ADVERTISEMENT

‘ಕೈ’ ಬಲವರ್ಧನೆಗೆ ವೇಣು ಟಾನಿಕ್!

ಡಿ.ಬಿ, ನಾಗರಾಜ
Published 12 ಜನವರಿ 2018, 7:10 IST
Last Updated 12 ಜನವರಿ 2018, 7:10 IST
ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಕಚೇರಿ
ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಕಚೇರಿ   

ವಿಜಯಪುರ: ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಲು, ಕೆಪಿಸಿಸಿಯ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ರಣತಂತ್ರ ರೂಪಿಸಿದ್ದಾರೆ.

ಬುಧವಾರ ತಡರಾತ್ರಿ 11.30ರಿಂದ 2ಗಂಟೆಯವರೆಗೆ ಪ್ರವಾಸಿ ಮಂದಿರದಲ್ಲಿ ಶಾಸಕರ ಜತೆ ಮಾತುಕತೆ ನಡೆಸಿದ ವೇಣು, ‘ನಿಮ್ಮೊಳಗಿನ ಭಿನ್ನಾಭಿಪ್ರಾಯ, ಶೀತಲ ಸಮರಕ್ಕೆ ಬ್ರೇಕ್‌ ಹಾಕಿ. ರಣರಂಗ ಸಿದ್ಧಗೊಂಡಿದೆ. ಇಡೀ ದೇಶದ ಗಮನ ರಾಜ್ಯದತ್ತ ಇದೆ. ಕಾಂಗ್ರೆಸ್‌ನ ಅಳಿವು–ಉಳಿವನ್ನು ಈ ಚುನಾವಣೆ ನಿರ್ಧರಿಸಲಿದೆ. ವಿಜಯವೇ ನಮ್ಮ ಏಕತೆಯ ಮಂತ್ರವಾಗಬೇಕು. ಈ ನಿಟ್ಟಿನಲ್ಲಿ ಆರು ಶಾಸಕರು ಒಬ್ಬರಿಗೊಬ್ಬರು ಕಾಲೆಳೆಯದೆ, ಪರಸ್ಪರ ಸಾಥ್ ನೀಡಿ, ಕಾಂಗ್ರೆಸ್‌ನ ವಿಜಯ ದುಂದುಭಿ ಮೊಳಗುವಂತೆ ನೋಡಿಕೊಳ್ಳಿ ಎಂದರು’ ಎನ್ನಲಾಗಿದೆ.

‘ವಿಜಯಪುರ, ಬಬಲೇಶ್ವರ, ನಾಗಠಾಣ, ಇಂಡಿ, ಬಸವನಬಾಗೇವಾಡಿ, ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಾಲಿ ಶಾಸಕರಿಗೆ ತಮ್ಮ ಮತಕ್ಷೇತ್ರ ವ್ಯಾಪ್ತಿಯಲ್ಲಿ ಸಂಘಟನೆ ಬಲಪಡಿಸುವ ಜತೆ ಜತೆಗೆ, ಚುನಾವಣಾ ಸಿದ್ಧತೆಯನ್ನು ಬಿರುಸುಗೊಳಿಸಿ ಎಂದು ಸೂಚಿಸಿದರು’ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ADVERTISEMENT

‘ದೇವರಹಿಪ್ಪರಗಿಯ ಕಾಂಗ್ರೆಸ್ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಜೆಡಿಎಸ್ ತೆಕ್ಕೆಗೆ ಸೇರಿದ್ದು, ಕಾಂಗ್ರೆಸ್‌ನ ಭದ್ರಕೋಟೆಯಲ್ಲಿ ಮತ್ತೆ ‘ಕೈ’ ಪಡೆಯ ವಿಜಯದ ಕಹಳೆ ಮೊಳಗಿಸುವ ಜವಾಬ್ದಾರಿಯನ್ನು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ, ರಾಜ್ಯ ಸರ್ಕಾರದ ನವದೆಹಲಿಯ ವಿಶೇಷ ಪ್ರತಿನಿಧಿ ಸಿ.ಎಸ್‌.ನಾಡಗೌಡ ಹೆಗಲಿಗೆ ಹೊರಿಸಿದ್ದಾರೆ’ ಎಂದು ಇವೇ ಮೂಲಗಳು ಹೇಳಿವೆ.

