ADVERTISEMENT

3 ವರ್ಷದಲ್ಲಿ ಸರ್ಕಾರಿ ಶಾಲೆ ಡಿಜಿಟಲೀಕರಣ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 10:49 IST
Last Updated 15 ನವೆಂಬರ್ 2017, 10:49 IST
ವಿಜಯಪುರ ತಾಲ್ಲೂಕಿನ ಅಡವಿ ಸಂಗಾಪುರ ಗ್ರಾಮದಲ್ಲಿ ಮಂಗಳವಾರ ನಡೆದ ಮಕ್ಕಳ ದಿನಾಚರಣೆಯಲ್ಲಿ ಸಚಿವ ಎಂ.ಬಿ.ಪಾಟೀಲ ಸರ್ಕಾರಿ ಶಾಲೆಯ ಮಕ್ಕಳಿಗೆ ಗುಲಾಬಿ ನೀಡಿದರು
ವಿಜಯಪುರ ತಾಲ್ಲೂಕಿನ ಅಡವಿ ಸಂಗಾಪುರ ಗ್ರಾಮದಲ್ಲಿ ಮಂಗಳವಾರ ನಡೆದ ಮಕ್ಕಳ ದಿನಾಚರಣೆಯಲ್ಲಿ ಸಚಿವ ಎಂ.ಬಿ.ಪಾಟೀಲ ಸರ್ಕಾರಿ ಶಾಲೆಯ ಮಕ್ಕಳಿಗೆ ಗುಲಾಬಿ ನೀಡಿದರು   

ವಿಜಯಪುರ: ‘ಗ್ರಾಮಾಂತರ ಪ್ರದೇಶದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲು ಅನುಕೂಲವಾಗುವಂತೆ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ 300 ಸರ್ಕಾರಿ ಶಾಲಾ ಮಕ್ಕಳಿಗೆ ಡಿಜಿಟಲ್ ಕ್ಲಾಸ್ ರೂಂ ವ್ಯವಸ್ಥೆ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ವಿಜಯಪುರ ಗ್ರಾಮೀಣ ವಲಯ, ಎಂ.ಬಿ.ಪಾಟೀಲ ಫೌಂಡೇಷನ್ ವತಿಯಿಂದ ಮಂಗಳವಾರ ವಿಜಯಪುರ ತಾಲ್ಲೂಕಿನ ಅಡವಿ ಸಂಗಾಪುರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ, ಶೈಕ್ಷಣಿಕ ಸುಧಾರಣಾ ಸಪ್ತಾಹ ಸಮಾರೋಪ, ಡಿಜಿಟಲ್ ಕ್ಲಾಸ್ ರೂಂ ಉದ್ಘಾಟನೆ ಹಾಗೂ ಮಕ್ಕಳ ದಿನಾಚರಣೆಯಲ್ಲಿ ಮಾತನಾಡಿದರು.

‘ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ನಗರ ಪ್ರದೇಶದ ಮಕ್ಕಳಂತೆ ಅವಕಾಶ ದೊರೆಯಬೇಕಿದೆ. ವಿಶೇಷವಾಗಿ ಶಾಲೆಗಳಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಶಿಕ್ಷಣ ವ್ಯವಸ್ಥೆ ಕಲ್ಪಿಸುವ ಅವಶ್ಯಕತೆಯಿದೆ. ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದ ಎಲ್ಲ ಸರ್ಕಾರಿ ಶಾಲೆಗಳಿಗೆ ಮೂರು ವರ್ಷದಲ್ಲಿ ಡಿಜಿಟಲ್ ಕ್ಲಾಸ್ ರೂಂ ವ್ಯವಸ್ಥೆ ಕಲ್ಪಿಸುವ ಮೂಲಕ ರಾಜ್ಯದಲ್ಲೇ ಮಾದರಿಯನ್ನಾಗಿ ಮಾಡಲಾಗುವುದು’ ಎಂದು ಹೇಳಿದರು.

ADVERTISEMENT

‘ಪ್ರತಿಭೆಯುಳ್ಳ ಮಕ್ಕಳು ಭವಿಷ್ಯದಲ್ಲಿ ಸಮಾಜದಲ್ಲಿನ ಸವಾಲು ಎದುರಿಸುತ್ತಾರೆ. ನಗರ ಪ್ರದೇಶದಂತೆ ಗ್ರಾಮಾಂತರ ಪ್ರದೇಶದ ಮಕ್ಕಳಿಗೂ ಅವಕಾಶ ದೊರೆಯಬೇಕು. ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದೊಂದಿಗೆ ಪ್ರತಿ ವರ್ಷ 100 ಶಾಲೆಗಳಂತೆ, ಮೂರು ವರ್ಷಗಳಲ್ಲಿ 300 ಶಾಲೆಗಳಲ್ಲಿ ಡಿಜಿಟಲ್ ಕ್ಲಾಸ್ ರೂಂ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಶಾಲೆಗಳ ದುರಸ್ತಿಗಾಗಿ ₹35 ಕೋಟಿ ಅನುದಾನದ ಅವಶ್ಯಕತೆಯಿದೆ. ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಶಾಲಾ ಶಿಕ್ಷಕರಿಗೂ ಲ್ಯಾಪ್‌ಟಾಪ್ ಮೂಲಕ ತರಬೇತಿಗೊಳಿಸುವ ಅವಶ್ಯಕತೆಯಿದೆ. ಮುಂಬರುವ ದಿನಗಳಲ್ಲಿ ಶಾಸಕರ ನಿಧಿಯಡಿ ಹೆಚ್ಚಿನ ಅನುದಾನವನ್ನು ಶಾಲಾ ಸುಧಾರಣೆಗಳಿಗಾಗಿ ಮೀಸಲಿಡಲಾಗುತ್ತದೆ’ ಎಂದು ಸಚಿವ ಪಾಟೀಲ ಇದೇ ಸಂದರ್ಭ ಪ್ರಕಟಿಸಿದರು.

