ADVERTISEMENT

ತೊಗರಿ, ಕಡಲೆ ಬೆಳೆಗೆ ಬೆಂಬಲ ಬೆಲೆ ನೀಡಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 5:53 IST
Last Updated 10 ಜನವರಿ 2018, 5:53 IST

ವಿಜಯಪುರ: ತೊಗರಿ, ಕಡಲೆ ಬೆಳೆಗೆ ಬೆಂಬಲ ಬೆಲೆ ನೀಡಲು ಹಾಗೂ ರೈತರ ಜಮೀನುಗಳ ದಾರಿ ಸಮಸ್ಯೆ ನಿವಾರಿಸಲು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘ ಜಿಲ್ಲಾ ಘಟಕ ವತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷ ಕೂಡ ರೈತರು ಹೆಚ್ಚಿನ ಪ್ರಮಾಣದಲ್ಲಿ ತೊಗರಿ, ಕಡಲೆ ಬೆಳೆ ಬಿತ್ತನೆ ಮಾಡಿದ್ದಾರೆ. ಆದರೆ, ಶೇ 75 ರಷ್ಟು ತೊಗರಿ ಬೆಳೆ ನಂಜಾಣು ರೋಗದಿಂದ ಹಾನಿಯಾಗಿರುತ್ತದೆ. ಬೆಳೆದ ಅಲ್ಪಸ್ವಲ್ಪ ಬೆಳೆಗಳನ್ನು ರೈತರು ಕಠಾವು ಮಾಡಿದ್ದಾರೆ. ಅದಕ್ಕೂ ಸರಿಯಾದ ವೈಜ್ಞಾನಿಕ ಬೆಲೆ ಇಲ್ಲ. ಹೀಗಾಗಿ ಪ್ರತಿ ಕ್ವಿಂಟಲ್ ತೊಗರಿಗೆ ₹ 8,000 ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಜಿಪಿಎಸ್ ಮಾಡಲಾಗಿದ್ದು, ಹಾಳಾದ ತೊಗರಿಯ ನಿಜ ಸ್ಥಿತಿಯನ್ನು ಸರ್ಕಾರ ಗಮನಿಸಿ ಹಾಳಾದ ತೊಗರಿ ಬೆಳೆಗೆ ಸೂಕ್ತ ಪರಿಹಾರ ಒದಗಿಸಬೇಕು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಂದರಂತೆ ಖರೀದಿ ಕೇಂದ್ರ ಪ್ರಾರಂಭಿಸಬೇಕು. ರೈತರು ಬೆಳೆದ ಸಂಪೂರ್ಣ ತೊಗರಿಯನ್ನು ಖರೀದಿಸಬೇಕು ಎಂದರು.

ADVERTISEMENT

ಹಲವು ವರ್ಷಗಳಿಂದ ರೈತರು ತಮ್ಮ ಜಮೀನುಗಳಿಗೆ ದಾರಿ ಇಲ್ಲದೇ ತೀವ್ರ ತೊಂದರೆ ಅನುಭವಿಸುತ್ತಿರುವ ಸಮಸ್ಯೆಗೆ ಅಂತ್ಯ ಹಾಡಲು ಆಯಾ ತಾಲ್ಲೂಕಿನ ತಹಶೀಲ್ದಾರ್‌ಗಳಿಗೆ ಅಧಿಕಾರ ನೀಡಬೇಕೆಂದು ಒತ್ತಾಯಿಸಿ ವಿವಿಧ ಹಂತದ ಚಳುವಳಿ ಮಾಡಿದರೂ ಪ್ರಯೋಜನವಾಗಿಲ್ಲ. ಈಗಲಾದರೂ ಎಚ್ಚೆತ್ತುಕೊಂಡು ಸರ್ಕಾರ ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿ ಮಾಡಿದರು.