‘‘ಕೈ’ನಿಂದ ಜಾರಿ ದಶಕ ಗತಿಸಿರುವ ಸಿಂದಗಿ ವಿಧಾನಸಭಾ ಕ್ಷೇತ್ರವನ್ನು ಮರಳಿ ತನ್ನ ‘ಹಸ್ತ’ಕ್ಕೆ ವಶಪಡಿಸಿಕೊಳ್ಳಲು ವೇಣುಗೋಪಾಲ್‌ ತಂತ್ರಗಾರಿಕೆ ರೂಪಿಸಿದ್ದಾರೆ. ಪ್ರಸ್ತುತ ಸಿಂದಗಿಯಲ್ಲಿ ಕಾಂಗ್ರೆಸ್‌ ಮೂರನೇ ಸ್ಥಾನದಲ್ಲಿದೆ. ಈ ಹಿಂದಿನ ಚುನಾವಣೆಗಳಲ್ಲೂ ಮೂರನೇ ಸ್ಥಾನದಲ್ಲಿರುವುದು ಉಸ್ತುವಾರಿಯ ಚಿಂತೆ ಹೆಚ್ಚಿಸಿದೆ’ ಎಂದು ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಹೇಳುತ್ತಾರೆ.

‘ದಶಕದಿಂದ ಬಿಜೆಪಿಯ ಭದ್ರಕೋಟೆ ಎನಿಸಿರುವ ಸಿಂದಗಿಯನ್ನು ಕಾಂಗ್ರೆಸ್‌ ಕ್ಷೇತ್ರವನ್ನಾಗಿ ರೂಪಿಸಲು, ಪ್ರಬಲ ಪೈಪೋಟಿ ನೀಡುತ್ತಿರುವ ಜೆಡಿಎಸ್‌ನ ಎಂ.ಸಿ.ಮನಗೂಳಿ ಹಿಂದಿಕ್ಕಿ, ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹಿರಿಯ ಶಾಸಕ ಶಿವಾನಂದ ಎಸ್‌.ಪಾಟೀಲ, ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲಗೆ ವಹಿಸಿದರು’ ಎಂದು ಸಭೆಯಲ್ಲಿ ಭಾಗಿಯಾಗಿದ್ದ ಪ್ರಮುಖರೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ನಾಗಠಾಣ ಶಾಸಕ ಪ್ರೊ.ರಾಜು ಆಲಗೂರ, ವಿಜಯಪುರ ನಗರ ಶಾಸಕ ಡಾ.ಮಕ್ಬೂಲ್‌ ಎಸ್‌.ಬಾಗವಾನ ಅವರಿಗೆ ಕ್ರಮವಾಗಿ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದಲಿತರು, ಅಲ್ಪಸಂಖ್ಯಾತರನ್ನು ಸಂಘಟಿಸಿ ಪಕ್ಷಕ್ಕೆ ಮತ ಬರುವಂತೆ ನೋಡಿಕೊಳ್ಳುವಂತೆ ಸೂಚಿಸಿದರು’ ಎಂದೂ ಹೇಳಲಾಗಿದೆ.

‘ಯಾವುದೇ ಕಾರಣಕ್ಕೂ ದಲಿತರು, ಅಲ್ಪಸಂಖ್ಯಾತರ ಮತ ವಿಭಜನೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಈ ಇಬ್ಬರೂ ಶಾಸಕರಿಗೆ ಕಟ್ಟುನಿಟ್ಟಾಗಿ ಸೂಚಿಸಿದ ವೇಣುಗೋಪಾಲ್‌, ನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಚಿವ ಎಂ.ಬಿ.ಪಾಟೀಲ, ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ತಮ್ಮದೇ ವರ್ಚಸ್ಸು ಹೊಂದಿದ್ದು, ವಿಜಯಪುರದಲ್ಲಿ ಗೆಲುವಿಗೆ ಶ್ರಮಿಸಬೇಕು ಎಂಬುದಾಗಿ ಸೂಚಿಸಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಕಾಂಗ್ರಸ್‌ ಮುಖಂಡರೊಬ್ಬರು ತಿಳಿಸಿದ್ದಾರೆ.

ಉಳಿದಂತೆ ಎಲ್ಲ ಜಾತಿಯ, ಧರ್ಮದ ಪ್ರಮುಖರಿಗೆ ಪಕ್ಷದಲ್ಲಿ ಆದ್ಯತೆ ನೀಡಿ. ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಲು ಅಗತ್ಯ ತಂತ್ರಗಾರಿಕೆ ರೂಪಿಸಿ. ಯಾವ ವಿಷಯದಲ್ಲೂ ಅಪಸ್ವರ ಬೇಕಿಲ್ಲ. ನಮ್ಮ ಗುರಿ ಗೆಲುವಷ್ಟೇ ಆಗಿರಬೇಕು’ ಎಂದು ಬರೋಬ್ಬರಿ ಎರಡೂವರೆ ತಾಸು ನಡೆದ ಸಭೆಯಲ್ಲಿ ಶಾಸಕರು, ಜಿಲ್ಲಾ ಘಟಕದ ಅಧ್ಯಕ್ಷರಿಗೆ ವೇಣುಗೋಪಾಲ್‌ ಸೂಚಿಸಿದರು ಎಂದು ಅವರು ಹೇಳಿದರು

