ADVERTISEMENT

ಅಧ್ಯಕ್ಷರಾಗಿ ಮೌಲಾಸಾಬ್‌ ಆಯ್ಕೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 7:17 IST
Last Updated 3 ಜನವರಿ 2018, 7:17 IST

ನಿಡಗುಂದಿ: ಸಂಗಮೇಶ ಬಳಿಗಾರ ರಾಜೀನಾಮೆಯಿಂದ ತೆರವಾಗಿದ್ದ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮೌಲಾಸಾಬ್ ಅತ್ತಾರ ಚುನಾಯಿತರಾದರು.

ತೀವ್ರ ಕುತೂಹಲ ಕೆರಳಿಸಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೌಲಾಸಾಬ್ ಅತ್ತಾರ ಹಾಗೂ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಶಂಕರ ರೇವಡಿ ನಾಮಪತ್ರ ಸಲ್ಲಿಸಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಪರ ಪಕ್ಷದ 7 ಸದಸ್ಯರು, ಒಬ್ಬ ಪಕ್ಷೇತರ ಹಾಗೂ ಶಾಸಕ ಶಿವಾನಂದ ಪಾಟೀಲರ ಮತ ಸೇರಿ ಒಟ್ಟು 9 ಮತಗಳನ್ನು ಪಡೆದರೆ, ಬಂಡಾಯ ಅಭ್ಯರ್ಥಿ ಶಂಕರ ರೇವಡಿ ಬಿಜೆಪಿಯ ಆರು, ಒಬ್ಬ ಪಕ್ಷೇತರ ಸದಸ್ಯ ಸೇರಿ 8 ಮತಗಳನ್ನು ಪಡೆದು ಪರಾಭವಗೊಂಡರು ಎಂದು ಚುನಾವಣಾಧಿಕಾರಿ ಎಂ.ಎನ್. ಚೋರಗಸ್ತಿ ತಿಳಿಸಿದರು.

ADVERTISEMENT

ಸಂಸದರೂ ಆಗಿರುವ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರ ಮತ ಇದ್ದರೂ, ಅವರು ಗೈರು ಹಾಜರಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸುಲಭವಾಯಿತು. ಸಚಿವ ಜಿಗಜಿಣಗಿ ಅವರ ಪ್ರವಾಸ ಪಟ್ಟಿಯ ಪ್ರಕಾರ ಮಂಗಳವಾರ ನಿಡಗುಂದಿಯ ಪಟ್ಟಣ ಪಂಚಾಯ್ತಿಯ ಚುನಾವಣೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಕೊನೆಯವರೆಗೂ ಸಂಸದರು ಬರುತ್ತಾರೆಂದು ಬಿಜೆಪಿ ಮುಖಂಡರು ಹೇಳುತ್ತಿದ್ದರು. ಆದರೆ ಕೊನೆಯ ಗಳಿಗೆಯಲ್ಲಿ ಸಂಸದರು ಬಾರದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸರಳವಾಯಿತು. ಕೇಂದ್ರ ಸಚಿವರ ನಡೆ ಅನೇಕ ಸಂಶಯಕ್ಕೆ ಎಡೆ ಮಾಡಿಕೊಟ್ಟಿತು.

ವಿಜಯೋತ್ಸವ: ಅತ್ತಾರ ಆಯ್ಕೆ ಯಾಗುತ್ತಿದ್ದಂತೆ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಗುಲಾಲು ಎರಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಜಯೋತ್ಸವದ ಮೆರವಣಿಗೆ ನಡೆಸಿ ಸಿಹಿ ವಿತರಿಸಿದರು. ಪಟ್ಟಣ ವಿವಿಧ ಗಣ್ಯರು ಅತ್ತಾರ ಅವರನ್ನು ಸನ್ಮಾನಿಸಿದರು. ಮೆರವಣಿಗೆಯಲ್ಲಿ ಪಕ್ಷದ ಕಾರ್ಯಕರ್ತರು, ಗಣ್ಯರು ಪಾಲ್ಗೊಂಡಿದ್ದರು.

ಭದ್ರತೆ: ತೀವ್ರ ಕುತೂಹಲಕ್ಕೆ ಕಾರಣ ವಾಗಿದ್ದ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಸ್ಥಾನ ಚುನಾವಣೆಗೆ ಭಾರಿ ಪೊಲೀಸ್ ಬಂದೋಬಸ್ತ ಒದಗಿಸಲಾಗಿತ್ತು, ಸಿಪಿಐ ಮಹಾದೇವ ಶಿರಹಟ್ಟಿ ನೇತೃತ್ವದಲ್ಲಿ ನಾಲ್ವರು ಪಿಎಸ್ಐ, 20 ಜನ ಪೊಲೀಸ್ ಪೇದೆ, ಒಂದು ಡಿಆರ್ ತುಕುಡಿ ಬಂದೋಬಸ್ತನಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.