ADVERTISEMENT

‘ಕಾಯಕ ಸಮಾಜ ಬಂಡಾಯ ಏಳಲಿ’

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 7:11 IST
Last Updated 28 ಜನವರಿ 2018, 7:11 IST

ನಿಡಗುಂದಿ: ಕಾಯಕ ಮಾಡುವ ಎಲ್ಲ ಸಮುದಾಯಗಳು ಕೆಲವು ಭಾರಿ ಬಂಡಾಯ ಏಳದಿದ್ದರೆ. ಸಂಪೂರ್ಣ ತುಳಿತಕ್ಕೊಳಗಾಗುತ್ತವೆ. ಆದ್ದರಿಂದ ಸಮಯಕ್ಕೆ ತಕ್ಕಂತೆ ನಮ್ಮತನವನ್ನು ತೋರಿಸುವಂತಾಗಬೇಕು ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಪಿ.ನಂಜುಂಡಿ ಹೇಳಿದರು.

ಸಮೀಪದ ಇಟಗಿ ಗ್ರಾಮದಲ್ಲಿ ಜಗದ್ಗುರು ಮೌನೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಅವರು, ವಿಶ್ವಕರ್ಮ ಸಮಾಜಕ್ಕೆ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಹಲವಾರು ಭಾರಿ ನಾನೂ ಕೂಡಾ ರೆಬಲ್ ಆಗಿದ್ದೇನೆ. ಕಳೆದ ಹದಿನಾರು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದರೂ ಸಮಾಜಕ್ಕೆ ಮಾನ್ಯತೆ ದೊರಕಲಿಲ್ಲ ಎನ್ನುವ ಕಾರಣದಿಂದ ಪಕ್ಷವನ್ನು ತೊರೆದು ಕೂತಿದ್ದೆ ಆಗ ಮನೆಗೆ ಬಂದು ರಾಜ್ಯ ಘಟಕದ ಉಪಾಧ್ಯಕ್ಷ ಸ್ಥಾನ ಕೊಟ್ಟ ಬಿಜೆಪಿ ಪಕ್ಷವನ್ನು ಎಂದೂ ಮರೆಯಲಾರೆ ಎಂದರು.

ಬಂದ ಆರು ತಿಂಗಳಲ್ಲಿಯೇ ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ಸಿಕ್ಕಿತು, ಹದಿನಾರು ವರ್ಷ ದುಡಿದವರಿಗೆ ಪಕ್ಷ ಯಾವ ಮಾನ್ಯತೆಯೂ ನೀಡಲಿಲ್ಲ. ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ಕಾಂಗ್ರೆಸ್ ಪಕ್ಷ ಸಮಪಾಲೇ ನೀಡಲಿಲ್ಲ ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು. ಸಮಾಜದಲ್ಲಿ ರಾಜಕೀಯ ಪ್ರಜ್ಞೆ ಬೆಳೆಯದಿದ್ದರೆ ಎಲ್ಲರಿಂದ ವಂಚಿತವಾಗಬೇಕಾಗುತ್ತದೆ ಎನ್ನುವುದಕ್ಕೆ ವಿಶ್ವಕರ್ಮ ಸಮಾಜವೇ ನಿದರ್ಶನ. ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಅವರನ್ನು ಸಿಎಂ ಮಾಡುವ ಮೂಲಕ ಸಮಾಜವನ್ನು ನಿರ್ಲಕ್ಷಿಸಿದವರಿಗೆ ತಕ್ಕಪಾಠ ಕಲಿಸಬೇಕು ಎಂದರು.

ADVERTISEMENT

850 ವರ್ಷಗಳ ಹಿಂದೆ ಅಮರಶಿಲ್ಪ ಜಕಣಾಚಾರ್ಯ ಮಾಡಿದ ಕಲಾಕೃತಿಗಳನ್ನು ನೋಡಲು ಇಡೀ ಜಗತ್ತಿನ ಜನರು ಬರುತ್ತಾರೆ. ಆದರೆ, ಅಲ್ಲೊಂದು ಅವರ ಪ್ರತಿಮೆ ನಿರ್ಮಾಣ ಕೂಡಾ ಮಾಡಲಾಗಿಲ್ಲ ಎಂದರು.

ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಕಳೆದ ಹಲವಾರು ದಿನಗಳಿಂದ ನನಗೆ ಸಾಡೆಸಾತಿ ಇತ್ತು. ಈಗ ಅದು ದೂರಾಗಿದೆ. ಮುಂದಿನ ಹದಿನೈದು ದಿನಗಳಲ್ಲಿ, ಪಕ್ಷದಲ್ಲಿ ಯತ್ನಾಳ ಅವರನ್ನು ಸೇರಿಸಲ್ಲ ಎಂದವರಿಗೆ ಕೆಲವೇ ದಿನದಲ್ಲಿ ಉತ್ತರ ಸಿಗಲಿದೆ ಎಂದರು.

ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಮಾತನಾಡಿ, ಕಾಯಕ ಸಮಾಜಗಳು ಇನ್ನೂ ಕಷ್ಟದಲ್ಲಿ ಕಾಲ ಕಳೆಯುತ್ತಿವೆ. ಕೇವಲ ಮತಬ್ಯಾಂಕ್‌ಗಳಾಗಿ ಅವುಗಳನ್ನು ಬಳಸಿಕೊಳ್ಳಲಾಗುತ್ತಿದೆ ಎನ್ನುವ ನೋವು ನನ್ನಲ್ಲಿ ಇದೆ. ಅವುಗಳ ಪರಿಹಾರ ಹಾಗೂ ಹಕ್ಕನ್ನು ಪಡೆಯಲು ಸಂಘಟನೆ ಅತ್ಯವಶ್ಯವಾಗಿದೆ ಎಂದರು.

ಶಾಂತಗೌಡ ಪಾಟೀಲ, ಸೋಮನಗೌಡ ಪಾಟೀಲ, ಆರ್.ಎಸ್ ಪಾಟೀಲ ಕೂಚಬಾಳ ಮಾತನಾಡಿದರು. ಶಹಾಪುರದ ಕಾಳಹಸ್ತೇಂದ್ರ ಸ್ವಾಮೀಜಿ, ಇಟಗಿಯ ಗುರುಶಾಂತವೀರ ಸ್ವಾಮೀಜಿ, ಮಹೇಂದ್ರ ಸ್ವಾಮೀಜಿ, ಶಿವಾನಂದ ಅವಟಿ, ಬಸವರಾಜ ಕುಂಬಾರ, ವಿರುಪಾಕ್ಷಿ ಪತ್ತಾರ, ಗಂಗಾಧರ ಪತ್ತಾರ, ನಾರಾಯಣ ಮಾಯಾಚಾರಿ, ಪ್ರಹ್ಲಾದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.