ADVERTISEMENT

ಗಡುವು ಮುಗಿದರೂ ಪೂರ್ಣಗೊಳ್ಳದ ವೆಲೊಡ್ರೋಮ್..!

ಡಿ.ಬಿ, ನಾಗರಾಜ
Published 2 ಜನವರಿ 2018, 6:27 IST
Last Updated 2 ಜನವರಿ 2018, 6:27 IST
ವಿಜಯಪುರ ಹೊರ ವಲಯದ ಭೂತನಾಳ ಕೆರೆ ಬಳಿ ನಿರ್ಮಾಣದ ಹಂತದಲ್ಲಿರುವ ವೆಲೊಡ್ರೋಮ್
ವಿಜಯಪುರ ಹೊರ ವಲಯದ ಭೂತನಾಳ ಕೆರೆ ಬಳಿ ನಿರ್ಮಾಣದ ಹಂತದಲ್ಲಿರುವ ವೆಲೊಡ್ರೋಮ್   

ವಿಜಯಪುರ: ಗುತ್ತಿಗೆ ಅವಧಿ ಮುಗಿದು ವರ್ಷ ಗತಿಸಿದರೂ, ಇಲ್ಲಿನ ಹೊರ ವಲಯದಲ್ಲಿ ನಿರ್ಮಾಣವಾಗುತ್ತಿರುವ ರಾಜ್ಯದ ಮೊದಲ ವೆಲೊಡ್ರೋಮ್‌ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಟ್ರ್ಯಾಕ್‌ ಸೈಕ್ಲಿಂಗ್‌ನ ಅಂತರರಾಷ್ಟ್ರೀಯ ಗುಣಮಟ್ಟದ ಮಾನದಂಡದ ಅನುಸಾರ, ಸೊನ್ನೆ ಡಿಗ್ರಿಯಿಂದ 36 ಡಿಗ್ರಿಯವರೆಗೆ 333.3 ಮೀಟರ್‌ ಉದ್ದ, ತಿರುವು, ಏರಿಳಿತ ಒಳಗೊಂಡ ಟ್ರ್ಯಾಕ್‌ ಸಿದ್ಧಗೊಂಡು, ಸೈಕ್ಲಿಸ್ಟ್‌ಗಳ ತಾಲೀಮು, ಚಾಂಪಿಯನ್‌ಷಿಪ್‌ಗೆ ವೇದಿಕೆಯಾಗಬೇಕಿತ್ತು.

ಆದರೆ, ಇನ್ನೂ ಕನಿಷ್ಠ 90 ಮೀಟರ್ ಉದ್ದದ ಟ್ರ್ಯಾಕ್‌ ನಿರ್ಮಿಸಬೇಕಿದೆ. ವೆಲೊಡ್ರೋಮ್‌ ಒಳ ಭಾಗದಲ್ಲಿ ಯಾವೊಂದೂ ಕೆಲಸವೂ ನಡೆದಿಲ್ಲ. ಇದು ವಿಜಯಪುರದ ಮತ್ತೊಂದು ‘ಬಾರಾ ಕಮಾನ್‌’ ಆಗಿದೆ ಎಂದು ರಾಜ್ಯ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಉಪಾಧ್ಯಕ್ಷ ರಾಜು ಬಿರಾದಾರ ಅಭಿಪ್ರಾಯಪಟ್ಟರು.

ಅವೈಜ್ಞಾನಿಕ: ‘ವೆಲೊಡ್ರೋಮ್ ಕಾಮಗಾರಿ ಗುಣಮಟ್ಟದ್ದಾಗಿಲ್ಲ. ಈ ವಿಷಯವನ್ನು ಹತ್ತಕ್ಕೂ ಹೆಚ್ಚು ಬಾರಿ ಕ್ರೀಡಾ ಇಲಾಖೆಯ ಸಂಬಂಧಿಸಿದ ಎಂಜಿನಿಯರ್, ಅಧಿಕಾರಿ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಅವರು ದೂರಿದರು.

ADVERTISEMENT

‘ನಗರದ ಭೂತನಾಳ ಕೆರೆ ಸಮೀಪ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಸಂದರ್ಭದಲ್ಲೇ ತಾಂತ್ರಿಕ ಪರಿಣತರ ಸಲಹೆ ಪಡೆಯುವಂತೆ ಒತ್ತಾಯಿಸಲಾಗಿತ್ತು. ಆದರೆ ಇದುವರೆಗೂ ಒಮ್ಮೆಯೂ ತಾಂತ್ರಿಕ ಪರಿಣತರು ಭೇಟಿ ನೀಡಿಲ್ಲ. ಮಾರ್ಗದರ್ಶನ ನೀಡಿಲ್ಲ. ಸ್ವಲ್ಪ ತಾಂತ್ರಿಕ ದೋಷ ಕಂಡುಬಂದರೂ ವೆಲೊಡ್ರೋಮ್‌ ಉಪಯೋಗಕ್ಕೆ ಬರುವುದಿಲ್ಲ’ ಎಂದು ಅವರು ತಿಳಿಸಿದರು.

