ADVERTISEMENT

ನಾಲತವಾಡಕ್ಕೆ 24X7 ನೀರು ಪೂರೈಕೆ: ಎ.ಎಸ್.ಪಾಟೀಲ

ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಭರವಸೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2023, 13:22 IST
Last Updated 12 ಮಾರ್ಚ್ 2023, 13:22 IST
ನಾಲತವಾಡದ ಶಾಸಕರ ಮಾದರಿ ಶಾಲೆಯಲ್ಲಿ ನೂತನ ಕಾಲೇಜು ಕಟ್ಟಡಕ್ಕೆ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರು ಭೂಮಿ ಪೂಜೆ ನೆರವೇರಿಸಿದರು 
ನಾಲತವಾಡದ ಶಾಸಕರ ಮಾದರಿ ಶಾಲೆಯಲ್ಲಿ ನೂತನ ಕಾಲೇಜು ಕಟ್ಟಡಕ್ಕೆ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರು ಭೂಮಿ ಪೂಜೆ ನೆರವೇರಿಸಿದರು    

ನಾಲತವಾಡ: ಮುಂಬರುವ ದಿನಗಳಲ್ಲಿ ₹ 31.50 ಕೋಟಿ ವೆಚ್ಚದಲ್ಲಿ 24X7 ಶುದ್ಧ ಕುಡಿಯುವ ನೀರನ್ನು ಪಟ್ಟಣದ ಮನೆಗಳಿಗೆ ಪೂರೈಕೆ ಮಾಡುವ ಯೋಜನೆಗೆ ಶಿಲಾನ್ಯಾಸ ನೆರವೇರಿಸುವೆ ಎಂದು ಆಹಾರ ಪೂರೈಕೆ ಹಾಗೂ ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಪಟ್ಟಣದ ಶಾಸಕರ ಮಾದರಿ ಶಾಲೆಯಲ್ಲಿ ನೂತನ ಕಾಲೇಜು ಕಟ್ಟಡದ ಅಡಿಗಲ್ಲು ಸಮಾರಂಭ ಹಾಗೂ ₹ 4.5 ಕೋಟಿ ಮುಖ್ಯಮಂತ್ರಿ ವಿವೇಚನಾ ವೆಚ್ಚದ ವಿವಿಧ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ನಾನು ಶಾಸಕನಾಗುವ ಪೂರ್ವದಲ್ಲಿ ನಾಲತವಾಡ ಪಟ್ಟಣದ ಸೌಂದರ್ಯ ಹೇಗಿತ್ತು, ಈಗ ಹೇಗಿದೆ ಎಂದು ಯೋಚಿಸಿ. ₹ 10 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ, ರಸ್ತೆ ವಿಭಜಕ ನಿರ್ಮಿಸಿದ್ದೇನೆ. ಪಟ್ಟಣದಲ್ಲಿ ಶರಣ ವೀರೇಶ್ವರರ ಮೂರ್ತಿ, ಬಸವಣ್ಣನವರ ಮೂರ್ತಿ, ಗಣಪತಿ, ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪಿಸಿದ್ದೇನೆ, ಸಮುದಾಯ ಭವನ, ಕಂಪೌಂಡ್ ನಿರ್ಮಿಸಿದ್ದೇನೆ. ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ ₹ 10 ಕೋಟಿ ಅನುದಾನದಲ್ಲಿ ಸಿಸಿ ರಸ್ತೆಗಳು, ನೂತನ ಬಸ್ ನಿಲ್ದಾಣ ನಿರ್ಮಿಸುವ ನಿಟ್ಟಿನಲ್ಲಿ ಪಟ್ಟಣದ ಸೌಂದರ್ಯದ ವರ್ಧನೆಗೆ ಶ್ರಮಿಸಿರುವೆ ಎಂದರು.

ADVERTISEMENT

ಪಟ್ಟಣದಲ್ಲಿ ಉದ್ಯೋಗ ಸೃಷ್ಟಿಗೆ ಪೂರಕವಾದ ವಾತಾವರಣ ನಿರ್ಮಿಸಲು ನಿರಂತರ ವಿದ್ಯುತ್‌ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ 10 ವಿದ್ಯುತ್‌ ನಿಯಂತ್ರಣ ಘಟಕಗಳ ಸ್ಥಾಪನೆ ಮಾಡಿಸಿರುವೆ, ಮಹಿಳೆಯರಿಗೆ ಹಸು ಕೊಡಿಸುವ ಇಚ್ಛೆ ಇದೆ, ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಜಾರಿಗೆ ಆದ್ಯತೆ ನೀಡಿದ್ದೇನೆ, ಎಥನಾಲ್ ಫ್ಯಾಕ್ಟರಿ ನಿರ್ಮಾಣಕ್ಕೆ ಸಜ್ಜಾಗಿರುವೆ ಎಂದರು.

