ADVERTISEMENT

ಇಂಡಿ: ಕುಡಿವ ನೀರಿನ ಯೋಜನೆಗೆ ಅನುಮೋದನೆ

ನಿವೇಶನಗಳ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 6:26 IST
Last Updated 4 ಜನವರಿ 2018, 6:26 IST
ಇಂಡಿ ಪುರಸಭೆ ಆವರಣದಲ್ಲಿ ಬುಧವಾರ ನಡೆದ ನಿವೇಶನಗಳ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಯಶವಂತ್ರಾಯಗೌಡ ಪಾಟೀಲ ಮಾತನಾಡಿದರು
ಇಂಡಿ ಪುರಸಭೆ ಆವರಣದಲ್ಲಿ ಬುಧವಾರ ನಡೆದ ನಿವೇಶನಗಳ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಯಶವಂತ್ರಾಯಗೌಡ ಪಾಟೀಲ ಮಾತನಾಡಿದರು   

ಇಂಡಿ: ಪಟ್ಟಣಕ್ಕೆ ಧೂಳಖೇಡ- ಗ್ರಾಮದ ಬಳಿ ಭೀಮಾನದಿಯಿಂದ ಕುಡಿಯುವ ನೀರು ಸರಬರಾಜು ಮಾಡಲು ₹ 91 ಕೋಟಿ ಯೋಜನೆಗೆ ರಾಜ್ಯ ಸರ್ಕಾರದ ಕ್ಯಾಬಿನೆಟ್ ಅನುಮೋದನೆ ನೀಡಿದ್ದು, ಶೀಘ್ರವೇ ಕಾಮಗಾರಿ ಆರಂಭಿಸುವುದಾಗಿ ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಿವೇಶನಗಳ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ಕುಡಿಯುವ ನೀರಿನ ಯೋಜನೆಯಿಂದ ಪಟ್ಟಣದ 8100 ಮನೆಗಳಿಗೆ 24*7 ನೀರು ಪೂರೈಕೆ ಮಾಡಲಾಗುವದು. ಇದರಿಂದ ಇದೀಗ ಜನತೆ ಅನುಭವಿಸುತ್ತಿರುವ ನೀರಿನ ತೊಂದರೆ ನಿವಾರಣೆಯಾಗಲಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಹಾಯ ಸಹಕಾರದಿಂದ ಪಟ್ಟಣದ ಅಭಿವೃದ್ದಿಗಾಗಿ ₹200 ಕೋಟಿ ಅನುದಾನ ಬಂದಿದ್ದರಿಂದ ಪಟ್ಟಟಣ ಅಭಿವೃದ್ದಿ ಪಥದತ್ತ ಸಾಗುತ್ತಿದೆ. ಇನ್ನೂ ಅನೇಕ ಅಭಿವೃದ್ದಿ ಕಾರ್ಯಗಳನ್ನು ಪುರಸಭೆ ಸಹಕಾರದಿಂದ ಕೈಗೆತ್ತಿಕೊಳ್ಳಲಾಗುವುದು ಎಂದ ಅವರು, ಬರುವ 2022 ರೊಳಗಾಗಿ ಪುರಸಭೆ, ನಗರಸಭೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ನಿವೇಶನಗಳಿಗಾಗಿ ಪಟ್ಟಣದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಒಟ್ಟು 680 ಅರ್ಜಿಗಳನ್ನು ಸಲ್ಲಿಸಿದ್ದರು. 186 ನಿವೇಶನ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ನಿವೇಶನ ನೀಡಲು ಕ್ರಮ ಜರುಗಿಸುವುದಾಗಿ ಎಂದು ಭರವಸೆ ನೀಡಿದರು.

ಇದೇ ವೇಳೆ ಅಂಬೇಡ್ಕರ್ ಆವಾಸ ಯೋಜನೆಯಡಿ 179 ಎಸ್‌ಸಿ, 12 ಎಸ್‌ಟಿ ಫಲಾನುಭವಿಗಳ ಆಯ್ಕೆ ಮಾಡಲಾಯಿತು. ಅಂಗವಿಕಲರಿಗೆ 8 ತ್ರಿಚಕ್ರ ವಾಹನ ಹಾಗೂ 24.10 ಮತ್ತು 7.25 ಯೋಜನೆ ಅಡಿಯಲ್ಲಿ ವ್ಯಾಸಂಗ ಮಾಡುತ್ತಿರುವ 13 ವಿದ್ಯಾರ್ಥಿಗಳಿಗೆ ಶಾಸಕರು ಸಹಾಯಧನ ವಿತರಿಸಿದರು.

ಪುರಸಭೆ ಅದ್ಯಕ್ಷ ಶ್ರೀಕಾಂತ ಕುಡಿಗನೂರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರುಕ್ಮುದ್ದಿನ ತದ್ದೇವಾಡಿ, ತಹಶೀಲ್ದಾರ ಸಂತೋಷ ಮ್ಯಾಗೇರಿ, ದೇವೇಂದ್ರ ಕುಂಬಾರ, ಅಸ್ಲಮ್ ಕಡಣಿ, ಸಿದ್ದು ಡಂಗಾ, ಜೈನುದ್ದಿನ್ ಬಾಗವಾನ, ಮಚ್ಚೇಂದ್ರ ಕದಮ್, ಪ್ರಶಾಂತ ಕಾಳೆ, ಇಲಿಯಾಸ ಬೋರಾಮಣಿ, ಎಸ್.ಡಿ.ನಾಯಕ. ಧನಪಾಲ, ಅರ್ಜುನ ಪಾರ್ಸಿ ಉಪಸ್ಥಿತರಿದ್ದರು.

ಪ್ರವೀಣ ಸುಣಗಾರ ನಿರೂಪಿಸಿದರು. ಬಸವರಾಜ ಲಾಳಸಂಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.