‘ಪುಣೆಯಲ್ಲಿ 1995ರಲ್ಲಿ ನೂತನವಾಗಿ ನಿರ್ಮಿಸಿದ್ದ ವೆಲೊಡ್ರೋಮ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ, ಆಯೋಜಿಸಿದ್ದ ರಾಷ್ಟ್ರೀಯ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ ರದ್ದುಗೊಳಿಸಲಾಗಿತ್ತು. ಅಂದಿನಿಂದಲೂ ಅದು ಬಳಕೆಯಾಗುತ್ತಿಲ್ಲ. ಇದೇ ರೀತಿ ತಮಿಳುನಾಡಿನಲ್ಲೂ ನಿರ್ಮಾಣಗೊಂಡ ನೂತನ ವೆಲೊಡ್ರೋಮ್‌ನಲ್ಲಿ ದೋಷ ಕಂಡುಬಂದಿರುವುದರಿಂದ ಅಭ್ಯಾಸವೇ ನಡೆದಿಲ್ಲ’ ಎಂದರು.

‘ಗುತ್ತಿಗೆ ವಹಿಸಿಕೊಂಡಿರುವ ಕಂಪೆನಿ, ಕ್ರೀಡಾ ಇಲಾಖೆಯ ಮಾಜಿ ಸಚಿವರೊಬ್ಬರ ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿದೆ. ಈ ಕಂಪೆನಿಗೆ ಇಂಥ ಕಾಮಗಾರಿ ಕೈಗೊಂಡ ಅನುಭವವಿಲ್ಲ. ಕ್ರೀಡಾ ಇಲಾಖೆಯ ಎಂಜಿನಿಯರ್‌ ನಿರ್ದೇಶನದಂತೆ ಕೆಲಸ ಮಾಡುತ್ತಿದೆ. ಕೊಂಚ ಆಚೀಚೆಯಾದರೂ ವೆಲೊಡ್ರೋಮ್ ಬಳಕೆಗೆ ಬಾರದು. ಇದು ಸೈಕ್ಲಿಸ್ಟ್‌ಗಳ ಆತಂಕ ಹೆಚ್ಚಿಸಿದೆ’ ಎಂದು ಅವರು ಹೇಳುತ್ತಾರೆ.

ಅಡ್ಡಿಯಾದ ಬಿಸಿಲು: ‘18 ತಿಂಗಳಲ್ಲಿ ಕಾಮಗಾರಿ ಮುಗಿಸಬೇಕಿತ್ತು. ಆದರೆ ಬೇಸಿಗೆಯಲ್ಲಿ ಬಿಸಿಲ ಝಳ ಹೆಚ್ಚು ಇದ್ದುದರಿಂದ ಕಾರ್ಮಿಕರು ಕೆಲಸಕ್ಕೆ ಬರಲಿಲ್ಲ. ಕ್ರೀಡಾ ಇಲಾಖೆ ಕೂಡ ಕಾಮಗಾರಿ ಮುಗಿದಂತೆ ಬಿಲ್‌ ಪಾವತಿಸುತ್ತಿಲ್ಲ. ಈ ಎರಡೂ ಕಾರಣಗಳಿಂದ ವೆಲೊಡ್ರೋಮ್‌ ಇನ್ನೂ ಪೂರ್ಣಗೊಂಡಿಲ್ಲ’ ಎಂದು ಕಾಮಗಾರಿಯ ಉಸ್ತುವಾರಿ ವಹಿಸಿರುವ, ಹಾಸನದ ಮಾರುತಿ ಕನ್ಸ್ಟ್ರಕ್ಷನ್ಸ್‌ನ ಜಗದೀಶ ಪ್ರತಿಕ್ರಿಯಿಸಿದರು.

‘ಕೆಲ ದಿನಗಳ ಹಿಂದಷ್ಟೇ ಹೈದರಾಬಾದ್‌ಗೆ ತೆರಳಿ ಅಲ್ಲಿನ ವೆಲೊಡ್ರೋಮ್‌ ನೋಡಿಕೊಂಡು ಬಂದಿರುವೆವು. ತಾಂತ್ರಿಕ ಪರಿಣತರನ್ನು ಕರೆಸುವ ಯತ್ನವನ್ನೂ ಮಾಡುತ್ತಿದ್ದೇವೆ. ಎರಡು ತಿಂಗಳಲ್ಲಿ ಉದ್ಘಾಟನೆಯಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮಾರ್ಚ್‌ ಅಂತ್ಯಕ್ಕೆ ಪೂರ್ಣ

‘ತಾಂತ್ರಿಕ ತೊಂದರೆಗಳಿಂದಾಗಿ ಸಕಾಲದಲ್ಲಿ ಕಾಮಗಾರಿ ಮುಗಿಸಲು ಸಾಧ್ಯವಾಗಲಿಲ್ಲ. ಹೈದರಾಬಾದ್‌ನ ವೆಲೊಡ್ರೋಮ್‌ಗೆ ಭೇಟಿ ನೀಡಿ ತಾಂತ್ರಿಕ ಮಾಹಿತಿ ಪಡೆದಿದ್ದೇವೆ. ನಮ್ಮಲ್ಲಿನ ಲೋಪ ಸರಿಪಡಿಸಿಕೊಂಡು ಮಾರ್ಚ್‌ ಒಳಗೆ ಕಾಮಗಾರಿ ಮುಗಿಸಲಾಗುವುದು’ ಎಂದು ಕ್ರೀಡಾ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್‌.ಹರೀಶ್‌ ತಿಳಿಸಿದರು.

* * 

ಮತ್ತೊಂದು ವರ್ಷ ಗತಿಸಿದರೂ ವೆಲೊಡ್ರೋಮ್ ಕಾಮಗಾರಿ ಪೂರ್ಣಗೊಳ್ಳುವ ನಂಬಿಕೆಯಿಲ್ಲ.
ರಾಜು ಬಿರಾದಾರ, ರಾಜ್ಯ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.