ವಿಜಯಪುರ: ತಂಬಾಕು ಮತ್ತು ಮಾದಕವಸ್ತು ಸೇವನೆ ತಡೆಯಲು ಎಲ್ಲರೂ ಜಂಟಿಯಾಗಿ ಹೋರಾಟ ನಡೆಸಬೇಕಿದೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಎಸ್. ಮುಧೋಳ ಹೇಳಿದರು.
ನಗರದ ಬಿಎಲ್‌ಡಿಇ ವಿವಿಯ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜಿನಲ್ಲಿ ಮಂಗಳವಾರ ತಂಬಾಕು ವ್ಯಸನ ಮುಕ್ತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ತಂಬಾಕು ವ್ಯಸನ ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಒಂದು ದೊಡ್ಡ ಜಾಲವಾಗಿ ಬೆಳೆದಿದೆ. ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ವೈದ್ಯಕೀಯ ಸಂಸ್ಥೆ ಈಗ ದೇಶದ ಪ್ರತಿಯೊಂದು ವೈದ್ಯಕೀಯ ಕಾಲೇಜುಗಳಲ್ಲಿ ತಂಬಾಕು ವ್ಯಸನ ಮುಕ್ತ ಕೇಂದ್ರ ತೆರೆಯಲು ನಿರ್ಧರಿಸಿವೆ ಎಂದರು.
ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದ ಒಪಿಡಿ ಸಂಖ್ಯೆ19ರಲ್ಲಿ ಪ್ರಾರಂಭವಾಗಿದ್ದು, ಇಲ್ಲಿ ಪರಿಣಿತ ಆಪ್ತ ಸಲಹಾಕಾರರು, ವೈದ್ಯರು ಲಭ್ಯರಿರುತ್ತಾರೆ. ವ್ಯಸನ ತಡೆಗಟ್ಟಲು ಅಗತ್ಯವಿರುವ ತಪಾಸಣೆ ಪರೀಕ್ಷೆಗಳು, ಔಷಧೋಪಚಾರಗಳು ದೊರಕುತ್ತವೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಾಜೇಶ ಹೊನ್ನುಟಗಿ, ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಸಂತೋಷ ರಾಮದುರ್ಗ, ಡಾ.ಎಸ್.ಪಿ. ಚೌಕಿಮಠ, ಡಾ.ಕಳಸಗೋಂಡ, ಡಾ.ಗೌತಮಿ, ಶ್ವಾಸಕೋಶಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೀರ್ತಿವರ್ಧನ ಕುಲಕರ್ಣಿ, ಡಾ.ಶ್ರೀಶೈಲ ಅಂಜುಟಗಿ, ಸಮುದಾಯ ಆರೋಗ್ಯ ವಿಭಾಗದ ಡಾ.ಸಂದೀಪ, ಡಾ.ಪೂಜಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.