ಹೈಕಮಾಂಡ್‌ ನಿರ್ಧಾರವೇ ಅಂತಿಮ

ಸಭೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರ ಬದಲಾವಣೆ ಕುರಿತ ವಿಷಯವೂ ಚರ್ಚೆಗೀಡಾಯಿತು. ಆರು ಶಾಸಕರು ಈ ವಿಷಯದಲ್ಲಿ ‘ನಾವು ಹಸ್ತಕ್ಷೇಪ ನಡೆಸಲ್ಲ. ಚುನಾವಣಾ ಹೊಸ್ತಿಲಲ್ಲಿ ಹೈಕಮಾಂಡ್‌ ತೀರ್ಮಾನವೇ ನಮ್ಮ ನಿರ್ಧಾರ’ ಎಂದು ಉಸ್ತುವಾರಿ ಸಮ್ಮುಖ ತಿಳಿಸಿದರು ಎನ್ನಲಾಗಿದೆ.

ಜಿಲ್ಲಾ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಮುಖಂಡರ ನಿಯೋಗ ವೇಣುಗೋಪಾಲ್‌ ಭೇಟಿ ಮಾಡಿ, ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನವನ್ನು ಅಲ್ಪಸಂಖ್ಯಾತ ಮುಖಂಡರೊಬ್ಬರಿಗೆ ನೀಡಬೇಕು ಎಂದು ಗುರುವಾರ ಬೆಳಿಗ್ಗೆ ಮನವಿ ಸಲ್ಲಿಸಿತು. ಜಿಲ್ಲಾ ಘಟಕದ ಉಪಾಧ್ಯಕ್ಷ ಎಂ.ಎಂ.ಸುತಾರ ನಗರ ಶಾಸಕ ಡಾ.ಮಕ್ಬೂಲ್‌ ಎಸ್‌.ಬಾಗವಾನ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತಪಡಿಸಿ, ಮುಂಬರುವ ಚುನಾವಣೆಯಲ್ಲಿ ಬೇರೆಯವರಿಗೆ ಟಿಕೆಟ್‌ ನೀಡಬೇಕು ಎಂದು ಆಗ್ರಹಿಸಿದರು.

* * 

ಚುನಾವಣೆ ಸನ್ನಿಹಿತವಾಗಿದೆ. ಸಹಜವಾಗಿ ಆಕಾಂಕ್ಷಿಗಳು ಪ್ರಮುಖರು ಜಿಲ್ಲೆಗೆ ಬಂದಾಗ ಟಿಕೆಟ್‌ ಕೇಳುತ್ತಾರೆ. ಪಕ್ಷದೊಳಗೆ ಯಾವುದೇ ಅಪಸ್ವರವಿಲ್ಲ
ರವಿಗೌಡ ಪಾಟೀಲ ಧೂಳಖೇಡ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

ವೇಣು ದಿನಚರಿ

ಬುಧವಾರ ರಾತ್ರಿ 11ಕ್ಕೆ ವಿಜಯಪುರಕ್ಕೆ ಭೇಟಿ
ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ
11.30ರಿಂದ ಶಾಸಕರ ಸಭೆ
ತಡರಾತ್ರಿ 2ಕ್ಕೆ ಮುಕ್ತಾಯ
ಗುರುವಾರ ಮುಂಜಾನೆ ಗೋಳಗುಮ್ಮಟದಲ್ಲಿ ವಾಕಿಂಗ್
ಶಾಸಕರಾದ ಶಿವಾನಂದ ಪಾಟೀಲ, ರಾಜು ಆಲಗೂರ, ಬಾಗವಾನ ಜತೆ ಉಪಹಾರ
ಡಿಸಿಸಿ, ಬಿಸಿಸಿ, ಅಂಗ ಘಟಕಗಳ ಅಧ್ಯಕ್ಷರ ಜತೆ ಚರ್ಚೆ
11ರಿಂದ 1ರವರೆಗೆ ವಿಜಯಪುರ ಬೂತ್‌ ಸಮಿತಿ ಕಾರ್ಯಾಗಾರ
ಹೆಲಿಕಾಫ್ಟರ್‌ನಲ್ಲಿ ಮುದ್ದೇಬಿಹಾಳಕ್ಕೆ ಪಯಣ
ಮುದ್ದೇಬಿಹಾಳದ ಕಾರ್ಯಾಗಾರದಲ್ಲಿ ಭಾಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.