ನಾಲತವಾಡ ಜನರು ಅಭಿವೃದ್ಧಿಯ ಪರ ನೀವು ನಿಲ್ಲುತ್ತಿರಿ ಎಂಬ ವಿಶ್ವಾಸವಿದೆ, ಕಾಂಗ್ರೇಸ್‌ನವರು 25 ವರ್ಷಗಳಿಂದ ತರದ ಅನುದಾನವನ್ನು ನಾನು 5 ವರ್ಷದಲ್ಲಿ ತಂದಿರುವೆ, ದೈವ ಕೊಡುವ ನ್ಯಾಯ ದೇವರು ಕೊಡುವ ನ್ಯಾಯದಂತೆ, ನಿಮ್ಮ ಆಶೀರ್ವಾದ ನನ್ನ ಮೇಲಿರಲಿ ಎಂದು ಹೇಳಿದರು.

ಮುದ್ದೇಬಿಹಾಳ ಮತ ಕ್ಷೇತ್ರದಲ್ಲಿ ಎರಡು ಸರ್ಕಾರಿ ಪಿ. ಯು ಕಾಲೇಜುಗಳಿಗೆ ಅನುಮತಿಯನ್ನು ಪಡೆದಿರುವೆ. ₹ 1 ಕೋಟಿ ಅನುದಾನದಲ್ಲಿ 5 ಹೈಟೆಕ್ ಶಾಲಾ ಕೋಣೆಗಳ ನಿರ್ಮಾಣ ಮಾಡುತ್ತಿದ್ದೇನೆ ಎಂದರು.

ಪಿಯುಸಿ ಕಾಲೇಜನ್ನು ಸ್ಥಾಪಿಸಲು ಆಗ್ರಹಿಸಿ ಸತ್ಯಾಗ್ರಹ ನಡೆಸಿ, ರಕ್ತದಲ್ಲಿ ರಾಷ್ಟ್ರಪತಿಗಳಿಗೆ, ಪ್ರಧಾನಮಂತ್ರಿಗಳಿಗೆ ಓಲೆ ಬರೆದು ಮನವಿ ಮಾಡಿದ ಸಂಜೀವ ಜೋಶಿ ಅವರನ್ನು ಸನ್ಮಾನಿಸಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆಯ ಮಲ್ಲು ಗಂಗನಗೌಡರ ಶಾಸಕರನ್ನು ಸನ್ಮಾನಿಸಿದರು. ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರು ಪಟ್ಟಣ ಪಂಚಾಯಿತಿ ವತಿಯಿಂದ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ ಮಾಡಿದರು. ಟಾಟಾ ಹಿಟ್ಯಾಚಿ ಲೋಕಾರ್ಪಣೆ ಮಾಡಿದರು.

ಬಿಜೆಪಿ ಮುಖಂಡರಾದ ಸೋಮನಗೌಡ ಬಿರಾದಾರ, ಎಂ.ಎಸ್.ಪಾಟೀಲ, ಎಂ.ಬಿ.ಅಂಗಡಿ, ಖಾಜಾ ಹುಸೇನ ಎತ್ತಿನಮನಿ,
ಮಹಾಂತೇಶ ಗಂಗನಗೌಡರ, ಮಹಾಂತೇಶ ಮೆನೆದಾಳಮಠ, ಪಾವಡಬಸು ದೇಶಮುಖ, ವೀರೇಶ ಅವ್ವೋಜಿ, ಶಿಕ್ಷಣ ಇಲಾಖೆಯ ಇಸಿಒ ಎ.ಬಿ.ಬಗಲಿ, ರಕ್ಕಸಗಿ ಸಿಆರ್‌ಪಿ ಮಹಾಂತೇಶ ನೂಲಿನವರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಎಸ್.ಬಾಗಲಕೋಟ, ಶಿಕ್ಷಕಿ ಬಸಮ್ಮ ಪಟ್ಟಣಶೆಟ್ಟಿ, ಎಸ್.ಎ.ಗಂಗನಗೌಡರ, ಮಣಿಕಂಠ ಮಲ್ಲು, ಗಂಗನಗೌಡರ, ಎಂ.ಕೆ.ಜಕಾತಿ, ಬಸಮ್ಮ ಅಮಾತಿಗೌಡರ, ಈರಣ್ಣ ಮುದ್ನೂರ, ಸಂಗಣ್ಣ ಹಾವರಗಿ ಇದ್ದರು.

***

ಮುದ್ದೇಬಿಹಾಳ ಕ್ಷೇತ್ರಕ್ಕೆ ನಾನು ಮಾಡಿರುವ ಕೆಲಸಗಳು ಜನತಾ ಜನಾರ್ಧನನ ಮುಂದಿಡುವೆ, ದೈವ ಸ್ವರೂಪಿ ಮತದಾರರು ಮುಂದಿನ ಚುನಾವಣೆಯಲ್ಲಿ ನ್ಯಾಯ ನಿರ್ಣಯ ಮಾಡಲಿದ್ದಾರೆ

–ಎ.ಎಸ್.ಪಾಟೀಲ ನಡಹಳ್ಳಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.