ADVERTISEMENT

ಫೆ. 4, 5 ರಂದು ವಿಜಯಪುರದಲ್ಲಿ ಪತ್ರಕರ್ತರ 37 ನೇ ರಾಜ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 13:28 IST
Last Updated 22 ಜನವರಿ 2023, 13:28 IST

ವಿಜಯಪುರ: ವಿಜಯಪುರ ನಗರದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ಪತ್ರಕರ್ತರ 37ನೇ ರಾಜ್ಯ ಮಟ್ಟದ ಸಮ್ಮೇಳನದ ನಡೆಯಲಿದೆ ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಗಡಿ ಜಿಲ್ಲೆಯಲ್ಲಿ ನಡೆಯುವ ಈ ಸಮ್ಮೇಳನ ಹಲವು ವೈಶಿಷ್ಠ್ಯಗಳೊಂದಿಗೆ ಐತಿಹಾಸಿಕವಾಗಿಸಲು ಎಲ್ಲರೂ ಕೈಜೋಡಿಸಬೇಕು ಎಂದರು.

ಫೆ. 4 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಫೆ. 5ರಂದು ಪ್ರತಿನಿಧಿಗಳ ಸಮಾವೇಶ ನಡೆಯುವುದು. ನಂತರ ಸಮಾರೋಪ ಸಮಾರಂಭ ಹಾಗೂ ಕೆಯುಡಬ್ಲ್ಯೂಜೆ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು.

ADVERTISEMENT

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮುಖ್ಯ ಅತಿಥಿಯಾಗಿ ಆಗಮಿಸುವರು ಎಂದರು. ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭದಲ್ಲಿ ಹಲವಾರು ಸಚಿವರು, ಸಂಸದರು, ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸುವರು ಎಂದರು.

ಸಮ್ಮೇಳನದಲ್ಲಿ ನವಮಾಧ್ಯಮ ಮತ್ತು ಪತ್ರಕರ್ತರು, ಸುದ್ದಿಮಾಧ್ಯಮದಲ್ಲಿ ಮಹಿಳೆಯರು, ಗಡಿ ಮತ್ತು ಮಾಧ್ಯಮ ಎಂಬ ವಿಷಯ ಕುರಿತು ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಇದರ ಜೊತೆಗೆ ಪತ್ರಿಕಾ ವಿತರಕರ ಸಮಸ್ಯೆಗಳ ಕುರಿತು ಚರ್ಚೆ ನಡೆಯಲಿದೆ ಎಂದು ಶಿವಾನಂದ ತಗಡೂರ ವಿವರಿಸಿದರು.

ಹಿರಿಯ ಪತ್ರಕರ್ತರಿಗೆ ಗೌರವ:

ಸಮ್ಮೇಳನದಲ್ಲಿ ಜಿಲ್ಲೆಯ 10 ಜನ ಹಿರಿಯ ಪತ್ರಕರ್ತರಿಗೆ ಗೌರವ ಸನ್ಮಾನವಿರುತ್ತದೆ ಎಂದರು. ಎರಡು ದಿನಗಳ ಈ ಸಮ್ಮೇಳನದಲ್ಲಿ ಐದು ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಈಗಾಗಲೇ ಎರಡೂವರೆ ಸಾವಿರ ಜನ ಪ್ರತಿನಿಧಿಗಳ ನೋಂದಣಿಯಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ, ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ, ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಉಪಾಧ್ಯಕ್ಷರಾದ ಇಂದುಶೇಖರ ಮಣೂರ, ಪ್ರಕಾಶ ಬೆಣ್ಣೂರ, ಫಿರೋಜ್ ರೋಜಿನದಾರ, ಕಾರ್ಯದರ್ಶಿಗಳಾದ ಅವಿನಾಶ ಬಿದರಿ, ಮಲ್ಲಿಕಾರ್ಜುನ ಕೆಂಭಾವಿ, ಖಜಾಂಚಿಗಳಾದ ರಾಹುಲ ಆಪ್ಟೆ, ದೀಪಕ ಶಿಂತ್ರೆ, ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶ ವಿ. ಶಟಗಾರ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಡಿ.ಬಿ.ವಡವಡಗಿ, ಕೆ.ಕೆ.ಕುಲಕರ್ಣಿ, ಕೌಶಲ್ಯ ಪನಾಳಕರ, ಕೆ.ಎನ್.ರಮೇಶ, ಡಾ.ಓಂಕಾರ ಕಾಕಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.