ADVERTISEMENT

ರೈತರ ಸಾಲ ಮನ್ನಾಕ್ಕೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 7:25 IST
Last Updated 1 ಫೆಬ್ರುವರಿ 2018, 7:25 IST

ಇಂಡಿ: ರಾಜ್ಯದಲ್ಲಿ ಈ ಬಾರಿ ಜೆಡಿಎಸ್‌ ಸರ್ಕಾರ ಅಧಿಕಾರ ಬಂದರೆ 24 ಗಂಟೆಯಲ್ಲಿ ರೈತರು ಮಾಡಿರುವ ರಾಷ್ಟ್ರೀಕೃತ ಬ್ಯಾಂಕ್‌ ಮತ್ತು ಸಹಕಾರಿ ಸಂಘಗಳಲ್ಲಿನ ಸಾಲ ಮನ್ನಾ ಮಾಡ ಲಾಗುವುದು ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜೆಡಿಎಸ್ ಮತ್ತು ತಾಲ್ಲೂಕು ರೈತ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, 2018ರ ಚುನಾವಣೆ ರೈತರ ಭವಿಷ್ಯದ ಮೇಲೆ ನಿಂತಿದೆ. ಹೀಗಾಗಿ ರೈತರು ಮತ್ತು ಯುವಕರು ಅರ್ಥ ಮಾಡಿಕೊಂಡು ಚುನಾವಣೆ ಎದುರಿಸಬೇಕು ಎಂದರು.

ಬಿಜೆಪಿಯವರು ಸಾಧನಾ ಸಮಾವೇಶದಲ್ಲಿ ರಾಜ್ಯದ ಸಮಸ್ಯೆಗಳ, ಯುವ ಪೀಳಿಗೆಗೆ ಉದ್ಯೋಗ ನೀಡುವ ಬಗ್ಗೆ ಎಳ್ಳಷ್ಟು ಚಿಂತನೆ ಮಾಡಿಲ್ಲ. ಬದಲಾಗಿ ಕಿತ್ತಾಡಿಕೊಂಡಿದ್ದೆ ಕಿತ್ತಾಡಿಕೊಂಡಿದ್ದೆ ಸಾಧನೆ. ನಾಡಿನ ಕುರಿತು ಚಿಂತನೆ ನಡೆಸುವುದನ್ನು ಬಿಟ್ಟು ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಸಿದ್ದರಾಮಯ್ಯನವರನ್ನು ಜೈಲಿಗೆ ಕಳಿಸುತ್ತೇನೆ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ. ಇಂತಹ ಭಾಷಗಣಗಳು ಬೇಕಿಲ್ಲ. ನಮಗೆ ಅಭಿವೃದ್ಧಿ ಬೇಕಾಗಿದೆ. ಬಡವರ ಸಂಕಷ್ಟಗಳನ್ನು ಪರಿಹರಿಸುವದು ಬೇಕಾಗಿದೆ ಎಂದು ಹೇಳಿದರು.

ADVERTISEMENT

ನಾಡಿಗೆ ಅನ್ನ ಕೊಡುವ ರೈತ ಸಂಕಷ್ಟದಲ್ಲಿದ್ದಾನೆ. 3500 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರನ್ನು ನಂಬಿದ್ದ ತಂದೆ, ತಾಯಿ, ಹೆಂಡತಿ, ಮಕ್ಕಳು ಅನಾಥರಾಗಿದ್ದಾರೆ. ರಾಜ್ಯದಲ್ಲಿ ಅತಿವೃಷ್ಟಿ ಅನಾವೃಷ್ಟಿಗಳಿಂದ ₹ 56000 ಕೋಟಿ ನಷ್ಟವಾಗಿದೆ. ಇದರಿಂದ ರೈತರಿಗೆ ತಾವು ಮಾಡಿರುವ ಸಾಲ ತೀರಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.

ಪ್ರಧಾನಿ ನರೇಂದ್ರ ಮೋದಿಯವರು ಚುನಾವಣೆ ಪೂರ್ವದಲ್ಲಿ ಎರಡು ಕೋಟಿ ಯುವಕರಿಗೆ ಉದ್ಯೋಗ ಸೃಷ್ಠಿ ಮಾಡುವದಾಗಿ ಭರವಸೆ ನೀಡಿದ್ದರು. ಆದರೆ. ಎರಡು ಲಕ್ಷ ಯುವಕರಿಗೂ ಉದ್ಯೋಗ ನೀಡಲು ವಿಫಲರಾಗಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದ ವಿದ್ಯಾವಂತ ನಿರುದ್ಯೋಗ ಯುವಕರಿಗೆ ಅವರವರ ಗ್ರಾಮಗಳಲ್ಲಿಯೆ ಅರಣ್ಯ ಬೆಳೆಸುವ ಉದ್ಯೋಗ ನೀಡಿ ಪ್ರತಿ ತಿಂಗಳು ₹ 5 ಸಾವಿರ ಸಂಬಳ ನೀಡುವ ಯೋಜನೆಯಿದೆ. 70 ವರ್ಷ ದಾಟಿದ ವೃದ್ಧರಿಗೆ ಪ್ರತಿ ತಿಂಗಳು ₹ 6 ಸಾವಿರ ಮಾಶಾಸನ ನೀಡಲಾಗುವುದು. ಪ್ರತಿ ತಿಂಗಳು ವಿವಿಧ ಜಿಲ್ಲೆಗಳಿಂದ ರೈತರನ್ನು ವಿಧಾನ ಸೌಧಕ್ಕೆ ಕರೆಸಿ ಅವರ ಸಮಸ್ಯೆಗಳನ್ನು ಆಲಿಸುವ ವಿನೂತನ ಪದ್ದತಿ ಜಾರಿಗೆ ತರುತ್ತೇನೆ ಎಂದು ಭರವಸೆ ನೀಡಿದರು.

ಮತಕ್ಷೇತ್ರದಲ್ಲಿ ಕೆಲಸ ಮಾಡಲು ಕಳೆದ ಮೂರು ವರ್ಷಗಳ ಹಿಂದೆ ಬಿ.ಡಿ.ಪಾಟೀಲರಿಗೆ ತಿಳಿಸಿದ್ದೇನೆ. ಅವರು ಆರ್ಥಿಕವಾಗಿ ಬಡವರು, ಆದರೆ, ಹೃದಯ ಶ್ರೀಮಂತಿಕೆ ಇದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಿಸಿ, ನನ್ನ ಕೈ ಬಲಪಡಿಸಬೇಕೆಂದು ಮನವಿ ಮಾಡಿದರು.

ಮುಖಂಡ ಎಂ.ಆರ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ಸಿ.ಮನಗೂಳಿ, ರಾಜ್ಯ ಜೆಡಿಎಸ್ ನಾಯಕ ನಾನಾಗೌಡ ಬಿರಾದಾರ, ಎಲ್‌.ಎಲ್‌.ಉಸ್ತಾದ, ದೇವಾನಂದ ಚವ್ಹಾಣ, ರೇಷ್ಮಾ ಪಡೇಕನೂರ ಉಪಸ್ಥಿತರಿದ್ದರು. ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಡಿ.ಪಾಟೀಲ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.