ADVERTISEMENT

50 ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ

ಇದೇ ಸಾಲಿನಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಆರಂಭ: ಸಿಇಒ ಎಂ.ಸುಂದರೇಶಬಾಬು

​ಪ್ರಜಾವಾಣಿ ವಾರ್ತೆ
Published 26 ಮೇ 2018, 12:21 IST
Last Updated 26 ಮೇ 2018, 12:21 IST

ವಿಜಯಪುರ: 2018–19 ಸಾಲಿನಲ್ಲಿ ಜಿಲ್ಲೆಯ ಆಯ್ದ 50 ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಾಯೋಗಿಕವಾಗಿ 6 ಮತ್ತು 8ನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ವಿಭಾಗ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸುಂದರೇಶಬಾಬು ಹೇಳಿದರು.

ನಗರದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ತರಗತಿ ಆರಂಭಿಸುವ ಸಾಧ್ಯತೆಗಳ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದದರು.

ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಜಿಲ್ಲೆಯು ಉತ್ತಮ ಸಾಧನೆ ಮಾಡಿದ್ದು, ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಸುಧಾರಣೆ ತರುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಶಾಲೆಗಳಲ್ಲಿ ಬ್ಲಾಕ್‌ಮಟ್ಟದಲ್ಲಿ 6ನೇ ತರಗತಿಯಿಂದ 5 ಶಾಲೆಗಳಲ್ಲಿ, 8ನೇ ತರಗತಿಯಿಂದ 3 ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಬೇಕು. ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳೊಂದಿಗೆ ಸ್ಪರ್ಧಿಸುವಂತೆ ಮಕ್ಕಳಿಗೆ ಉನ್ನತ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.

ADVERTISEMENT

ಇಂಗ್ಲಿಷ್‌ ಮಾಧ್ಯಮದ ಪ್ರಯೋಗದಿಂದ ಉತ್ತಮ ಫಲಿತಾಂಶ ಪಡೆಯಲು ಪರಿಣಿತ ಶಿಕ್ಷಕರ ಅಗತ್ಯವಿದೆ. ಆದ್ದರಿಂದ ಅಗತ್ಯ ಪ್ರಮಾಣದ ಶಿಕ್ಷಕರನ್ನು ನಿಯೋಜನೆ ಮೂಲಕ ಅಥವಾ ಅತಿಥಿ ಶಿಕ್ಷಕರ ನೇಮಕದ ಮೂಲಕ ವ್ಯವಸ್ಥೆ ಮಾಡಿ, ನಿಯೋಜಿತ ಶಿಕ್ಷಕರಿಗೆ 2 ರಿಂದ 3 ದಿನ ಪೂರ್ವ ತರಬೇತಿ ನೀಡುವಂತೆ ಸಂಬಂಧಿಸಿದ ಶಿಕ್ಷಣಧಿಕಾರಿಗಳಿಗೆ ಸೂಚನೆ ನೀಡಿದರು.

ಹೊಸದಾಗಿ ಇಂಗ್ಲಿಷ್‌ ಮಾಧ್ಯಮ ಆರಂಭಿಸುವ ಶಾಲೆಗಳಲ್ಲಿ ಕಡ್ಡಾಯವಾಗಿ ಅಗತ್ಯ ಕೊಠಡಿಗಳು, ಸ್ಥಳಾವಕಾಶ ಸೇರಿದಂತೆ ಅವಶ್ಯಕ ಮೂಲ ಸೌಕರ್ಯಗಳಿರಬೇಕು. ಇಂತಹ ಎಲ್ಲ ಮೂಲಭೂತ ಸೌಕರ್ಯಗಳು, ಅಗತ್ಯ ಸೌಲಭ್ಯವಿರುವ ಜಿಲ್ಲೆಯ ಆಯ್ದ 50 ಶಾಲೆಗಳ ಪಟ್ಟಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಈಗಾಗಲೇ ನೀಡಿದ್ದಾರೆ. ಈ ಶಾಲೆಗಳಲ್ಲಿ ಶೈಕ್ಷಣಿಕ ವರ್ಷದ ಆರಂಭದಿಂದಲೇ ಇಂಗ್ಲಿಷ್‌ ಮಾಧ್ಯಮ ಆರಂಭಗೊಳ್ಳಲಿದೆ ಎಂದು ಹೇಳಿದರು.

ಗ್ರಾಮೀಣ ಭಾಗದ ಶಾಲೆಗಳಲ್ಲಿ ಅಗತ್ಯವಿರುವ ಆವರಣ ಗೋಡೆ, ಆಟದ ಮೈದಾನ, ಸಣ್ಣಪುಟ್ಟ ದುರಸ್ತಿಗಳನ್ನು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾಡಿಕೊಡಲಾಗುವುದು. ಶಾಲಾ ಆವರಣದಲ್ಲಿ ಸ್ಥಳಾವಕಾಶವಿದ್ದರೆ ತರಕಾರಿ ಬೆಳೆ ಬೆಳೆಯಲು ಉದ್ಯಾನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ವಿಶ್ವ ಪರಿಸರ ದಿನದಂದು ಶಾಲೆಗಳಲ್ಲಿ ಸಸಿ ನೆಡುವ ಕಾರ್ಯಕ್ರಮದ ಉದ್ದೇಶವಿದ್ದು, ಅದಕ್ಕೆ ಅಗತ್ಯವಾದ ಸಸಿಗಳ ಪೋಷಣೆಗೆ ನೀರಿನ ವ್ಯವಸ್ಥೆ, ಸ್ಥಳಾವಕಾಶದ ಲಭ್ಯತೆ, ಆವರಣ ಗೋಡೆ ವ್ಯವಸ್ಥೆ ಮುಂತಾದವುಗಳ ಕುರಿತು ಪರಿಶೀಲಿಸಿ ವರದಿ ನೀಡಲು ಸೂಚಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರಾಯಪ್ಪರೆಡ್ಡಿ ಹಾಗೂ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.