಟ್ರದ ಠಾಣೆಯ ಎ.ಎಸ್. ಅಗ್ರಿ ಮತ್ತು ಅಕ್ವಾ ಎಲ್.ಎಲ್.ಪಿ  ಕಂಪನಿ ಹೆಸರಲ್ಲಿ ಇಂಡಿ ಪಟ್ಟಣದ ರೈತರೊಬ್ಬರ ಜಮೀನದಲ್ಲಿ ಹೈಟೆಕ್ ವರ್ಟಿಕಲ್ ಫಾರ್ಮಿಂಗ್ ಪಾಲಿ ಹೌಸ್‌ ನಿರ್ಮಾಣ ಮತ್ತು ನಿರ್ವಹಣೆ ಮಾಡುತ್ತೇನೆ ಎಂದು ಹೇಳಿ ರೈತನ ಕಡೆಯಿಂದ ಒಟ್ಟು ₹2.20 ಕೋಟಿ ಹಾಕಿಸಿಕೊಂಡ ವಂಚನೆ ಮಾಡಿದ ಆರೋಪಿಗಳಾದ ಪ್ರಶಾಂತ ಜಾಡೆ,  ಸಂದೇಶ ಕಾಮಕರ, ಸಂದೀಪ ಸಾಮಂತ,  ಜಮೀರ ಶೇಖ್ ಅವರನ್ನು ಬಂಧಿಸಿ, ಎಲ್ಲ ಬ್ಯಾಂಕ್ ಖಾತೆಗಳನ್ನು ಡೆಬಿಟ್ ಪ್ರೀಜ್ ಒಟ್ಟು ₹ 52 ಲಕ್ಷ ತಡೆ ಹಿಡಿಯಲಾಗಿದೆ. ಇನ್ನೂಳಿದ ಆರೋಪಿತರ ಪತ್ತೆ ಕಾರ್ಯ ನಡೆದಿದೆ ಎಂದರು.

25 ಮೊಬೈಲ್‌ ಪತ್ತೆ:

ವಿಜಯಪುರ ನಗರ ಹಾಗೂ ಜಿಲ್ಲೆಯಾದ್ಯಂತ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನವಾದ ₹4.58 ಲಕ್ಷ ಮೌಲ್ಯದ 25 ಮೊಬೈಲ್‌ಗಳನ್ನು ಪತ್ತೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದರು.

ಆನ್‌ಲೈನ್‌ ವಂಚನೆ ಪ್ರಕರಣಗಳ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ಅಧಿಕಾರಿಗಳಾದ ಸಿಇಎನ್ ಠಾನೆಯ ಪೊಲೀಸ್ ಇನ್‌ಸ್ಪೆಕ್ಟರ್ ರಮೇಶ ಅವಜಿ, ಪಿಎಸ್‍ಐ  ಮಲ್ಲಿಕಾರ್ಜುನ ತಳವಾರ, ಆರೀಫ್‌ ಮುಶಾಪುರಿ,  ಪಿ.ವೈ. ಅಂಬಿಗೇರ, ಸಿಬ್ಬಂದಿಗಳಾದ ಎಂ.ಎಂ.ಕುರವಿನಶೆಟ್ಟಿ, ಸಿದ್ದು ದಾನಪ್ಪಗೊಳ, ಪಿ.ಎಂ.ಪಾಟೀಲ,  ಆರ್.ಬಿ.ಕೋಳಿ,  ಆರ್.ಐ.ಲೋಣಿ, ಎಸ್.ಐ.ಹೆಬ್ಬಾಳಟ್ಟಿ, ಪುಂಡಲೀಕ ಎಸ್.ಬಿರಾದಾರ, ಎ.ಎಚ್.ಪಾಟೀಲ, ಎಸ್.ಆರ್.ಬಡಚಿ,  ಎಂ.ಎಚ್.ಇಚ್ಚೂರ, ಡಿ.ಆರ್.ಪಾಟೀಲ,  ಎಂ.ಬಿ.ಪಾಟೀಲ, ಎ.ಎ.ಗದ್ಯಾಳ, ಎಸ್.ಆರ್.ಉಮನಾಬಾದಿ, ಎಂ.ಕೆ. ಹಾವಡಿ, ಮಲ್ಲಿಕಾರ್ಜುನ ಹೂಗಾರ ಅವರಿಗೆ ಎಸ್‌ಪಿ ನಗದು ಬಹುಮಾನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.