ADVERTISEMENT

27, 28ರಂದು ಕಾರ್ಮಿಕ ಸಂಘಟನೆಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 8:25 IST
Last Updated 25 ಫೆಬ್ರುವರಿ 2012, 8:25 IST

ವಿಜಾಪುರ: ಕೆಲಸದ ಗುತ್ತಿಗೆ ಪದ್ಧತಿ ರದ್ದತಿ, ಪಿಂಚಣಿ ಹಾಗೂ ಉದ್ಯೋಗಗಳ ಖಾಸಗೀಕರಣ ವಿರೋಧಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಇದೇ 27 ಮತ್ತು 28 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಬಿ.ಎಸ್.ಎನ್.ಎಲ್. ನೌಕರರ ಸಂಘದ ರಾಷ್ಟ್ರೀಯ ಘಟಕದ ಸಹ ಕಾರ್ಯದರ್ಶಿ ಜಿ.ಬಿ. ಸಾಲಕ್ಕಿ ಹೇಳಿದರು.

ಬೆಲೆ ಏರಿಕೆ, ಖಾಸಗೀಕರಣ ಹಾಗೂ ಇತರ ಪ್ರಮುಖ ಸಮಸ್ಯೆಗಳ ವಿರುದ್ಧ 28ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಾಗುತ್ತಿದೆ ಎಂದು ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇದೇ 27 ರಂದು ಸಂಜೆ 6ಕ್ಕೆ ನಗರದ ಕೋರಿ ಚೌಕ್‌ನಿಂದ ಅಂಬೇಡ್ಕರ್ ಚೌಕ್ ವರೆಗೆ ಪಂಜಿನ ಮೆರವಣಿಗೆ ನಡೆಯಲಿದೆ. ತಾಲ್ಲೂಕು ಕೇಂದ್ರಗಳಲ್ಲಿಯೂ ಈ ಪಂಜಿನ ಮೆರವಣಿಗೆ ನಡೆಯಲಿದೆ. 28 ರಂದು ಜಿಲ್ಲೆಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಬಂದ್ ಮಾಡಿ ಮುಷ್ಕರ ನಡೆಸಲಾಗುವುದು ಎಂದರು.

ಕಾರ್ಮಿಕರಿಗೆ 10 ಸಾವಿರ ಕನಿಷ್ಠ ವೇತನ ನೀಡುವುದೂ ಸೇರಿದಂತೆ 10 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೇಶದ 11 ಕಾರ್ಮಿಕ ಸಂಘಟನೆಗಳು ರಾಷ್ಟ್ರೀಯ ಮುಷ್ಕರಕ್ಕೆ ಕರೆ ನೀಡಿವೆ ಎಂದು ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಲೆಂಡಿ, ಸರ್ಕಾರಿ ನೌಕರರು 6ನೇ ವೇತನ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಜಿಲ್ಲೆಯ ಹಲವು ಸರ್ಕಾರಿ ನೌಕರರು ಈ ಮುಷ್ಕರವನ್ನು ಬೆಂಬಲಿಸಿ ಅದರಲ್ಲಿಇ ಪಾಲ್ಗೊಳ್ಳಲಿದ್ದಾರೆ ಎಂದರು.

ಸಮಗ್ರ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿ, ಜಿಲ್ಲೆಯ ಬರಗಾಲ ಅಳಿಸಿಹಾಕಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಭೀಮಶಿ ಕಲಾದಗಿ ಒತ್ತಾಯಿಸಿದರು.

ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರಾದ ಡಿ.ಎಚ್. ಮುಲ್ಲಾ, ಜಿ.ಜಿ. ಗಾಂಧಿ, ಸುರೇಶ ಜಿ.ಬಿ., ಮಲ್ಲಿಕಾರ್ಜುನ, ಸುರೇಖಾ ರಜಪೂತ, ಎ.ಎಂ. ಬಗಲಿ, ಲಕ್ಷ್ಮಣ ಹಂದ್ರಾಳ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.