ನಗರ ಘಟಕ ಅಧ್ಯಕ್ಷ ಧೋಂಡಿಬಾ ಪವಾರ ಮಾತನಾಡಿ, ರೈತರ ಪಂಪಸೆಟ್‌ಗಳಿಗೆ ವಿದ್ಯುತ ಸಂಪರ್ಕ ಪಡೆದುಕೊಳ್ಳಲು ಆರ್ಆರ್ ನಂಂಬರ್‌ಗಾಗಿ ರೈತರಿಂದ ಆರಂಭದಲ್ಲಿ 1 ಎಚ್‌ಪಿಗೆ ₹ 300 ಪಾವತಿ ಮಾಡಿಕೊಳ್ಳುತ್ತಿದ್ದರು. ಕೆಲ ದಿನಗಳ ನಂತರ ₹ 500 ನಿಗದಿಪಡಿಸಿದರು. ನಂತರ ದಿನಗಳಲ್ಲಿ ₹ 900 ಗಳಿಗೆ ಹೆಚ್ಚಿಸಲಾಯಿತು. ಇದೀಗ ಇಂಪ್ರ್ಯುಮೆಂಟ್ ಮೊತ್ತ ಎಂದು ₹12, 000 ತುಂಬಿಸಿಕೊಳ್ಳಲಾಗುತ್ತಿದೆ. ಎಲ್ಲವೂ ಸೇರಿ ₹ 22, 000 ವರೆಗೆ ರೈತರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಮೊದಲೇ ಭೀಕರ ಬರದಿಂದ ಸಂಕಷ್ಟಕ್ಕೆ ಸೀಲುಕಿದ ಅನ್ನದಾತರಿಗೆ, ಇಷ್ಟೊಂದು ದೊಡ್ಡ ಮೊತ್ತ ತುಂಬಲು ಸಾಧ್ಯವಿಲ್ಲ. ಹೀಗಾಗಿ ಮೊದಲಿನಂತೆ ₹ 900 ಹಣ ಪಾವತಿಸಿಕೊಂಡು ಆರ್‌ಆರ್‌ ನಂಬರ್ ಒದಗಿಸಬೇಕು ಎಂದು ಒತ್ತಾಯಿಸಿದರು.

ಡಾ.ಎಂ.ರಾಮಚಂದ್ರ ಬೊಮ್ಮನ ಜ್ಯೋತಿ ಮಾತನಾಡಿ, ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣ ವಿರೋಧಿಸಿ ನಡೆದ ಹೋರಾಟದ ವೇಳೆ ನಡೆದ ಗೋಲಿಬಾರ್ ಪ್ರಕರಣದಲ್ಲಿ 290ಕ್ಕೂ ಹೆಚ್ಚು ರೈತರ ಮೇಲೆ ಹಾಗೂ ವಿದ್ಯುತ್ ಸರಬರಾಜು ಮಾಡಲು ಟವರ್ ಹಾಕುವುದನ್ನು ವಿರೋಧಿಸಿ ನಡೆದ ಹೋರಟ ವೇಳೆ 5 ರೈತರ ಮೇಲೆ ಹಾಕಿದ ಕ್ರಿಮಿನಲ್ ಮೊಕದ್ದಮೆಗಳನ್ನು ಕೂಡಲೇ ಪಡೆದುಕೊಳ್ಳಬೇಕು. ಇಲ್ಲದಿದ್ದರೇ ಮುಖ್ಯಮಂತ್ರಿ ನಿವಾಸದ ಎದುರು ಉಪವಾಸ ಸತ್ಯಾಗ್ರಹ ಆರಂಭಿಸ
ಲಾಗುವುದು ಎಂದು ಎಚ್ಚರಿಸಿದರು.

ಸಿದ್ರಾಯ ಜಂಗಮಶೆಟ್ಟಿ, ಸದಾಶಿವ ಬರಟಗಿ, ರಾಜಶೇಖರ ಗುಜ್ಜರ, ಅವ್ವಪ್ಪ ತಳ್ಳೊಳ್ಳಿ, ಸಿದ್ದು ಪೂಜಾರಿ, ಗೊಲ್ಲಾಳಪ್ಪ ಚೌಧರಿ, ಗಿರೀಶ ಹರೇಮಠ, ಮಹಾದೇವ ಬಡ್ಡೂರ, ದಯಾನಂದ ಹಿಪ್ಪರಗಿ ಉಪಸ್ಥಿತರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.