‘ಶೈಕ್ಷಣಿಕ ಸುಧಾರಣಾ ಸಪ್ತಾಹ ನಿರಂತರವಾಗಿ ನಡೆಯಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆಯೊಂದಿಗೆ, ಜಿಲ್ಲಾಡಳಿತದೊಂದಿಗೆ ಎಂ.ಬಿ.ಪಾಟೀಲ ಫೌಂಡೇಷನ್ ಎಲ್ಲ ರೀತಿಯ ಸಹಕಾರ ಒದಗಿಸಲಿದೆ’ ಎಂದು ಹೇಳಿದರು.

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಮಾತನಾಡಿ ‘ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಗುಣಮಟ್ಟದ ಶಿಕ್ಷಣ ದೊರಕಿಸಬೇಕು. ಬಾಲ್ಯದಿಂದಲೇ ಉತ್ತಮ ಗುಣ ಬೆಳೆಸಬೇಕು. ದುಶ್ಚಟಗಳಿಂದ ದೂರವಿರುವಂತೆ ನೋಡಿಕೊಳ್ಳಬೇಕು. ಪ್ರಾಮಾಣಿಕತೆ, ಶ್ರದ್ಧೆ, ಸರಳ ಬದುಕು, ರಾಷ್ಟ್ರಾಭಿಮಾನ, ಪ್ರಬುದ್ಧತೆ ಬೆಳೆಸಿದ್ದಲ್ಲಿ, ಈ ರಾಷ್ಟ್ರದ ಉತ್ತಮ ಪ್ರಜೆಗಳಾಗಿ ಮಕ್ಕಳನ್ನು ರೂಪಿಸಬಹುದಾಗಿದೆ. ಮಕ್ಕಳನ್ನು ಬುದ್ಧಿವಂತರು, ಪ್ರಜ್ಞಾವಂತರು ಮನೋಸ್ಥೈರ್ಯವುಳ್ಳವರನ್ನಾಗಿ ಮಾಡಬೇಕು. ಭ್ರಷ್ಟಾಚಾರ, ಜಾತೀಯತೆ, ಅಪರಾಧಿಕ ಮನೋಭಾವನೆ, ಸಮಾಜದಿಂದ ಹೋಗಬೇಕಿದ್ದು, ಪಾಲಕರು, ಶಿಕ್ಷಕರು, ಸಮಾಜದ ಎಲ್ಲ ಮುಖಂಡರು ಮಕ್ಕಳ ವ್ಯಕ್ತಿತ್ವ ರೂಪಿಸುವಂತೆ ಪ್ರಯತ್ನಿಸಿ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ, ಎಂ.ಬಿ.ಪಾಟೀಲ ಫೌಂಡೇಷನ್ ಪ್ರಧಾನ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪ್ರಸನ್ನಕುಮಾರ ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ಶಾಲಾ ಆವರಣದಲ್ಲಿ ಸಸಿ ನೆಡಲಾಯಿತು. ಡಿಜಿಟಲ್ ಕ್ಲಾಸ್ ರೂಂ ಉದ್ಘಾಟಿಸಲಾಯಿತು. ಗುಣಮಟ್ಟದ ಶಿಕ್ಷಣ ಒದಗಿಸುವ ಕುರಿತು ತಯಾರಿಸಲಾದ ಸಿ.ಡಿ.ಯನ್ನು ಬಿಡುಗಡೆಗೊಳಿಸಲಾಯಿತು.

ಮಕ್ಕಳ ದಿನಾಚರಣೆ ಅಂಗವಾಗಿ ಮಾಜಿ ಪ್ರಧಾನಿ ದಿ. ಜವಾಹರಲಾಲ್ ನೆಹರು ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಲಾಯಿತು. ಎಂ.ಬಿ.ಪಾಟೀಲ ಫೌಂಡೇಷನ್ ಅಧ್ಯಕ್ಷ ರಾಹುಲ ಪಾಟೀಲ ಅವರು ಅರಳಿ ನಾಗರಾಜ್ ಅವರನ್ನು ಸನ್ಮಾನಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಉಮೇಶ ಕೋಳಕೂರ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಬಿ.ಗೂಗಿಹಾಳ ಉಪಸ್ಥಿತರಿದ್ದರು. ಸಚಿವರ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಹಾಂತೇಶ ಬಿರಾದಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

* * 

ಕನ್ನಡದಲ್ಲಿಯೇ ಪ್ರಸಾರವಾಗುವ ನ್ಯಾಷನಲ್ ಜಿಯಾಗ್ರಾಫಿ ಚಾನೆಲ್, ಅನಿಮಲ್ ಪ್ಲಾನೆಟ್‌ಗಳಂತಹ ವಾಹಿನಿಯನ್ನು ಪ್ರಸಾರಗೊಳಿಸಿ ಮಕ್ಕಳ ಬೌದ್ಧಿಕ ಜ್ಞಾನ ಹೆಚ್ಚಿಸಲಾಗುವುದು
ಎಂ.ಬಿ.ಪಾಟೀಲ,
ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.